ಮೈಸೂರು: ‘ರಾಜ್ಯ ಸರ್ಕಾರದಿಂದ ನಡೆಸಲಾಗುತ್ತಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ಸಮಾಜದವರು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಜಾತಿ ಹಾಗೂ ಉಪ ಜಾತಿ ಕಾಲಂ ಎರಡರಲ್ಲೂ ‘ಮಾದಿಗ’ ಎಂದೇ ಬರೆಸಬೇಕು’ ಎಂದು ವಿಧಾನಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ ಕೋರಿದರು.
ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಮೀಕ್ಷೆಯಲ್ಲಿ ಅಗತ್ಯ ಮಾಹಿತಿ ಒದಗಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಸೌಲಭ್ಯಗಳನ್ನು ಹಾಗೂ ಸ್ಥಾನಮಾನಗಳನ್ನು ಪಡೆದುಕೊಳ್ಳುವುದಕ್ಕೆ ಸಹಕಾರಿಯಾಗಲಿದೆ. ಆದ್ದರಿಂದ, ಯಾರೂ ನಿರ್ಲಕ್ಷಿಸಬಾರದು’ ಎಂದು ತಿಳಿಸಿದರು.
‘ಸಮೀಕ್ಷಕರು ಮನೆಗೆ ಬಂದಾಗ ಅಗತ್ಯ ಮಾಹಿತಿಯನ್ನು ಒದಗಿಸಬೇಕು. ಇದರಿಂದ, ನಮ್ಮ ಸಮಾಜದ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿ ತಿಳಿದುಬರುತ್ತದೆ. ಇದನ್ನು ಆಧರಿಸಿ ಮುಂದಿನ ದಿನಗಳಲ್ಲಿ ಮೀಸಲಾಯನ್ನು ಕೇಳಬಹುದಾಗಿದೆ. ಧರ್ಮವನ್ನು ಹಿಂದೂ ಎಂದು ಬರೆಸಬೇಕು. ಇದು ನಮ್ಮ ಅಳಿವು– ಉಳಿವಿನ ಪ್ರಶ್ನೆಯಾಗಿದೆ. ಗೊಂದಲಕ್ಕೆ ಒಳಗಾಗದೇ ಸ್ಪಷ್ಟ ಉತ್ತರವನ್ನು ಕೊಡಬೇಕು’ ಎಂದು ಹೇಳಿದರು.
‘ನಮ್ಮ ಸಮಾಜಕ್ಕೆ ರಾಜ್ಯ ಸರ್ಕಾರವು ಶೇ 6ರಷ್ಟು ಒಳಮೀಸಲಾತಿ ಕೊಟ್ಟಿದೆ. ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ವರದಿಯ ಶಿಫಾರಸು ಜಾರಿಯಿಂದ ಅನುಕೂಲ ಆಗುತ್ತದೆ. ಏನೂ ಇಲ್ಲದಿದ್ದ ಸಂದರ್ಭದಲ್ಲಿ ಶೇ 6ರಷ್ಟು ಒಳಮೀಸಲಾತಿ ಸಿಗುವುದು ಒಳ್ಳೆಯದಲ್ಲವೇ?’ ಎಂದು ಕೇಳಿದರು.
ಮಾಜಿ ಸಚಿವ ಎಂ.ಶಿವಣ್ಣ, ಸಮಾಜದ ಮುಖಂಡರಾದ ಸುಧಾ ಮಹದೇವಯ್ಯ, ಯಡತೊರೆ ನಿಂಗರಾಜ್, ಶಿವಮೂರ್ತಿ, ಪಾಳ್ಯ ರಾಚಪ್ಪ, ಶಿವಸ್ವಾಮಿ, ದುರ್ಗೇಶ್, ಕೆ.ಅರ್. ರಾಚಯ್ಯ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.