ADVERTISEMENT

ಮೈಸೂರಿನಲ್ಲೂ ಲಾಕ್‌ಡೌನ್‌ ಬಿಗಿ

ಬಾರ್, ಸಲೂನ್ ತೆಗೆಯುವಂತಿಲ್ಲ; ಆಟೊ,ಟ್ಯಾಕ್ಸಿ ಸೇವೆ ಇರಲ್ಲ

​ಪ್ರಜಾವಾಣಿ ವಾರ್ತೆ
Published 23 ಮೇ 2020, 13:51 IST
Last Updated 23 ಮೇ 2020, 13:51 IST

ಮೈಸೂರು: ರಾಜ್ಯ ಸರ್ಕಾರದ ಆದೇಶದಂತೆ ಮೈಸೂರಿನಲ್ಲೂ ಮೇ 24ರ ಭಾನುವಾರ ಲಾಕ್‌ಡೌನ್‌ ಅನ್ನು ಕಟ್ಟುನಿಟ್ಟಿನಿಂದ ಜಾರಿಗೊಳಿಸಲಾಗುವುದು ಎಂದು ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ತಿಳಿಸಿದ್ದಾರೆ.

ಭಾನುವಾರ ಬೆಳಿಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯವರೆಗೂ ಅಗತ್ಯ ಸೇವೆ, ವಸ್ತುಗಳ ಪೂರೈಕೆ, ವೈದ್ಯಕೀಯ ಸೇವೆ ಹೊರತುಪಡಿಸಿ, ಇನ್ನುಳಿದ ಸಾರ್ವಜನಿಕರ ಸಂಚಾರ, ವ್ಯಾಪಾರ ವಹಿವಾಟನ್ನು ಸಂಪೂರ್ಣ ನಿಷೇಧಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

ಹೋಟೆಲ್‌, ರೆಸ್ಟೋರೆಂಟ್‌ಗಳಲ್ಲಿ ಪಾರ್ಸೆಲ್‌ಗೆ ಎಂದಿನಂತೆ ಅವಕಾಶ ಇರಲಿದೆ. ಅನಗತ್ಯವಾಗಿ ಹೊರಗಡೆ ಬಂದರೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ADVERTISEMENT

‘ಹಾಲು, ಹಣ್ಣು, ತರಕಾರಿ, ದಿನಸಿ, ಮೊಟ್ಟೆ–ಮಾಂಸ ಮಾರಾಟಕ್ಕೆ ಅವಕಾಶವಿದೆ. ಆಸ್ಪತ್ರೆ, ಮೆಡಿಕಲ್ ಸ್ಟೋರ್ಸ್‌ ತೆರೆದಿರಲಿವೆ. ವೈದ್ಯರು, ದಾದಿಯರು, ಆಂಬುಲೆನ್ಸ್ ಓಡಾಟಕ್ಕೆ ಅವಕಾಶವಿದೆ. ರೋಗಿಗಳು ತಪಾಸಣೆಗಾಗಿ ಆಸ್ಪತ್ರೆಗೆ ಹೋಗಬಹುದು. ಮೊದಲೇ ನಿಗದಿಯಾಗಿದ್ದರೆ ಷರತ್ತುಗೊಳಪಟ್ಟು ಮದುವೆಗೆ ಅವಕಾಶವಿದೆ‘ ಎಂದು ಡಿಸಿಪಿ ಡಾ.ಎ.ಎನ್.ಪ್ರಕಾಶ್‌ಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

’ಸಾರ್ವಜನಿಕರ ಸಂಚಾರಕ್ಕೆ ನಿರ್ಬಂಧವಿರಲಿದೆ. ವಾಣಿಜ್ಯ ಮಳಿಗೆಗಳು, ಪ್ರಮುಖ ರಸ್ತೆಗಳು ಬಂದ್ ಆಗಲಿವೆ. ಬಾರ್, ಸಲೂನ್, ಪಾರ್ಕ್‌ ತೆರೆದಿರಲ್ಲ. ಆಟೊ, ಟ್ಯಾಕ್ಸಿ/ಕ್ಯಾಬ್ ಸೇವೆ ಸಹ ಇರಲ್ಲ. ತುರ್ತು ಅಗತ್ಯಗಳಿಗೆ ಬಿಟ್ಟು ಬೇರೆ ಕೆಲಸಕ್ಕೆ ಖಾಸಗಿ ವಾಹನ ಬಳಸುವಂತಿಲ್ಲ‘ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.