ADVERTISEMENT

ತೆರಿಗೆದಾರರ ಹಣ ಪೋಲು, ಬೇಜವಾಬ್ದಾರಿ: ಮಹದೇವಪ್ಪ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2022, 13:30 IST
Last Updated 27 ನವೆಂಬರ್ 2022, 13:30 IST
ಡಾ.ಎಚ್‌.ಸಿ.ಮಹದೇವಪ್ಪ
ಡಾ.ಎಚ್‌.ಸಿ.ಮಹದೇವಪ್ಪ   

ಮೈಸೂರು: ‘ಮೈಸೂರಿನ ಭವ್ಯ ಪರಂಪರೆಯ ಮಹತ್ವ ಅರಿಯದ ಬಿಜೆಪಿಯ ಸಂಸದ ಪ್ರತಾಪ ಸಿಂಹ ಮತ್ತು ಶಾಸಕ ಎಸ್.ಎ.ರಾಮದಾಸ್, ಬಸ್ ನಿಲ್ದಾಣದ ಮೇಲಿನ ಗುಂಬಜ್ ಒಡೆದು ಹಾಕುವ ಹುಚ್ಚಾಟವನ್ನು ಪ್ರದರ್ಶಿಸುತ್ತಿದ್ದಾರೆ. ಅವರು, ತೆರಿಗೆದಾರರ ಹಣವನ್ನು ಪೋಲು ಮಾಡುವಂತಹ ಬೇಜವಾಬ್ದಾರಿ ನಡವಳಿಕೆಯನ್ನು ತೋರುತ್ತಿರುವುದು ನಿಜಕ್ಕೂ ಖಂಡನೀಯ ಸಂಗತಿಯಾಗಿದೆ’ ಎಂದು ಕಾಂಗ್ರೆಸ್ ಮುಖಂಡ ಡಾ.ಎಚ್‌.ಸಿ.ಮಹದೇವಪ್ಪ ಟೀಕಿಸಿದ್ದಾರೆ.

ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ‘ಇಡೀ ಮೈಸೂರಿನ ತುಂಬಾ ಗುಂಬಜ್‌ನಂತಹ ವಿನ್ಯಾಸಗಳು ನಗರದ ಅಂದವನ್ನು ಹೆಚ್ಚಿಸಿದ್ದು ಪ್ರವಾಸಿಗರಿಗೆ ಪಾರಂಪರಿಕ ಎನ್ನುವ ಭಾವನೆಯನ್ನು ಹುಟ್ಟು ಹಾಕುತ್ತದೆ. ಆದರೆ, ಇಂಥ ವಿನ್ಯಾಸದ ಮಹತ್ವ ತಿಳಿಯದೇ ಮೈಸೂರಿನಲ್ಲಿ ವಿಕೃತಿ ತೋರುತ್ತಿರುವ ಬಿಜೆಪಿಗರು ನಿಜಕ್ಕೂ ಸಾರ್ವಜನಿಕ ಬದುಕಿನ ಜವಾಬ್ದಾರಿ ಏನು ಎಂಬುದನ್ನು ತಿಳಿಯದೇ ವರ್ತಿಸುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

‘ಭಾರತವನ್ನು ಮೊಘಲರು, ಬ್ರಿಟಿಷರು ಆಳಿದ್ದಾರೆ. ಮೌರ್ಯರು, ಡಚ್ಚರು, ಫ್ರೆಂಚರು ಮತ್ತು ಪೋರ್ಚುಗೀಸರೂ ಆಳಿದ್ದರೂ ದೇಶವು ಯಾವುದೋ ಒಂದು ಧರ್ಮದ ದೇಶವಾಗಿ ಪರಿವರ್ತನೆಯಾಗಿಲ್ಲ. ವೈವಿಧ್ಯತೆಗಳಿಂದಾಗಿ ಭಾರತವಾಗಿಯೇ ಉಳಿದಿದೆ. ಹೀಗಿದ್ದರೂ ಅಭಿವೃದ್ಧಿಯ ವಿಷಯಗಳನ್ನು ಮರೆ ಮಾಚಲು ಮತ್ತು ಚುನಾವಣಾ ಕಾಲದಲ್ಲಿ ಅನಗತ್ಯ ಗೊಂದಲ ಸೃಷ್ಟಿಸುವ ಸಲುವಾಗಿ ಕೋಮು ರಾಜಕೀಯ ಮಾಡುತ್ತಿರುವ ಸಂಸದರು ಮತ್ತು ಶಾಸಕರು ಕೂಡಲೇ ತಮ್ಮ ಬೇಜವಾಬ್ದಾರಿ ನಡವಳಿಕೆಯನ್ನು ನಿಲ್ಲಿಸಬೇಕು. ಜನರ ತೆರಿಗೆ ಹಣವನ್ನು ಪೋಲು ಮಾಡಬಾರದು’ ಎಂದು ಆಗ್ರಹಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.