
ನಂಜನಗೂಡು: ‘ನಾವು ದೇವರೆಂದು ಪೂಜಿಸುತ್ತಿರುವ ಮಹದೇಶ್ವರ ಅವರು ಹೇಳಿರುವ ವಿಚಾರಧಾರೆಗಳನ್ನು ಅಳವಡಿಸಿಕೊಂಡರೆ ಶಾಂತಿ, ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.
ಜಿಲ್ಲಾಡಳಿತ ಮತ್ತು ಕಾವೇರಿ ನೀರಾವರಿ ನಿಗಮ ನಿಯಮಿತದ ಸಹಯೋಗದಲ್ಲಿ ವರುಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಂಜನಗೂಡು ತಾಲ್ಲೂಕು ಹದಿನಾರು ಗ್ರಾಮದಲ್ಲಿ ₹ 6.50 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ಬಿಳಿಕೆರೆ ಮಹದೇಶ್ವರ ದೇವಸ್ಥಾನದ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ನಾವೆಲ್ಲರೂ ಒಂದೇ ಎನ್ನುವ ಭಾವನೆ ಎಲ್ಲರಲ್ಲೂ ಬರಬೇಕು ಎಂಬುದು ನಮ್ಮ ಆಶಯವಾಗಿದೆ’ ಎಂದರು.
ಜಾಗೃತಿ ಮೂಡಿಸುತ್ತಿದ್ದರು:
‘ಮಹದೇಶ್ವರ ಅವರು ಜನರ ಬದುಕಿನ ನೋವು, ಕಷ್ಟಗಳನ್ನು ಜಾನಪದ ಸಾಹಿತ್ಯದ ಮೂಲಕ ಹೇಳುತ್ತಿದ್ದರು. ಬದುಕನ್ನು ಅರ್ಥಪೂರ್ಣವಾಗಿ ಹೇಳಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದರು. ಅವರು ಜಾನಪದ ಸಾಹಿತ್ಯದ ನಾಯಕ. ಸಮಾಜದ ಸುಧಾರಣೆ ಮೂಲಕ ಜನರನ್ನು ಎಚ್ಚರಗೊಳಿಸುತ್ತಿದ್ದರು. ಜನರನ್ನೆಲ್ಲ ಒಂದೇ ಕಡೆ ಸೇರಿಸಿ ನಾವೆಲ್ಲರೂ ಒಂದೇ ಎನ್ನುವುದನ್ನು ತಿಳಿಸುವುದು, ಯಾವುದೇ ತಾರತಮ್ಯ ಮಾಡದೇ ಮನುಷ್ಯರೆಲ್ಲರೂ ಒಂದೇ ಎಂಬುದು ಅವರ ತತ್ವವಾಗಿತ್ತು’ ಎಂದರು.
‘ಹುಟ್ಟೂರು ಹದಿನಾರು ಗ್ರಾಮದ ಜನರಿಗೆ ಒಳ್ಳೆಯದನ್ನು ಮಾಡಬೇಕು ಎಂದು ತಂದೆ–ತಾಯಿ ಹೇಳಿದ್ದರು. ರಸ್ತೆ, ದೇವಸ್ಥಾನ ಅಭಿವೃದ್ಧಿ, ಕುಡಿಯುವ ನೀರಿನ ವ್ಯವಸ್ಥೆ ಉತ್ತಮವಾಗಿ ಮಾಡಿಕೊಡಬೇಕು ಎಂದು ತಿಳಿಸಿದ್ದರು. ಅದರಂತೆ ನಡೆದುಕೊಂಡು, ಅಭಿವೃದ್ಧಿಪಡಿಸುತ್ತಾ ಬರುತ್ತಿದ್ದೇನೆ. ತಾಯಿಯೇ ನನಗೆ ಪ್ರೇರಣೆ’ ಎಂದು ಸ್ಮರಿಸಿದರು.
ಚಾಮರಾಜನಗರ ಸಂಸದ ಸುನೀಲ್ ಬೋಸ್ ಮಾತನಾಡಿ, ‘ಉನ್ನತ ಸ್ಥಾನಕ್ಕೆ ಹೋದವರು ಹುಟ್ಟೂರಿಗೆ ಒಂದಿಷ್ಟು ಒಳ್ಳೆಯ ಕೆಲಸ ಮಾಡಬೇಕು. ಅದೇ ರೀತಿ ಮಹದೇವಪ್ಪ ಅವರು ಸ್ವಗ್ರಾಮಕ್ಕೆ ಒಳ್ಳೆಯ ಕೆಲಸ ಮಾಡಿಕೊಡುತ್ತಿದ್ದಾರೆ. ಲೋಕೋಪಯೋಗಿ ಸಚಿವರಾಗಿದ್ದಾಗ ಇಲ್ಲಿ ಅನೇಕ ರಸ್ತೆಗಳು, ಸೇತುವೆ ನಿರ್ಮಿಸಿಕೊಟ್ಟಿದ್ದರು. ಈಗ ದೇವಸ್ಥಾನ ಅಭಿವೃದ್ಧಿಪಡಿಸಿ, ಸುತ್ತಲೂ ಸುಂದರ ಉದ್ಯಾನವನ್ನು ರೂಪಿಸಲಾಗಿದೆ’ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸಿಇಒ ಎಸ್. ಯುಕೇಶ್‌ಕುಮಾರ್, ನಗರ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್, ಎಸ್‌ಪಿ ಎನ್. ವಿಷ್ಣುವರ್ಧನ್, ಮಹಾನಗರ ಪಾಲಿಕೆಯ ಆಯುಕ್ತ ಶೇಖ್ ತನ್ವೀರ್ ಅಸೀಫ್, ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ರಂಗಸ್ವಾಮಿ, ಹದಿನಾರು ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಸಣ್ಣತಾಯಮ್ಮ ಪಾಲ್ಗೊಂಡಿದ್ದರು.
ಧಾರ್ಮಿಕ ಕ್ಷೇತ್ರವಾಗಲಿದೆ... ‘
ಹದಿನಾರು ಗ್ರಾಮದ ಪಕ್ಕದಲ್ಲಿ ಚಿತ್ರನಗರಿ ಕಾರ್ಖಾನೆಗಳು ಸ್ಥಾಪನೆಯಾಗಲಿದ್ದು ಪ್ರವಾಸಿತಾಣವಾಗುವ ಜೊತೆಗೆ ಮಹದೇಶ್ವರ ದೇವಸ್ಥಾನದ ಕಾರಣದಿಂದ ಧಾರ್ಮಿಕ ಕ್ಷೇತ್ರವಾಗುವುದೂ ಖಂಡಿತ. ಆದ್ದರಿಂದ ಈ ಸ್ಥಳದ ಸ್ವಚ್ಛತೆಯನ್ನು ಕಾಪಾಡಬೇಕು. ಸರ್ಕಾರ ಜನರ ಅನುಕೂಲಕ್ಕಾಗಿ ಅನೇಕ ಸೌಕರ್ಯಗಳನ್ನು ಒದಗಿಸಲಾಗಿದ್ದು ಅದನ್ನು ಪಡೆದುಕೊಳ್ಳಬೇಕು’ ಎಂದು ಮಹದೇವಪ್ಪ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.