ADVERTISEMENT

ಅಭ್ಯರ್ಥಿಗಳಿಗೆ ವಿಶ್ರಾಂತಿ ಸಮಯ| ಮತದಾರರಿಗೆ ಧನ್ಯವಾದ ಹೇಳಿದ ಯದುವೀರ್, ಲಕ್ಷ್ಮಣ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2024, 4:59 IST
Last Updated 28 ಏಪ್ರಿಲ್ 2024, 4:59 IST
ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ ಪಕ್ಷದ ಮುಖಂಡರೊಟ್ಟಿಗೆ ಚರ್ಚೆ ನಡೆಸಿದರು. ಪಕ್ಷದ ನಗರ ಘಟಕದ ಅಧ್ಯಕ್ಷ ಆರ್.ಮೂರ್ತಿ, ಪ್ರಧಾನ ಕಾರ್ಯದರ್ಶಿ ಶಿವಣ್ಣ, ನಾಗೇಶ್‌ ಮತ್ತು ಬಿ.ಎಂ. ರಾಮು ಜೊತೆಗಿದ್ದರು
ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ ಪಕ್ಷದ ಮುಖಂಡರೊಟ್ಟಿಗೆ ಚರ್ಚೆ ನಡೆಸಿದರು. ಪಕ್ಷದ ನಗರ ಘಟಕದ ಅಧ್ಯಕ್ಷ ಆರ್.ಮೂರ್ತಿ, ಪ್ರಧಾನ ಕಾರ್ಯದರ್ಶಿ ಶಿವಣ್ಣ, ನಾಗೇಶ್‌ ಮತ್ತು ಬಿ.ಎಂ. ರಾಮು ಜೊತೆಗಿದ್ದರು   

ಮೈಸೂರು: ಕಳೆದ ಒಂದು ತಿಂಗಳ ಕಾಲ ಲೋಕಸಭಾ ಚುನಾವಣೆಯ ಪ್ರಚಾರದ ರಣಾಂಗಣದಲ್ಲಿ ಮುಳುಗಿ ಹೋಗಿದ್ದ ಅಭ್ಯರ್ಥಿಗಳು ಮತದಾನದ ಮರುದಿನವಾದ ಶನಿವಾರ ವಿಶ್ರಾಂತಿಯ ಮೂಡ್‌ಗೆ ಜಾರಿದ್ದರು. ಇದರ ನಡುವೆಯೂ ಪಕ್ಷದ ಮುಖಂಡರ ಭೇಟಿ, ಸೋಲು–ಗೆಲುವಿನ ಲೆಕ್ಕಾಚಾರದ ಮಾತುಕತೆಯಲ್ಲೂ ತಮ್ಮನ್ನು ಸಕ್ರಿಯವಾಗಿಸಿಕೊಂಡರು.

ಜೂನ್‌ 4ರಂದು ಮತ ಎಣಿಕೆ ಪ್ರಕ್ರಿಯೆ ನಡೆಯಲಿದ್ದು, ಫಲಿತಾಂಶ ಘೋಷಣೆಗೆ ಇನ್ನೂ ಒಂದು ತಿಂಗಳಿಗೂ ಹೆಚ್ಚು ಕಾಲ ಕಾಯಬೇಕಿದೆ. ಹೀಗಾಗಿ ಸದ್ಯಕ್ಕೆ ಫಲಿತಾಂಶದ ಕುರಿತು ಜನರಿಗೆ ಹೆಚ್ಚು ಕುತೂಹಲ ಇದ್ದಂತೆ ಇಲ್ಲ. ಆದರೆ, ನೇರ ಜಿದ್ದಾಜಿದ್ದಿನ ಹೋರಾಟ ನಡೆಸಿರುವ ಬಿಜೆಪಿ– ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ ಇಬ್ಬರಿಗೂ ಫಲಿತಾಂಶದ ಬಗ್ಗೆ ಕಾತುರವಿದೆ.

ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ ಬೆಳಿಗ್ಗೆ ನಗರದ ಯಾದವಗಿರಿಯಲ್ಲಿ ಇರುವ ನಿವಾಸದಲ್ಲಿ ಕುಟುಂಬದವರೊಡನೆ ಉಪಾಹಾರ ಸೇವಿಸಿ ಲೋಕಾಭಿರಾಮ ಚರ್ಚೆಯಲ್ಲಿ ಪಾಲ್ಗೊಂಡರು. ಒಂದಿಷ್ಟು ಹೊತ್ತು ಪತ್ರಿಕೆಗಳ ಪುಟವನ್ನೂ ತಿರುವಿ ಹಾಕಿದರು. ನಂತರದಲ್ಲಿ ನೇರವಾಗಿ ರೈಲು ನಿಲ್ದಾಣದ ಬಳಿ ಇರುವ ಜಿಲ್ಲಾ ಕಾಂಗ್ರೆಸ್‌ ಕಚೇರಿಗೆ ಧಾವಿಸಿದರು. ಅಲ್ಲಿ ಪಕ್ಷದ ನಗರ ಘಟಕದ ಅಧ್ಯಕ್ಷ ಆರ್.ಮೂರ್ತಿ, ಪ್ರಧಾನ ಕಾರ್ಯದರ್ಶಿ ಶಿವಣ್ಣ ಸೇರಿದಂತೆ ಹಲವು ಮುಖಂಡರ ಜೊತೆ ರಾಜಕೀಯ ಚರ್ಚೆ ಮುಂದುವರಿದಿತ್ತು. ಮಧ್ಯಾಹ್ನ ಮಾಧ್ಯಮವರನ್ನು ಎದುರಾದ ಲಕ್ಷ್ಮಣ, ಚುನಾವಣೆಯನ್ನು ಗೆಲ್ಲುವ ವಿಶ್ವಾಸದಲ್ಲೇ ಮಾತನಾಡಿದರು.

ADVERTISEMENT

ಬಿಜೆಪಿ ಅಭ್ಯರ್ಥಿ ಯದುವೀರ್ ಬೆಳಿಗ್ಗೆ ಅರಮನೆಯಲ್ಲಿನ ತಮ್ಮ ನಿವಾಸದಲ್ಲಿ ಕುಟುಂಬದವರೊಟ್ಟಿಗೆ ಕಾಲ ಕಳೆದರು. ನಂತರ ಕುವೆಂಪು ನಗರದಲ್ಲಿ ಇರುವ ತಮ್ಮ ಚುನಾವಣಾ ಕಚೇರಿಗೆ ಭೇಟಿ ಕೊಟ್ಟು ಅಲ್ಲಿ ಪತ್ರಿಕೆಗಳನ್ನು ತಿರುವುತ್ತಾ, ಕಾರ್ಯಕರ್ತರನ್ನು ಭೇಟಿ ಮಾಡುತ್ತ ಕಾಲ ಕಳೆದರು. ಸುಮಾರು ಎರಡು ಗಂಟೆ ಕಾಲ ಅಲ್ಲಿದ್ದ ಅವರು ಬಂದ ಮುಖಂಡರಿಗೆಲ್ಲ ಧನ್ಯವಾದ ಹೇಳಿದರು. ಬಳಿಕ ಕೊಡಗಿನ ಭಾಗದ ಬಿಜೆಪಿ ಮುಖಂಡರ ಭೇಟಿಗಾಗಿ ಮಡಿಕೇರಿಗೆ ತೆರಳಿದರು.

ಇವರಲ್ಲದೇ ಇತರ 16 ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. ಯಾರೆಲ್ಲ ಎಷ್ಟು ಮತ ಪಡೆದಿದ್ದಾರೆ ಎಂಬುದು ಜೂನ್‌ 4ರಂದು ತಿಳಿಯಲಿದೆ.

ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಶನಿವಾರ ಕುವೆಂಪುನಗರದಲ್ಲಿನ ತಮ್ಮ ಚುನಾವಣಾ ಕಚೇರಿಯಲ್ಲಿ ‘ಪ್ರಜಾವಾಣಿ’ ಓದುವಲ್ಲಿ ನಿರತರಾಗಿದ್ದರು
ಪ್ರಚಾರ ಇಲ್ಲದೇ ಇರುವುದರಿಂದ ಕೊಂಚ ರಿಲ್ಯಾಕ್ಸ್‌ ಆಗಿ ಇದ್ದೇನೆ. ಪಕ್ಷದ ಅಭ್ಯರ್ಥಿಗಳ ಪರ ಬೇರೆ ಕ್ಷೇತ್ರಗಳಲ್ಲಿ ಪ್ರಚಾರಕ್ಕೆ ಹೋಗುವ ಕುರಿತು ಸದ್ಯದಲ್ಲೇ ತಿಳಿಸುತ್ತೇನೆ
ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‌ ಬಿಜೆಪಿ ಅಭ್ಯರ್ಥಿ
ಜಾತಿ ಧರ್ಮಗಳ ಭೇದ ಮರೆತು ಜನ ಬೆಂಬಲ ನೀಡಿದ್ದಾರೆ. ಕಳೆದ ಒಂದು ತಿಂಗಳ ಕಾಲ ಪಕ್ಷದ ನಾಯಕರು ಮುಖಂಡರು ನನ್ನ ಪರ ಪ್ರಚಾರ ನಡೆಸಿದ್ದಾರೆ. ಅವರೆಲ್ಲರಿಗೂ ಧನ್ಯವಾದ
ಎಂ. ಲಕ್ಷ್ಮಣ ಕಾಂಗ್ರೆಸ್ ಅಭ್ಯರ್ಥಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.