ADVERTISEMENT

ನಾಯಕತ್ವ ಬದಲಾವಣೆ: ಹೈಕಮಾಂಡ್ ಬಿಟ್ಟು ಬೇರೆ ಯಾರೇ ಮಾತನಾಡಿದರೂ ಅರ್ಥವಿಲ್ಲ- HCM

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2025, 8:34 IST
Last Updated 4 ಅಕ್ಟೋಬರ್ 2025, 8:34 IST
<div class="paragraphs"><p>ಎಚ್‌.ಸಿ. ಮಹದೇವಪ್ಪ&nbsp;</p></div>

ಎಚ್‌.ಸಿ. ಮಹದೇವಪ್ಪ 

   

ಮೈಸೂರು: ‘ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಇದ್ದಾರೆ, ಅವರೇ ಮುಂದುವರಿಯುತ್ತಾರೆ’ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಹೇಳಿದರು.

ಇಲ್ಲಿ ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಆಯಾ ಕಾಲಕ್ಕೆ ರಾಜಕೀಯ ನಿರ್ಧಾರಗಳನ್ನು ನಮ್ಮ ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುತ್ತದೆ. ಹೈಕಮಾಂಡ್ ಬಿಟ್ಟು ಉಳಿದವರು ಏನೇ ಮಾತನಾಡಿದರೂ ಅದರಲ್ಲಿ ಪ್ರಯೋಜನವೂ ಇಲ್ಲ; ಅರ್ಥವೂ ಇಲ್ಲ’ ಎಂದರು.

‘ಕೆಲವು ರಾಜ್ಯಗಳಲ್ಲಿ ಕೆಮ್ಮಿನ ಸಿರಪ್ ಕುಡಿದು ಮಕ್ಕಳ ಸಾವು ಪ್ರಕರಣ ಆತಂಕಕಾರಿಯಾದುರು. ಮಾರುಕಟ್ಟೆಗೆ ಔಷಧ ಬಿಡುಗಡೆಗೆ ಮುನ್ನವೇ ಪರೀಕ್ಷೆ ನಡೆಸಬೇಕಿತ್ತು. ಈಗ ಅದನ್ನು ಬಳಸಬೇಡಿ ಎಂದು ಕೇಂದ್ರ ಸರ್ಕಾರ ಹೇಳಿರುವುದು ಸರಿಯಾದ ಕ್ರಮವಲ್ಲ. 11 ಮಕ್ಕಳು ಸಾವಿಗೀಡಾಗಿರುವುದು ವಿಷಾದಕರ. ಕೇಂದ್ರವು ಈ ಅನಾಹುತ ಸಂಭವಿಸುವ ಮುನ್ನವೇ ಕ್ರಮ ತೆಗೆದುಕೊಳ್ಳಬೇಕಿತ್ತು’ ಎಂದು ಹೇಳಿದರು.

‘ನಾಡಹಬ್ಬ ಮೈಸೂರು ದಸರಾ ಮಹೋತ್ಸವವನ್ನು ಯಶಸ್ವಿಯಾಗಿ ಮಾಡಿದ್ದೇವೆ. ಈ ಬಾರಿ ಜನರ ದಸರಾ ನಡೆದಿದೆ. 11 ದಿನಗಳಲ್ಲಿ ಸಾವಿರ ಟನ್ ಕಸ ಸಂಗ್ರಹವಾಗಿದೆ. ಪೌರಕಾರ್ಮಿಕರ ಪರಿಶ್ರಮದಿಂದ ಇಡೀ ನಗರ ಸ್ವಚ್ಛವಾಗಿದೆ. ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಜಿಲ್ಲಾಡಳಿತ, ಪೊಲೀಸ್ ಇಲಾಖೆ ಸೇರಿದಂತೆ ಎಲ್ಲರೂ ಮನೆಯ ಹಬ್ಬದಂತೆ ದಸರಾ ಮಾಡಿದರು. ಆರಂಭದಲ್ಲಿ ಸ್ವಲ್ಪ ಗೊಂದಲ ಇತ್ತು. ನಂತರ ಎಲ್ಲವನ್ನೂ ಬಗೆಹರಿಸಿಕೊಂಡು ಯಶಸ್ವಿಗೊಳಿಸಿದ್ದೇವೆ’ ಎಂದರು.

‘ನಮಗೆ ದಸರಾದಲ್ಲಿ ಯಾವುದೇ ರಾಜಕೀಯ ಕಾರ್ಯಸೂಚಿ ಇರಲಿಲ್ಲ. ಹೀಗಾಗಿಯೇ ಯಾವುದೇ ಆತಂಕವಿಲ್ಲದೆ ನಡೆಸಿದ್ದೇವೆ’ ಎಂದು ಹೇಳಿದರು.

ದಸರಾ ಜಂಬೂಸವಾರಿಗೆ ಅರಮನೆ ಆವರಣದಲ್ಲಿ ಆಗಮಿಸುವಾಗ ತೆರೆದ ಜೀಪ್‌ನಲ್ಲಿ ಮೊಮ್ಮನಗನ್ನೂ ಕರೆದುಕೊಂಡು ಬಂದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಚರ್ಚೆಯಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಅಲ್ಲಿ ಯಾವುದೇ ಶಿಷ್ಟಾಚಾರ ಉಲ್ಲಂಘನೆಯಾಗಿಲ್ಲ. ಅದು ಶಿಷ್ಟಾಚಾರದ ವ್ಯಾಪ್ತಿಗೆ ಬರುವುದೇ ಇಲ್ಲ. ಅದು ಕವಾಯತು ಅಥವಾ ಧ್ವಜವಂದನೆ ಅಲ್ಲ. ಜನರಿಗೆ ವಂದನೆ ಸಲ್ಲಿಸಲು ಎಲ್ಲರೂ ಒಟ್ಟಾಗಿ ಹೋದೆವಷ್ಟೆ. ದಸರಾ ಅಚರಣೆ ಬಗ್ಗೆ ಗೊತ್ತಿಲ್ಲದವರು ಸುಮ್ಮನೆ ವಿವಾದ ಮಾಡುತ್ತಾರಷ್ಟೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.