ಮೈಸೂರು: ಉಪ ಲೋಕಾಯುಕ್ತ ಕೆ.ಎನ್. ಫಣೀಂದ್ರ ಅವರು ಕೆಸರೆಯಲ್ಲಿರುವ ನೀರು ಸಂಸ್ಕರಣೆ ಹಾಗೂ ಘನ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು. ‘500 ಮೀಟರ್ ವ್ಯಾಪ್ತಿಯಲ್ಲಿ (ಬಫರ್ ವಲಯ) ಯಾವುದೇ ನಿವೇಶನ ಅಥವಾ ಕಟ್ಟಡ ನಿರ್ಮಾಣ ಆಗದಂತೆ ಅಗತ್ಯ ಕ್ರಮ ವಹಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಘಟಕದಲ್ಲಿನ ಕಳೆ ಗಿಡಗಳನ್ನು ತೆರವುಗೊಳಿಸಿ, ಹೂವಿನ ಹಾಗೂ ಉತ್ತಮ ಗಿಡಗಳನ್ನು ಹಾಕಿ ನಿರ್ವಹಣೆ ಮಾಡುವಂತೆ ನಿರ್ದೇಶನ ನೀಡಿದರು.
‘ಪ್ರತಿ ಹಳ್ಳಿಗಳಲ್ಲೂ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಜನರಲ್ಲಿ ಜಾಗೃತಿ ಮೂಡಿಸಬೇಕು. ಒಳ ಕಸ ಹಾಗೂ ಹಸಿ ಕಸ ವಿಂಗಡಿಸಿ ಕೊಡುವಂತೆ ತಿಳಿಹೇಳಬೇಕು’ ಎಂದರು.
‘ಕೆಸರೆಯಲ್ಲಿ ಘನ ತ್ಯಾಜ್ಯ ನಿರ್ವಹಣಾ ಘಟಕದಿಂದ ತೊಂದರೆ ಆಗುತ್ತಿರುವ ಬಗ್ಗೆ ಜನರು ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ವೈಜ್ಞಾನಿಕ ರೀತಿಯಲ್ಲಿ ತಜ್ಞರಿಂದ ಪರಿಶೀಲನೆ ಮಾಡಿಸಬೇಕು. 5 ಕಿ.ಮೀ. ವ್ಯಾಪ್ತಿಯಲ್ಲಿ ಯಾವುದಾದರೂ ಮನೆಯಲ್ಲಿನ ಜನರಿಗೆ ಆರೋಗ್ಯ ಸಮಸ್ಯೆ, ಹೋಟೆಲ್‌ಗಳಿಗೆ, ಜನರಿಗೆ ತೊಂದರೆ ಆಗಿದ್ದರೆ ವರದಿ ಸಲ್ಲಿಸಬೇಕು’ ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಅವರಿಗೆ ಸೂಚಿಸಿದರು.
ತೊಂದರೆ ಆಗದಂತೆ ಮುನ್ನೆಚ್ಚರಿಕೆ ವಹಿಸಿ: ‘ಘನ ತ್ಯಾಜ್ಯ ನಿರ್ವಹಣಾ ಘಟಕದಿಂದ 500 ಮೀ. ಒಳಗೆ ನಿವೇಶನಗಳಿದ್ದರೆ ರದ್ದುಪಡಿಸಲಾಗುವುದು. ದುರ್ವಾಸನೆಯಿಂದ ಮಕ್ಕಳು ಹಾಗೂ ಜನರಿಗೆ ಆರೋಗ್ಯದಲ್ಲಿ ಸಮಸ್ಯೆ ಆಗುವ ಬಗ್ಗೆ ಪರಿಶೀಲಿಸಬೇಕು. ಜನರಿಗೆ ಯಾವುದೇ ತೊಂದರೆ ಆಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು’ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಯುಕೇಶ್ ಕುಮಾರ್, ಮಹಾನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸೀಫ್, ಕೆಯುಡಬ್ಲ್ಯುಎಸ್‌ಎಸ್‌ಬಿ ಇಇ ಆಸೀಫ್ ಇದ್ದರು.
ವಿಚಾರಣೆ: ನಂತರ ಉಪ ಲೋಕಾಯುಕ್ತರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಾರ್ವಜನಿಕರ ದೂರುಗಳ ವಿಚಾರಣೆಯನ್ನು 2ನೇ ದಿನವಾದ ಶುಕ್ರವಾರವೂ ಮುಂದುವರಿಸಿದರು.
‘ಕಚೇರಿಗೆ ಬರುವ ಸಾರ್ವಜನಿಕರನ್ನು ಸೌಜನ್ಯದಿಂದ ಮಾತನಾಡಿಸಬೇಕು. ಅವರಿಗೆ ಅಗತ್ಯವಾದ ಮಾಹಿತಿ ಒದಗಿಸಬೇಕು. ಅವರ ನೋವಿಗೆ ಸ್ಪಂದಿಸಬೇಕು. ಕರ್ತವ್ಯ ನಿರ್ವಹಣೆಯಲ್ಲಿ ಯಾವುದೇ ಲೋಪ–ದೋಷ ಆಗದಂತೆ ನೋಡಿಕೊಳ್ಳಬೇಕು. ಇಲಾಖೆಗೆ ಸಂಬಂಧಿಸಿಲ್ಲದಿದ್ದರೆ, ಎಲ್ಲಿ ಆ ಕೆಲಸ ಆಗುತ್ತದೆ ಎಂಬುದನ್ನು ತಿಳಿಸಿ ಕಳುಹಿಸಬೇಕು. ಸಮಸ್ಯೆಗಳನ್ನು ಕಾನೂನಾತ್ಮಕವಾಗಿ ಪರಿಹರಿಸಬೇಕು’ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
‘ಜನರಿಗೆ ಸರ್ಕಾರದ ಮೇಲೆ ಇರುವ ಗೌರವ ಕಡಿಮೆಯಾಗದ ರೀತಿಯಲ್ಲಿ ಅಧಿಕಾರಿಗಳು ನಡೆದುಕೊಳ್ಳಬೇಕು. ನಾವಿರುವುದೇ ಸಾರ್ವಜನಿಕರ ಸೇವೆಗೆ ಎಂಬುದನ್ನು ಮರೆಯಬಾರದು. ಅಭಿವೃದ್ಧಿ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸಬೇಕು’ ಎಂದು ನಿರ್ದೇಶನ ನೀಡಿದರು.
‘ಅಧಿಕಾರಿಗಳು ನಿಯಮಬದ್ಧವಾಗಿ ಕೆಲಸ ಮಾಡಬೇಕು. ನೊಂದವರಿಗೆ ನ್ಯಾಯ ದೊರಕಿಸಿಕೊಡಬೇಕು. ಕಾನೂನು ಬಿಟ್ಟು ಯಾವುದೇ ಕೆಲಸ ಮಾಡುತ್ತೇವೆ ಎಂದರೆ ಸಾಧ್ಯವಿಲ್ಲ’ ಎಂದರು.
ಲೋಕಾಯುಕ್ತ ಜಂಟಿ ನಿಬಂಧಕಿ (ವಿಚಾರಣೆ) ವಿ.ಎನ್.ವಿಮಲಾ, ಲೋಕಾಯುಕ್ತ ಕಾರ್ಯದರ್ಶಿ ಕಿರಣ್ ಪಾಟೀಲ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅಮರನಾಥ್, ಎಸ್ಪಿ ಎನ್. ವಿಷ್ಣುವರ್ಧನ್, ಲೋಕಾಯುಕ್ತ ಎಸ್ಪಿ ಟಿ.ಜೆ. ಉದೇಶ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.
ಕಾನೂನಿನ ಪರಿಮಿತಿಯಲ್ಲಿ ಜನರಿಗೆ ಒಳ್ಳೆಯ ಕೆಲಸ ಮಾಡಿಕೊಡುವುದು ಮಾನವೀಯ ಮೌಲ್ಯವಾಗುತ್ತದೆ–ಕೆ.ಎನ್. ಫಣೀಂದ್ರ ಉಪ ಲೋಕಾಯುಕ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.