ಹಂಪಾಪುರ (ಮೈಸೂರು ಜಿಲ್ಲೆ): ಎಚ್.ಡಿ. ಕೋಟೆ ತಾಲ್ಲೂಕಿನಲ್ಲಿ ತಂಬಾಕು ಮತ್ತು ಹತ್ತಿಗೆ ಪರ್ಯಾಯವಾಗಿ ರೈತರು ಮೆಕ್ಕೆಜೋಳವನ್ನು ಬೆಳೆಯುತ್ತಿದ್ದು, ಬಲಿಯದ ಬೆಳೆಯನ್ನು ಮೇವಿನ ರೂಪದಲ್ಲಿ ನೆರೆಯ ಕೇರಳಕ್ಕೆ ಮಾರಾಟ ಮಾಡುವ ಮೂಲಕ ಉತ್ತಮ ಆದಾಯ ಗಳಿಸುತ್ತಿದ್ದಾರೆ.
ತಾಲ್ಲೂಕಿನ ಬೆಳಗನಹಳ್ಳಿ, ಹೊಸತೊರವಳ್ಳಿ, ಹಾರೋಪುರ, ಕೊಡಸೀಗೆ, ಮಗ್ಗೆ, ಅಂತರಸಂತೆ, ಹೆಗ್ಗನೂರು, ಮಾದಾಪುರ, ಚಿಕ್ಕೆರೆಯೂರು, ಹೊಸಹೊಳಲು ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ. ಬೆಳೆ ಬಲಿತು ಕಟಾವಿಗೆ ಬರಲು ಮೂರೂವರೆ ತಿಂಗಳು ಬೇಕು. ಆದರೆ ರೈತರು ಎರಡೂವರೆ ತಿಂಗಳ ಬೆಳೆಯನ್ನು ಕಟಾವು ಮಾಡಿ, ತೂಕದ ಲೆಕ್ಕದಲ್ಲಿ ಮಾರುತ್ತಿದ್ದಾರೆ. ಒಂದು ಟನ್ ಜೋಳಕ್ಕೆ ₹1,900ರಿಂದ ₹2,500 ಪಡೆಯುತ್ತಿದ್ದಾರೆ.
‘ಒಂದು ಎಕರೆಯಲ್ಲಿ ಬೆಳೆಯಲು ₹8 ಸಾವಿರದವರೆಗೆ ಖರ್ಚಾಗುತ್ತದೆ. 19ರಿಂದ 20 ಟನ್ ಮೇವಿನ ಕಡ್ಡಿ ದೊರೆಯುತ್ತಿದ್ದು, ₹40 ಸಾವಿರದಿಂದ ₹45 ಸಾವಿರಕ್ಕೆ ಮಾರಾಟವಾಗುತ್ತಿದೆ. ಖರ್ಚು ಕಳೆದು ₹30 ಸಾವಿರದಿಂದ ₹35 ಸಾವಿರದವರೆಗೆ ಲಾಭ ದೊರೆಯುತ್ತಿದೆ’ ಎನ್ನುತ್ತಾರೆ ಬೆಳಗನಹಳ್ಳಿ ರೈತರು.
‘ಮೆಕ್ಕೆಜೋಳವನ್ನು ಪೂರ್ಣ ಪ್ರಮಾಣದಲ್ಲಿ ಬೆಳೆದು, ಕಟಾವು ಮಾಡಿ, ಜೋಳ ಬಿಡಿಸಿ ಮಾರುವವರೆಗೆ ಖರ್ಚು ಹೆಚ್ಚು. ಎಕರೆಗೆ 15 ರಿಂದ 16 ಕ್ವಿಂಟಲ್ ಇಳುವರಿ ಸಿಗುತ್ತದೆ. ಕ್ವಿಂಟಲ್‌ಗೆ ₹1,200 ದರವಿದ್ದು, ಎಕರೆಗೆ ₹17 ಸಾವಿರದವರೆಗೆ ದೊರೆಯುತ್ತದೆ. ಕಟಾವು ಮುಗಿಸುವವರೆಗೆ ₹15 ಸಾವಿರ ಖರ್ಚಾಗುತ್ತದೆ. ಹಾಗಾಗಿ, ಜೋಳದ ಕಡ್ಡಿ ಮಾರಿದರೆ ಲಾಭ ಗಳಿಸಬಹುದು’ ಎನ್ನುತ್ತಾರೆ ಕೊಡಸೀಗೆ ಗ್ರಾಮದ ರೈತ ನಂಜುಂಡ.
‘ಕೇರಳದ ಮಾನಂದವಾಡಿ ಹಾಗೂ ವೈನಾಡಿನ ಪಟ್ಟಣ ಮತ್ತು ನಗರ ಪ್ರದೇಶಗಳ ಮನೆಗಳಲ್ಲಿ ಹಾಲಿಗಾಗಿ ಹಸುಗಳನ್ನು ಸಾಕಿರುವವರು ಮೇವಿಗಾಗಿ ಪರದಾಡುತ್ತಿದ್ದಾರೆ. ಹೀಗಾಗಿ ಜೋಳದ ಕಡ್ಡಿಗಳನ್ನು ಖರೀದಿಸಿ, ಕಂತೆ ಲೆಕ್ಕದಲ್ಲಿ ಮಾರುತ್ತಿದ್ದೇವೆ. ನಮಗೂ ಲಾಭವಿದೆ’ ಎನ್ನುತ್ತಾರೆ ಮಾನಂದವಾಡಿಯ ಗೂಡ್ಸ್ ವಾಹನ ಮಾಲೀಕ ಮನೀಶ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.