ADVERTISEMENT

ರೈತ ಆತ್ಮಹತ್ಯೆಗೆ ಯತ್ನ– ಪರಿಸ್ಥಿತಿ ಗಂಭೀರ

ಸಿಬಿಲ್‌ ಸ್ಕೋರ್‌ ನೆಪದಲ್ಲಿ ಸಾಲ ನಿರಾಕರಣೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2022, 14:42 IST
Last Updated 21 ನವೆಂಬರ್ 2022, 14:42 IST
ರೈತ ನಿಂಗೇಗೌಡ
ರೈತ ನಿಂಗೇಗೌಡ   

ಮೈಸೂರು: ಸಿಬಿಲ್‌ ಸ್ಕೋರ್‌ ಕಡಿಮೆಯಿದೆ ಎಂದು ನೆಪವೊಡ್ಡಿ ಕಬ್ಬು ಬೆಳೆ ಸಾಲ ನಿರಾಕರಿಸಿದ ಬ್ಯಾಂಕ್‌ನ ಅಧಿಕಾರಿಗಳ ವರ್ತನೆಯಿಂದ ರೋಸಿಹೋದ ರೈತರೊಬ್ಬರು ಬ್ಯಾಂಕ್‌ನಲ್ಲೇ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅಸ್ವಸ್ಥಗೊಂಡ ರೈತನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪರಿಸ್ಥಿತಿ ಗಂಭೀರವಾಗಿದೆ.

ಎಚ್‌.ಡಿ.ಕೋಟೆ ತಾಲ್ಲೂಕಿನ ಅಂತರಸಂತೆ ಹೋಬಳಿಯ ಹೊಸಹೂಳಲು ಗ್ರಾಮದ ರೈತ ನಿಂಗೇಗೌಡ (70) ನಾಲ್ಕು ಎಕರೆ ಜಮೀನಿದೆ. ಕಬ್ಬು ಬೆಳೆ ಸಾಲ ಪಡೆಯುವ ಸಂಬಂಧ ಅಂತರಸಂತೆಯ ಕರ್ನಾಟಕ ಗ್ರಾಮೀಣ ಬ್ಯಾಂಕ್‌ಗೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರಬೂರು ಶಾಂತಕುಮಾರ್‌ ನೇತೃತ್ವದಲ್ಲಿಯೇ ತಿಂಗಳ ಹಿಂದೆ ಅರ್ಜಿ ಹಾಕಿದ್ದರು.

‘ಸಾಲ ಮಂಜೂರುಗೊಳಿಸುವ ಸಂಬಂಧ ಎಲ್ಲ ದಾಖಲೆಗಳನ್ನು ತಂದೆಯವರು ಬ್ಯಾಂಕ್‌ಗೆ ಸಲ್ಲಿಸಿದ್ದರು. ಆದರೆ, ಸಿಬಿಲ್‌ ಸ್ಕೋರ್ ಕಡಿಮೆಯಿದೆ ಎಂದು ಕಾರಣವೊಡ್ಡಿ ಸಾಲ ಕೊಡಲು ಬರುವುದಿಲ್ಲ ಎಂದು ಅರ್ಜಿ ತಿರಸ್ಕರಿಸಿದ್ದರು. ಇದರಿಂದ ಮನನೊಂದು ತಂದೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ’ ಎಂದು ಅವರ ಮಗ ಮಹಾದೇವು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ADVERTISEMENT

ಸೋಮವಾರ ಮಧ್ಯಾಹ್ನ ಬ್ಯಾಂಕ್‌ನ ಶಾಖೆಗೆ ಬಂದ ನಿಂಗೇಗೌಡ, ಏಕಾಏಕಿ ವಿಷ ಸೇವಿಸಿ ಅಸ್ವಸ್ಥರಾಗಿ ವಾಂತಿ ಮಾಡಿಕೊಂಡು ಒದ್ದಾಡುತ್ತಿದ್ದರು. ಈ ವೇಳೆ ಬ್ಯಾಂಕ್‌ನ ಸಿಬ್ಬಂದಿ ಅವರ ಮಗನಿಗೆ ಕರೆ ಮಾಡಿ ತಿಳಿಸಿದರು. ನಂತರ ಅವರನ್ನು ಎಚ್‌.ಡಿ.ಕೋಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಪ್ರಾಥಮಿಕ ಹಂತದ ಚಿಕಿತ್ಸೆ ಮಾಡಿಸಿಕೊಂಡು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ.

‘ವಿಷ ಸೇವಿಸಿರುವ ಕಾರಣ, ಪರಿಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ’ ಎಂದು ಮಹಾದೇವು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.