ADVERTISEMENT

ಮೈಸೂರು | ಗಜಪಡೆಗೆ ವಿಶ್ರಾಂತಿ: ಮಜ್ಜನ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2024, 16:06 IST
Last Updated 13 ಅಕ್ಟೋಬರ್ 2024, 16:06 IST
ದಸರಾ ಮಹೋತ್ಸವದಲ್ಲಿ ಪಾಲ್ಗೊಂಡ ಆನೆಗಳಿಗೆ ಅರಮನೆ ಆವರಣದಲ್ಲಿ ಭಾನುವಾರ ಮಾವುತರು ಸ್ನಾನ ಮಾಡಿಸಿದರು – ಪ್ರಜಾವಾಣಿ ಚಿತ್ರ: ಅನೂಪ್ ರಾಘ.ಟಿ.
ದಸರಾ ಮಹೋತ್ಸವದಲ್ಲಿ ಪಾಲ್ಗೊಂಡ ಆನೆಗಳಿಗೆ ಅರಮನೆ ಆವರಣದಲ್ಲಿ ಭಾನುವಾರ ಮಾವುತರು ಸ್ನಾನ ಮಾಡಿಸಿದರು – ಪ್ರಜಾವಾಣಿ ಚಿತ್ರ: ಅನೂಪ್ ರಾಘ.ಟಿ.   

ಮೈಸೂರು: ಅಂಬಾರಿ ಹೊತ್ತ ಅಭಿಮನ್ಯುಗೆ ಮಾವುತ ವಸಂತ ಅವರ ಪ್ರೀತಿಯ ಮುತ್ತು, ತಮ್ಮ ನೆಚ್ಚಿನ ಆನೆಗಳೊಂದಿಗೆ ಪ್ರವಾಸಿಗರ ಸೆಲ್ಫಿ, ದಸರಾ ತಾಲೀಮಿನಿಂದ ವಿಶ್ರಾಂತಿ ಪಡೆದ ಆನೆಗಳ ನೋಟ, ನೀರಿನಾಟ... ಇವೆಲ್ಲವೂ ಅರಮನೆ ಆವರಣದ ದಸರಾ ಆನೆಗಳ ಬಿಡಾರದಲ್ಲಿ ಭಾನುವಾರ ಕಂಡುಬಂದವು.

ಮೈಮೇಲೆ ಹೂವಿನ ಚಿತ್ತಾರ ಮಾಡಿಸಿಕೊಂಡು, ರಾಜ ಗಾಂಭೀರ್ಯದಲ್ಲಿ ಜಂಬೂಸವಾರಿ ಮೆರವಣಿಗೆಯಲ್ಲಿ ಪಾಲ್ಗೊಂಡ ಅಷ್ಟೂ ಆನೆಗಳು ಮಹಾಮಜ್ಜನ ಮಾಡಿಸಿಕೊಂಡವು. ಮೈಮೇಲೆ ನೀರು ಸುರಿಯುತ್ತಿದ್ದಂತೆ ಅಡ್ಡಲಾಗಿ ಮಲಗಿ ಮೈ ತಿಕ್ಕುವಂತೆ ಕಾವಾಡಿಗರನ್ನು ಪ್ರೇರೇಪಿಸಿದವು. ಮುಂಜಾನೆಯ ಚುಮುಚುಮು ಬಿಸಿಲಿಗೆ ಮೈ ಒಡ್ಡಿ ಸಂಭ್ರಮಿಸಿದವು.

ಆನೆಗಳ ವೀಕ್ಷಣೆಗೆ ಬಂದ ಪ್ರವಾಸಿಗರು ಅಂಬಾರಿ ಹೊತ್ತ ಅಭಿಮನ್ಯು ಎಲ್ಲಿ ಎಂದು ಕೇಳುತ್ತಾ ಆತನ ಹತ್ತಿರ ತೆರಳಿ ಫೋಟೊ ತೆಗೆದುಕೊಂಡು ಸಂಭ್ರಮಿಸಿದರು. ಮಾವುತ ವಸಂತ ಅವರನ್ನು ಅಭಿನಂದಿಸಿದರು.

ADVERTISEMENT

ಹಿರಣ್ಯ ಆನೆ ಸ್ನಾನದ ಬಳಿಕ ಬಹಳ ಸಂಭ್ರಮದಿಂದ ಓಡಾಡಿತು. ಏಕಲವ್ಯ ಮತ್ತು ಲಕ್ಷ್ಮಿ ಆನೆಗಳ ಮುದ್ದಾಟ ನೋಡುಗರ ಗಮನಸೆಳೆಯಿತು. ದಸರಾ ಅಲಂಕಾರಕ್ಕೆಂದು ಆನೆಗಳಿಗೆ ಬಳಸಿದ್ದ ವಿವಿಧ ವಸ್ತುಗಳನ್ನು ವಾಪಸ್‌ ಮಾಡಲಾಯಿತು. ಮಾವುತರು ಮತ್ತು ಕಾವಾಡಿಗರ ತಾತ್ಕಾಲಿಕ ಮನೆಗಳಲ್ಲಿ ಊರಿಗೆ ತೆರಳುವ ತಯಾರಿ ನಡೆಯಿತು.

ಅಂಬಾರಿಯನ್ನು ಶನಿವಾರ ರಾತ್ರಿಯೇ ವಾಹನದಲ್ಲಿ ತಂದು ಅರಮನೆಯಲ್ಲಿ ಸ್ವಸ್ಥಾನಕ್ಕೆ ಇಡಲಾಯಿತು.

ಜಂಬೂಸವಾರಿ ನಂತರ ಮೈಸೂರಿನ ಅರಮನೆಯ ಆನೆ ಬಿಡಾರದಲ್ಲಿ ಭಾನುವಾರ ತುಂಟಾಟದಲ್ಲಿ ನಿರತವಾಗಿರುವ ಏಕಲವ್ಯ ಹಾಗೂ ಲಕ್ಷ್ಮಿ ಆನೆಗಳು –ಪ್ರಜಾವಾಣಿ ಚಿತ್ರ: ಅನೂಪ್ ರಾಘ ಟಿ.
ಅಂಬಾರಿ ಹೊತ್ತ ಆನೆ ಅಭಿಮನ್ಯುವಿಗೆ ಮುತ್ತಿಟ್ಟ ಮಾವುತ ವಸಂತ  –ಪ್ರಜಾವಾಣಿ ಚಿತ್ರ: ಅನೂಪ್ ರಾಘ.ಟಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.