ADVERTISEMENT

PV Web Exclusive: ಇವರ ವಿಳಾಸ ಕೇರ್‌ ಆಫ್‌ ಫುಟ್‌ಪಾತ್‌!

ಕೆ.ಓಂಕಾರ ಮೂರ್ತಿ
Published 21 ಸೆಪ್ಟೆಂಬರ್ 2020, 7:53 IST
Last Updated 21 ಸೆಪ್ಟೆಂಬರ್ 2020, 7:53 IST
ರಸ್ತೆ ಬದಿಯಲ್ಲೇ ಟೆಂಟ್‌ ಹಾಕಿಕೊಂಡು ಬದುಕು ಸಾಗಿಸುತ್ತಿರುವ ರಾಜಸ್ಥಾನ ಮೂಲದ ಕುಟುಂಬಗಳು
ರಸ್ತೆ ಬದಿಯಲ್ಲೇ ಟೆಂಟ್‌ ಹಾಕಿಕೊಂಡು ಬದುಕು ಸಾಗಿಸುತ್ತಿರುವ ರಾಜಸ್ಥಾನ ಮೂಲದ ಕುಟುಂಬಗಳು   

ಮೈಸೂರು: ಇವರಿಗೆ ಯಾವುದೇ ಕನಸುಗಳಿಲ್ಲ. ಹಣ ಕೂಡಿಡಬೇಕು, ಮನೆ ಕಟ್ಟಬೇಕು ಎಂಬ ಆಸೆಯೂ ಇಲ್ಲ. ಮಕ್ಕಳ ವಿದ್ಯಾಭ್ಯಾಸದ ಚಿಂತೆಯೂ ಇಲ್ಲ. ಮಕ್ಕಳಿಗೆ, ತಮಗೆ ಮೂರು ಹೊತ್ತಿನ ಊಟ ಹಾಗೂ ಬಟ್ಟೆ ಒದಗಿಸಿಕೊಳ್ಳುವ ಚಿಂತೆ ಹೊರತುಪಡಿಸಿ...

ಇವರದ್ದು 24x7 ರಸ್ತೆ ಬದಿಯ ಬದುಕು! ಇಲ್ಲೇ ಹುಟ್ಟಿ, ಇಲ್ಲೇ ಆಡಿ, ಇಲ್ಲೇ ಬೆಳೆದು ಮದುವೆಯಾದ ಇವರಿಗೆ ಈಗ ಮಕ್ಕಳಿದ್ದಾರೆ. ಕಾಲಚಕ್ರ ಹಾಗೇ ತಿರುಗುತ್ತಿದೆ.

ಇವರ ವಿಳಾಸ ಕೇರ್‌ ಆಫ್‌ ಫುಟ್‌ಪಾತ್‌!

ADVERTISEMENT

ಪಕ್ಕದಲ್ಲೇ ದೊಡ್ಡ ಮೋರಿ. ಸು‌ತ್ತಲೂ ಕಸದ ರಾಶಿ, ಬೀದಿ ‌ನಾಯಿಗಳ ಕಾಟ ಬೇರೆ, ಸನಿಹದಲ್ಲಿ ರಸ್ತೆ ಕಾಮಗಾರಿ, ಜೊತೆಗೆ ವಾಹನಗಳು ಎಬ್ಬಿಸುವ ಕೆಟ್ಟ ದೂಳು...

ಇದರ ಮಧ್ಯೆ ಕುಳಿತ್ತಿದ್ದ ತಾಯಿಯೊಬ್ಬಳು ತನ್ನ ಪುಟ್ಟ ಮಗುವಿಗೆ ಹಾಲುಣಿಸುತ್ತಿದ್ದಳು. ಮತ್ತೊಬ್ಬ ಮಹಿಳೆ ಚಪಾತಿ ಮಾಡಿ ತನ್ನ ಕಂದಮ್ಮಗೆ ತಿನ್ನಿಸುತ್ತಿದ್ದಳು. ಇನ್ನೊಬ್ಬ ಮಹಿಳೆ ಅಲ್ಲಿಯೇ ತನ್ನ ಮಗುವಿಗೆ ಸ್ನಾನ ಮಾಡಿಸುತ್ತಿದ್ದಳು. ಇನ್ನೊಂದು ಕಂದ ಸುಖನಿದ್ರೆಯಲ್ಲಿತ್ತು.

ಅರಮನೆ ನಗರಿ ಮೈಸೂರಿನ ಅಶೋಕ ವೃತ್ತದ ಬಳಿ ರಸ್ತೆ ಬದಿಯಲ್ಲಿ ಟೆಂಟ್‌ಗಳಲ್ಲಿ ಬದುಕುತ್ತಿರುವ ಈ ಕುಟುಂಬಗಳ ಮನಕಲುಕುವ ದೃಶ್ಯಗಳು ಇವು. ಹತ್ತಾರು ವರ್ಷಗಳಿಂದ ಈ ಸ್ಥಳವೇ ಈ ಕುಟುಂಬಗಳಿಗೆ ಸೂರು. ಅರ್ಥಾತ್‌ ಕನಸಿನ ನೆಲೆ!

ಪಕ್ಕದಲ್ಲೇ ದೊಡ್ಡ ಕಾಲೇಜು, ಸಂಗೀತ ವಿಶ್ವವಿದ್ಯಾಲಯ, ರಾಷ್ಟ್ರೀಯ ಬ್ಯಾಂಕುಗಳು, ದೇಗುಲ, ಕಾನ್ವೆಂಟು, ಕಾರುಗಳ ಷೋರೂಂ, ಕನ್ವೆನ್ಷನ್‌ ಹಾಲ್‌, ಐಷಾರಾಮಿ ಬಂಗಲೆಗಳಿವೆ. ಆದರೆ, ಟೆಂಟ್‌ನೊಳಗೆ ಬದುಕುತ್ತಿರುವ ಇವರ ಲೋಕವೇ ಬೇರೆ. ಈ ಜಾಗವೇ ಇವರ ಪ್ರಪಂಚ. ಜೀವನಾಧಾರವಾದ ಮಣ್ಣಿನ ವಿಗ್ರಹ ತಯಾರಿಕೆ, ಮಾರಾಟವೇ ಇವರ ಸರ್ವಸ್ವ.

ಇವರೆಲ್ಲಾ ರಾಜಸ್ಥಾನದಿಂದ ಬಂದವರು. ಕೂಲಿ ಅರಸಿ ಮೈಸೂರಿಗೆ ಬಂದು 20 ವರ್ಷಗಳು ಕಳೆದಿವೆಯಂತೆ.

‘ನಮ್ಮ ಪೋಷಕರು ರಾಜಸ್ಥಾನದ ಜೈಪುರದಲ್ಲಿ ವಾಸವಿದ್ದರು. ಅಲ್ಲಿಯೂ ಮನೆ ಇಲ್ಲದ ಕಾರಣ ನಾವೆಲ್ಲಾ ಶೆಡ್‌ ನಿರ್ಮಿಸಿಕೊಂಡು ವಾಸಿಸುತ್ತಿದ್ದವು. ಒಂದು ದಿನ ಶೆಡ್‌ಗಳನ್ನೆಲ್ಲಾ ಒಡೆದು ಹಾಕಿ ನಮ್ಮನ್ನು ಅಲ್ಲಿಂದ ಓಡಿಸಿದರು. ದುಡಿಯೋಣವೆಂದರೆ ಕೂಲಿ ನೀಡುತ್ತಿರಲಿಲ್ಲ. ರೇಷನ್‌ ಕಾರ್ಡ್‌ ಕೂಡ ಸಿಕ್ಕಿಲ್ಲ. ಹೀಗಾಗಿ, ಆ ನಗರ ತೊರೆದು ರೈಲು ಹತ್ತಿ ಮೈಸೂರು ಸೇರಿಕೊಂಡೆವು’ ಎಂದು ಹೇಳುತ್ತಾರೆ ಶರದ್‌.

ಸುಮಾರು ಐದಾರು ಕುಟುಂಬಗಳು ಇಲ್ಲಿ ನೆಲೆಸಿವೆ. ಕೆಲವರು ಮನೆಗೆಲಸ, ಗಾರೆ, ರಸ್ತೆ ಕಾಮಗಾರಿ, ಪೇಂಟಿಂಗ್‌ ಕೆಲಸಕ್ಕೆ ಹೋಗುತ್ತಾರೆ. ಕೆಲವರು ಇಲ್ಲೇ ಗೊಂಬೆ ಮಾಡುತ್ತಾರೆ. ಮಣ್ಣಿನ ವಿವಿಧ ವಿಗ್ರಹಗಳು, ಮೂರ್ತಿಗಳನ್ನು ತಯಾರಿಸಿ ಮಾರಾಟ ಮಾಡುತ್ತಾರೆ. ಬೆಡ್‌ಶೀಟ್‌, ಆಲಂಕಾರಿಕ ವಸ್ತುಗಳನ್ನು ಮಾರಿ ಬದುಕು ಮುನ್ನಡೆಸುತ್ತಿದ್ದಾರೆ.

ಚಳಿ ಹಾಗೂ ಮಳೆಗಾಲದಲ್ಲಿ ಇವರ ಬದುಕು ಯಾತನಮಯ. ಜೋರು ಮಳೆಯಾದಾಗ ಚರಂಡಿ ನೀರು ಇವರ ಟೆಂಟ್‌ನೊಳಗೆ ನುಗ್ಗುತ್ತದೆ. ಸೊಳ್ಳೆಕಾಟ ಬೇರೆ. ‘ಮಳೆಗಾಲದಲ್ಲಿ ಪ್ಲಾಸ್ಟಿಕ್‌ ಚೀಲವನ್ನು ಮೈಗೆ ಸುತ್ತಿಕೊಂಡು ಮಲಗುತ್ತೇವೆ. ಮಕ್ಕಳಿಗೂ ಪ್ಲಾಸ್ಟಿಕ್‌ ಸುತ್ತುತ್ತೇವೆ’ ಎನ್ನುತ್ತಾರೆ.

ಇಲ್ಲಿಯೂ ಇವರಿಗೆ ಬೆದರಿಕೆ ತಪ್ಪಿಲ್ಲ. ‘ಕಳ್ಳರು ಎಂದು ಕೆಲವರು ನಮ್ಮನ್ನು ಮೂದಲಿಸುತ್ತಾರೆ. ಪೊಲೀಸರು ಕೂಡ ಹೆದರಿಸುತ್ತಿರುತ್ತಾರೆ’ ಎಂದು ತಮ್ಮ ಸಂಕಷ್ಟವನ್ನು ಹೇಳಿಕೊಳ್ಳುತ್ತಾರೆ.

ಇವರ ಮಕ್ಕಳ ಪರಿಸ್ಥಿತಿ ಅಧೋಗತಿ. ಸರಿಯಾದ ಬಟ್ಟೆಯ ಮಾತು ಬಿಟ್ಟುಬಿಡಿ, ತಿನ್ನಲು ಸರಿಯಾಗಿ ಆಹಾರ ಕೂಡ ಇಲ್ಲ. ಶುದ್ಧ ನೀರೂ ಇಲ್ಲ. ಮೈತುಂಬಾ ಸೊಳ್ಳೆ ಕಚ್ಚಿದ ಗುರುತು.

‘ದುಡಿಮೆ ಇಲ್ಲದ ದಿನಗಳಲ್ಲಿ ನಾವು ಉಪವಾಸ ಮಲಗಿದ್ದಿದೆ. ಬಟ್ಟೆ ಬದಲಾಯಿಸಲು ಕೂಡ ನನಗೆ ಜಾಗವಿಲ್ಲ. ಎಲ್ಲಿ ಸ್ನಾನ ಮಾಡುವುದು ಹೇಳಿ? ಈ ಪ್ರದೇಶದಲ್ಲಿ ಟಾಯ್ಲೆಟ್‌ಗೆ ಹೋಗಲೂ ನಮಗೆ ಸ್ಥಳವಿಲ್ಲ. ಹೆರಿಗೆ ಕೂಡ ಇದೇ ಟೆಂಟ್‌ನೊಳಗೆ ನಡೆದು ಹೋಯಿತು’ ಎಂದು ಕಣ್ಣೀರಿಡುತ್ತಾರೆ ರೋಹಿಣಿ ಭಾಯಿ.

ರಾಜ ವೈಭೋಗವನ್ನೇ ತುಂಬಿಕೊಂಡು ತಲೆ ಎತ್ತಿ ನಿಂತಂತಿರುವ ಅರಮನೆಯಿಂದ ಅನತಿ ದೂರದಲ್ಲಿ ಬಡತನದ ನಗ್ನಸತ್ಯ ಅನಾವರಣಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.