ಮೈಸೂರು: ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಮಾದಿಗ ಸಮುದಾಯದ ವಿವಿಧ ಸಂಘಟನೆಗಳು ಶುಕ್ರವಾರ ಸರಣಿ ಪ್ರತಿಭಟನೆ ನಡೆಸಿದವು.
ನಗರದ ಪುರಭವನದಲ್ಲಿ ಅಂಬೇಡ್ಕರ್ ಪ್ರತಿಮೆ ಎದುರು ಜಮಾಯಿಸಿದ ‘ಮಾದಿಗ ಸಂಘಟನೆಗಳ ಒಕ್ಕೂಟ’ದ ಸದಸ್ಯರು ರಾಜ್ಯ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
‘35 ವರ್ಷದಿಂದ ಒಳ ಮೀಸಲಾತಿಗೆ ಆಗ್ರಹಿಸಿ ನಿರಂತರ ಹೋರಾಟ ಮಾಡುತ್ತಿದ್ದೇವೆ. ಸುಪ್ರೀಂ ಕೋರ್ಟ್ ತೀರ್ಪು ನೀಡಿ ವರ್ಷವಾದರೂ ಜಾರಿ ಮಾಡಲು ಕಾಂಗ್ರೆಸ್ ಸರ್ಕಾರ ಮೀನ–ಮೇಷ ಎಣಿಸುತ್ತಿದೆ’ ಎಂದು ಮುಖಂಡ ಪ್ರಸನ್ನ ಚಕ್ರವರ್ತಿ ಆಕ್ರೋಶ ವ್ಯಕ್ತಪಡಿಸಿದರು.
‘ನೆರೆಯ ರಾಜ್ಯಗಳಲ್ಲಿ ಒಳ ಮೀಸಲಾತಿ ಜಾರಿಯಾಗಿದೆ. ಆದರೆ, ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಯಾರ ಒತ್ತಡಕ್ಕೆ ಸಿಲುಕಿದೆಯೋ ಗೊತ್ತಿಲ್ಲ. ಜಾರಿಗೊಂಡರೆ 101 ಉಪ ಜಾತಿಗಳಿಗೆ ಅನುಕೂಲವಾಗಲಿದೆ’ ಎಂದರು.
‘ಆ.4ರಂದು ನಾಗಮೋಹನ್ ದಾಸ್ ವರದಿ ಸ್ವೀಕರಿಸಿ, ಒಳಮೀಸಲಾತಿ ಜಾರಿ ಮಾಡದಿದ್ದರೆ ಆಗಸ್ಟ್ 15ರಂದು ಬೃಹತ್ ಹೋರಾಟ ನಡೆಸಲಿದ್ದೇವೆ’ ಎಂದು ಎಚ್ಚರಿಸಿದರು.
ಭಾಸ್ಕರ್ ಪ್ರಸಾದ್ ಮಾತನಾಡಿ, ‘ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಶವಯಾತ್ರೆ ನಡೆಸಲು ಅನುಮತಿಸಲಾಗಿದೆ. ಮೈಸೂರಿನಲ್ಲಿ ಅಧಿಕಾರಿಗಳು ಅನುಮತಿ ಕೊಟ್ಟಿಲ್ಲ. ಈ ಸರ್ಕಾರ ಸತ್ತು ಹೋಗಿದೆ’ ಎಂದು ದೂರಿದರು.
ಪ್ರತಿಭಟನೆಯಲ್ಲಿ ಅರುಣ್ ಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.
‘ಸಾಮಾಜಿಕ ನ್ಯಾಯ ನೀಡಿ’: ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ವಿವಿಧ ಸಂಘಟನೆಗಳು, ‘ಒಳ ಮೀಸಲಾತಿ ಇಲ್ಲದ್ದರಿಂದ ಸಮುದಾಯದ ವಿದ್ಯಾರ್ಥಿಗಳು, ಉದ್ಯೋಗಾಂಕ್ಷಿಗಳಿಗೆ ಅನ್ಯಾಯವಾಗಿದೆ. ಸಾಮಾಜಿಕ ನ್ಯಾಯ ಕೊಡಿ’ ಎಂದು ಆಗ್ರಹಿಸಿದವು.
ಪ್ರತಿಭಟನೆಯಲ್ಲಿ ಬಸವರಾಜು, ಡಾ.ಆನಂದಕುಮಾರ್, ಎಂ.ಮಹದೇವು, ರಾಜಣ್ಣ, ವೆಂಕಟರಮಣ, ಜಯಸಿಂಹ ಸೇರಿದಂತೆ ಹಲವರು ಭಾಗವಹಿಸಿದ್ದರು.
ಸಫಾಯಿ ಕರ್ಮಚಾರಿ ಒಕ್ಕೂಟ ಆಕ್ರೋಶ
ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ಮಾದಿಗ ಸಫಾಯಿ ಕರ್ಮಚಾರಿ ಒಕ್ಕೂಟದ ಸದಸ್ಯರು ಗಾಂಧಿ ಚೌಕದಲ್ಲಿ ಪ್ರತಿಭಟನೆ ನಡೆಸಿದರು. ‘ಒಳಪಂಗಡಗಳ ಸಮೀಕ್ಷೆ ವರದಿ ಸಲ್ಲಿಕೆಯಾಗಲಿದ್ದು ಅದನ್ನು ಇರಿಸಿಕೊಂಡು ಸರ್ಕಾರ ಕಾಲಹರಣ ಮಾಡಬಾರದು’ ಎಂದು ಮುಖಂಡ ವೆಂಕಟೇಶ್ ಒತ್ತಾಯಿಸಿದರು. ಮುಖಂಡರಾದ ಧರ್ಮರಾಜು ಬಿ.ಎಸ್.ಸುಬ್ರಹ್ಮಣ್ಯ ಗಂಗಯ್ಯ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.