ADVERTISEMENT

ಹುಣಸೂರು | ‘ಅದಾಲತ್‌’ 1421 ಪ್ರಕರಣ ಇತ್ಯರ್ಥ

ಮನಸ್ತಾಪ ಮರೆತು ಒಂದಾದ ಸತಿಪತಿ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2025, 3:07 IST
Last Updated 15 ಡಿಸೆಂಬರ್ 2025, 3:07 IST
ಹುಣಸೂರು ನಗರದ ನ್ಯಾಯಾಲಯದಲ್ಲಿ ಶನಿವಾರ ನಡೆದ ಲೋಕ ಅದಾಲತ್‌ ಕಾರ್ಯಕ್ರಮದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ದಂಪತಿ ನ್ಯಾಯಾಧೀಶೆ ಅನಿತಾ ಅವರ ಸಮ್ಮುಖದಲ್ಲಿ ಹಾರ ಬದಲಿಸಿಕೊಂಡು ಒಂದಾದರು
ಹುಣಸೂರು ನಗರದ ನ್ಯಾಯಾಲಯದಲ್ಲಿ ಶನಿವಾರ ನಡೆದ ಲೋಕ ಅದಾಲತ್‌ ಕಾರ್ಯಕ್ರಮದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ದಂಪತಿ ನ್ಯಾಯಾಧೀಶೆ ಅನಿತಾ ಅವರ ಸಮ್ಮುಖದಲ್ಲಿ ಹಾರ ಬದಲಿಸಿಕೊಂಡು ಒಂದಾದರು   

ಹುಣಸೂರು: ವಿಚ್ಛೇದನಕ್ಕೆ ನ್ಯಾಯಾಲಯದ ಮೊರೆ ಹೋಗಿದ್ದ ದಂಪತಿ ಮನವೊಲಿಸಿದ ನ್ಯಾಯಾಲಯ ಒಂದುಗೂಡಿಸಿ ಬುದ್ಧಿ ಮಾತು ಹೇಳಿದ ಪ್ರಸಂಗ ಶನಿವಾರ ಲೋಕ ಅದಾಲತ್‌ ನಲ್ಲಿ ನಡೆಯಿತು.

ತಾಲ್ಲೂಕಿನ ಸಣ್ಣೇನಹಳ್ಳಿ ವೆಂಕಟೇಶ್‌, ಸುನಿತಾ ದಂಪತಿ ಕಳೆದ 20 ವರ್ಷಗಳಿಂದ ಜತೆಯಾಗಿ ಬದುಕು ನಡೆಸಿದ್ದರು. ಈ ದಂಪತಿಗೆ 2 ಹೆಣ್ಣು ಮಕ್ಕಳಿದ್ದು, ದಾಂಪತ್ಯದಲ್ಲಿ ಎದುರಾದ ಮನಸ್ತಾಪದಿಂದ 2025 ಜನವರಿಯಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ ನ್ಯಾಯಾಲಯದ ಮೊರೆ ಹೋಗಿದ್ದರು. ಹಿರಿಯ ಸಿವಿಲ್‌ ನ್ಯಾಯಾಧೀಶೆ ಅನಿತಾ ದಂಪತಿಗೆ ತಿಳಿವಳಿಕೆ ಹೇಳಿದರು. ಒಂದಾಗಿ ಬದುಕು ನಡೆಸಲು ಸಮ್ಮತಿಸಿ ಲೋಕ ಅದಾಲತ್‌ನಲ್ಲಿ ಹೂವಿನ ಹಾರ ಬದಲಿಸಿಕೊಂಡರು.

1421 ಪ್ರಕರಣ ಇತ್ಯರ್ಥ

ADVERTISEMENT

ಲೋಕ ಅದಾಲತ್‌ನಲ್ಲಿ ಸಿವಿಲ್‌, ಕ್ರಿಮಿನಲ್‌ ಪ್ರಕರಣಗಳು ಮತ್ತು ವ್ಯಾಜ್ಯ ಪೂರ್ವ ಪ್ರಕರಣಗಳು ಸೇರಿದಂತೆ ಒಟ್ಟು 1,421 ಪ್ರಕರಣಗಳನ್ನು ₹4.98 ಕೋಟಿ ಮೊತ್ತದೊಂದಿಗೆ ಇತ್ಯರ್ಥಪಡಿಸಲಾಗಿದೆ. ಈ ಪೈಕಿ ಚೆಕ್‌ ಬೌನ್ಸ್‌ 28 (₹56.40 ಲಕ್ಷ) ಹಣ ವಸೂಲಾತಿ 3 ಪ್ರಕರಣ (₹23.93 ಲಕ್ಷ), ಆಸ್ತಿ ವಿಭಾಗ ದಾವೆ 13 ಪ್ರಕರಣ ಮತ್ತು ಜನನ ಮತ್ತು ಮರಣ ನೊಂದಣಿ 31 ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು ಎಂದು ನ್ಯಾಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಲೋಕ ಅದಾಲತ್‌ ಕಾರ್ಯಕ್ರಮದಲ್ಲಿ 8ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಟಿ.ಗೋವಿಂದಯ್ಯ, ಹೆಚ್ಚುವರಿ ಹಿರಿಯ ಸಿವಿಲ್‌ ನ್ಯಾಯಾಧೀಶೆ ಭಾಗ್ಯಮ್ಮ, ಪ್ರಧಾನ ಸಿವಿಲ್‌ ನ್ಯಾಯಾಧೀಶೆ ಆಯಿಷಾಬಿ ಪಿ ಮಹಿದ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.