ADVERTISEMENT

ಮಾನಸ ಗಂಗೋತ್ರಿಯ 'ಡೌನ್ಸ್‌' ವೈಭವ ಕಣ್ಮರೆ

ಪವನ ಎಚ್.ಎಸ್
Published 8 ಜೂನ್ 2019, 5:02 IST
Last Updated 8 ಜೂನ್ 2019, 5:02 IST
   

ಅದೊಂದು ಅದ್ಭುತ ಲೋಕ... ಕುಂಚ ಹಿಡಿದು ನಿಂತ ಕಲಾವಿದರ ಮುಂದಿದ್ದ ಕ್ಯಾನ್‌ವಾಸ್‌ಗಳಂತೆ... ಪರಿಕಲ್ಪನೆ ಒಂದೇ ಆದರೂ ಆರಳುವ ಚಿತ್ರ ಬಗೆಬಗೆಯಾಗಿರುವಂತೆ...

ಕೆಲವರು ಬೀಡಿ ಸೇದುತ್ತಾ ಪುಸ್‌ ಎಂದು ಹೊಗೆ ಬಿಡುತ್ತಿದ್ದರೆ, ಸಿಗರೆಟ್ ಎಳೆಯುತ್ತಾ ಬಾಯಿಂದ ಸುರುಳಿ ಸುರಳಿಯಾಗಿ ಧೂಮವನ್ನು ಹೊರಹಾಕುವ ಕಲಾವಿದರು ಅಲ್ಲಿದ್ದರು.

ಬಿಸಿ ಬಿಸಿ ಫುಲಾವ್‌, ಫ್ರೈಡ್‌ರೈಸ್‌, ಜೀರಾ ರೈಸ್, ಸಮೋಸವನ್ನು ಸಾಸ್‌ ಜೊತೆಗೆ ಚಪ್ಪರಿಸುವರು ಕೆಲವರಿದ್ದರೆ, ಮನೆಯಿಂದ ಕಟ್ಟಿಕೊಂಡುಬಂದಿದ್ದ ಬುತ್ತಿಯನ್ನು ಗಂಟೆ ಗಟ್ಟಲೆ ತಿನ್ನುವವರೂ ಅಲ್ಲಿನ ಗೋದ್ರೆಜ್‌ ಚೇರುಗಳನ್ನು ಅಲಂಕರಿಸುತ್ತಿದ್ದರು. ತಣ್ಣನೆಯ ಲೈಮ್‌ಸೋಡಾ, ಜೀರಾ ಸೋಡಾ, ಕೋಕ್, ಪೆಪ್ಸಿ, ಸವೆನ್‌ಅಪ್‌ ಕುಡಿಯುವವರು, ಬಿಸಿ ಬಿಸಿ ಕಾಫಿ, ಟೀ, ಬಾದಾಮಿ ಹಾಲನ್ನು ಸವಿಯುತ್ತಾ ಲೋಕಾಭಿರಾಮವಾಗಿ ಮಾತನಾಡಲು ಸೇರುತ್ತಿದ್ದ ತಾಣ ಮಾನಸಗಂಗೋತ್ರಿಯ ಡೌನ್ಸ್‌ ಕ್ಯಾಂಟೀನ್‌.

ADVERTISEMENT

ಗಂಗೋತ್ರಿ ಮತ್ತು ಜೆಸಿಇ ನಡುವಿನ ತಗ್ಗಿನ ಪ್ರದೇಶದಲ್ಲಿ ಹತ್ತಾರು ಟೇಬಲ್ ಖುರ್ಚಿಗಳ ಹಾಗೂ ನಾಲ್ಕೈದು ಮಳಿಗೆಗಳನ್ನು, ಅಂಚೇ ಕಚೇರಿಯನ್ನು ಹೊಂದಿದ್ದ ಈ ಸ್ಥಳವೇ ಜನರ ಬಾಯಲ್ಲಿ ಡೌನ್ಸ್‌ ಆಗಿತ್ತು.

ಹಚ್ಚ ಹಸಿರಿನ ಸುಂದರ ತಾಣದಲ್ಲಿ ಇರುವ ತಾಣವಾಗಿದ್ದ ಡೌನ್ಸ್‌ನ ವೈಭೋಗ ಈಗ ಮರೆಯಾಗಿದೆ. ಚಿಕ್ಕ ಮಳಿಗೆಗಳಿದ್ದ ತಾಣದಲ್ಲಿ ದೊಡ್ಡ ಕಾಂಪ್ಲೆಕ್ಸ್ ತಲೆ ಎತ್ತುತ್ತಿದೆ. ಈ ಮೂಲಕ ಗಂಗೋತ್ರಿಗೊಂದು ಕಳೆ ತಂದುಕೊಟ್ಟಿದ್ದ ಡೌನ್ಸ್‌ ಜನಮಾನಸದಿಂದ ಮರೆಯಾಗುತ್ತಿದೆ.

ಬಡಕಲು ಬೀದಿ ನಾಯಿ, ಅದರಿಂದ ತುತ್ತನ್ನು ಕಸಿದುಕೊಳ್ಳುವ ಕಾಗೆಗಳು, ದೂರದಲ್ಲಿ ಚಿಲಿಪಿಲಿಗುಟ್ಟು ಗುಬ್ಬಿಗಳು ಸೇರಿದಂತೆ ಹುಡುಗ ಹುಡಗಿಯರ ಹಿಂಡಿನ ಕಲರವವಿಲ್ಲದೆ ಆ ತಾಣವೀಗ ಬಿಕೋ ಎನ್ನುತ್ತಿದೆ. ಗುರು ಹಾಗೂ ಶಿಷ್ಯರ ಪಟಾಲಂ, ವಿಚಾರವಾದಿಗಳು, ವಿತಂಡವಾದಿಗಳು ಗಹನವಾಗಿ ಚರ್ಚಿಸುತ್ತಿದ್ದ, ಪ್ರೇಮಿಗಳು, ಭಗ್ನ ಪ್ರೇಮಿಗಳು ಸದಾ ಎಡತಾಕುತ್ತಿದ್ದ ಜಾಗದ ಇತಿಹಾಸವೇ ರೋಮಾಂಚಕ.

ಅತ್ತ ಜಯಚಾಮರಾಜೇಂದ್ರ ಎಂಜಿನಿಯರಿಂಗ್‌ ಕಾಲೇಜು ಕಡೆಯಿಂದ ಬಂದರೂ, ಇತ್ತ ಮಾನಸ ಗಂಗೋತ್ರಿಯ ಹೃದಯಭಾಗದಂತಿರುವ ಲೈಬ್ರರಿ ಕಡೆಯಿಂದ ಬಂದರೂ ಇಳಿಜಾರು ಇರುವುದರಿಂದ ಇದಕ್ಕೆ ಡೌನ್‌ ಕ್ಯಾಂಟೀನ್‌ ಎಂದು ಕರೆಯಲಾಗುತ್ತಿತ್ತು.

ಮಾವು, ತೆಂಗು ಸಫೋಟ ಸೇರಿದಂತೆ ವಿವಿಧ ಗಿಡಗಳಿಂದಾಗಿ ಹಸಿರಿನಿಂದ ಕೂಡಿದ್ದ, ಸದಾ ತಂಗಾಳಿ ಮೈಸೋಕುತ್ತಿದ್ದ ಕಾರಣದಿಂದಾಗಿಯೂ ಅದು ವಾಯುವಿಹಾರಿಗಳ ನೆಚ್ಚಿನ ತಾಣವಾಗಿತ್ತು. ಜೆಸಿಯಲ್ಲಿ ಓದುತ್ತಿದ್ದ ಹೈಫ್‌ ಮಂದಿ, ಶಾರ್ಟ್ಸ್‌, ಸ್ಕರ್ಟ್‌ ಅಂತ ಮಾಡ್ರೆನ್‌ ಡ್ರೆಸ್‌ ಹಾಕಿಕೊಂಡು ಕಾರಿನ ಬಾನೆಟ್‌ ಮೇಲೆ ಕುಳಿತು ಹರಟೆ ಹೊಡೆಯುವ ಹೆಣ್ಣೈಕ್ಳುಗಳಿಂದಾಗಿಯೇ ಆ ಜಾಗ ಹೆಚ್ಚು ಆಕರ್ಷಣೀಯವಾಗಿತ್ತು ಎಂಬುದು ಸುಳ್ಳಲ್ಲ.

₹150 ಕೋಟಿಯಲ್ಲಿ ಹೊಸ ಕಟ್ಟಡ:ಆದರೆ, 2016ರಲ್ಲಿ ಕೇಂದ್ರ ಸರ್ಕಾರದ ₹150 ಕೋಟಿ ಅನುದಾನದಲ್ಲಿ ಕ್ಯಾಂಟೀನ್‌ ಅನ್ನು ಮೇಲ್ದರ್ಜೆಗೆ ಏರಿಸುವ ಕಾಮಗಾರಿ ನಡೆಸಲಾಗುತ್ತಿದೆ. ಇದರಿಂದಾಗಿ ಹಳೆಯ ಮಳಿಗೆಗಳನ್ನು ಮುಚ್ಚಿ ಅದೇ ಜಾಗದಲ್ಲಿ ಭವ್ಯ ಕಟ್ಟಡ ಮೈದಳೆದಿದೆ. ಆದರೆ, ಅದಕ್ಕೆ ಇನ್ನೂ ಉದ್ಘಾಟನೆ ಭಾಗ್ಯ ಕೂಡಿಬಂದಿಲ್ಲ.

ಎರಡು ಅಂತಸ್ಥಿನ ಈ ಕಟ್ಟಡದೊಳಗೆ ವಿವಿಧ ಮಳಿಗೆಗಳನ್ನು ನಿರ್ಮಿಸಲಾಗಿದೆ. ಎರಡನೇ ಮಹಡಿಯಲ್ಲಿ ವಿಶಾಲವಾದ ಜಾಗದಲ್ಲಿ ಕ್ಯಾಂಟೀನ್‌ ಸೌಲಭ್ಯಕ್ಕೆ ಅವಕಾಶ ಕಲ್ಪಿಸಲಾಗಿದ್ದು ಹೊಸ ರೂಪ ನೀಡಲಾಗುತ್ತಿದೆ.

‘ಕಾಂಕ್ರೀಟ್‌ ಕಟ್ಟಡದೊಳಗೆ ಮಳಿಗೆಗಳನ್ನು ನಿರ್ಮಿಸಲಾಗುತ್ತಿದೆ. ಅಭಿವೃದ್ಧಿ ಎನ್ನುವ ಹೆಸರಿನಲ್ಲಿ ಮಾತ್ರ ಈ ಕಟ್ಟಡವನ್ನು ನಿರ್ಮಿಸಲಾಗಿದೆ. ಆದರೆ, ಹೊರಾಂಗಣದಲ್ಲಿ, ಮರದ ನೆರಳಿನಲ್ಲಿ, ತಂಗಾಳಿಯನ್ನು ಆಸ್ವಾದಿಸುತ್ತ ಚರ್ಚೆಗಳಲ್ಲಿ ಭಾಗವಹಿಸುವುದು, ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗುವುದರಿಂದ ಸಿಗುವ ಉತ್ಸಾಹ ಇಲ್ಲಿ ಸಿಗಲು ಸಾಧ್ಯವೇ ಇಲ್ಲ ಎನ್ನುತ್ತಾರೆ ಮಾನಸ ಗಂಗೋತ್ರಿಯ ಹಿರಿಯ ವಿದ್ಯಾರ್ಥಿ ಫಾಲಾಕ್ಷ.

ಆಕರ್ಷಿಸುತ್ತಿದೆ ರೌಂಡ್‌ ಕ್ಯಾಂಟೀನ್‌:ಡೌನ್ಸ್‌ ಕ್ಯಾಂಟೀನ್ ಮುಚ್ಚಿರುವ ಕಾರಣ ಮಾನಸ ಗಂಗೋತ್ರಿಯ ಹೃದಯ ಭಾಗದಲ್ಲಿರುವ ರೌಂಡ್‌ ಕ್ಯಾಂಟೀನ್‌ ಎಲ್ಲರನ್ನೂ ತನ್ನತ್ತ ಆಕರ್ಷಿಸುತ್ತಿದೆ. ಈಗ ಇದು ವಿದ್ಯಾರ್ಥಿಗಳ ನೆಚ್ಚಿನ ತಾಣವಾಗಿದೆ.

ಗೋಳಾಕಾರದಲ್ಲಿ ಇರುವ ಈ ಕ್ಯಾಂಟೀನ್‌ ಈಗ ಮುಂದಿರುವ ಆವರಣಕ್ಕೂ ವಿಸ್ತರಿಸಿದ್ದು, ವಿದ್ಯಾರ್ಥಿಗಳಿಗೆ ಆರಾಮವಾಗಿ ಕುಳಿತು ಹೊಟ್ಟೆಯೊಂದಿಗೆ ಮಸ್ತಕಾಭಿವೃದ್ಧಿಗೆ ಉತ್ತಮ ವಾತಾವರಣ ನಿರ್ಮಿಸಿದೆ. ಈಗ ಡೌನ್ಸ್‌ಗೆ ಪರ್ಯಾಯವಾಗಿರುವ ಈ ಕ್ಯಾಂಟೀನ್‌ ಇತ್ತೀಚಿನ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಾಗಿದೆ. ಆದರೆ, ಹಿರಿಯ ವಿದ್ಯಾರ್ಥಿಗಳು ಎಂದಿಗೂ ಡೌನ್ಸ್‌ನ ಒಡನಾಟವನ್ನು ಮರೆಯಲು ಸಾಧ್ಯವೇ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.