ADVERTISEMENT

ಕಳೆದ ಸಾಲಿನ ಪಠ್ಯವನ್ನೇ ಮುಂದುವರಿಸಿ: ಮರಿತಿಬ್ಬೇಗೌಡ

​ಪ್ರಜಾವಾಣಿ ವಾರ್ತೆ
Published 4 ಜುಲೈ 2022, 14:36 IST
Last Updated 4 ಜುಲೈ 2022, 14:36 IST

ಮೈಸೂರು: ‘ಶಾಲೆಗಳಲ್ಲಿ ಕಳೆದ ಸಾಲಿನ ಪಠ್ಯಪುಸ್ತಕವನ್ನೇ ಮಕ್ಕಳಿಗೆ ಬೋಧಿಸಬೇಕು’ ಎಂದು ವಿಧಾನಪರಿಷತ್‌ ಸದಸ್ಯ ಮರಿತಿಬ್ಬೇಗೌಡ ಒತ್ತಾಯಿಸಿದ್ದಾರೆ.

ಈ ಬಗ್ಗೆ ಸೋಮವಾರ ಪ್ರಕಟಣೆ ನೀಡಿರುವ ಅವರು, ‘ಪಠ್ಯಪುಸ್ತಕ ಮರು ಪರಿಷ್ಕರಣೆ ಮಾಡುವಲ್ಲಿ ಸಮಿತಿಯಿಂದ ಉಂಟಾದ ಗೊಂದಲಗಳಿಂದ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆ ಉಂಟಾಗಿದೆ. ಗೊಂದಲಗಳನ್ನು ಸರಿಪಡಿಸಲು ರಾಜ್ಯ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳದೆ ಇರುವುದು ದುರದೃಷ್ಟದ ಸಂಗತಿ. ಇಂತಹ ವಿಚಾರಗಳಲ್ಲಿ ಹಟಮಾರಿ ಧೋರಣೆ ಅನುಸರಿಸುವುದು ಸಮಂಜಸವಲ್ಲ’ ಎಂದಿದ್ದಾರೆ.

‘ಒಂಬತ್ತು ಅಂಶಗಳನ್ನು ಸರಿಪಡಿಸುವುದಾಗಿ ಮುಖ್ಯಮಂತ್ರಿ ಹೇಳಿಕೆ ನೀಡಿ, ಆಕ್ಷೇಪಣೆಗೆ ಒಳಗಾಗಿರುವ ಅಂಶಗಳೇ ಇರುವ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿರುವುದು ಶೋಚನೀಯ ಸಂಗತಿಯಾಗಿದೆ’ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ADVERTISEMENT

‘ವಿದ್ಯಾರ್ಥಿಗಳಿಗೆ ದ್ವೇಷ, ಅಸೂಯೆ, ಅಶಾಂತಿ, ಜಾತಿ, ಧರ್ಮಗಳನ್ನು ಬಿತ್ತುವ ಮೂಲಕ ಅಧಿಕಾರ ಗಟ್ಟಿಗೊಳಿಸಿಕೊಳ್ಳುವುದೇ ಈ ಸರ್ಕಾರದ ಪ್ರಮುಖ ಉದ್ದೇಶವಿದ್ದಂತೆ ಕಾಣುತ್ತಿದೆ. ಇದರ ಬಗ್ಗೆ ನಾಡಿನ ಜನತೆ ಎಚ್ಚರ ವಹಿಸಬೇಕು. ಪಠ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಲ್ಲಿ ಪ್ರೀತಿ, ಕರುಣೆ, ದಯೆ, ಪರೋಪಕಾರ, ಸ್ನೇಹ, ಸೌಹಾರ್ದ, ಸಾಮಾಜಿಕ ಕಳಕಳಿ ಮೌಲ್ಯಾಧಾರಿತ ವಿಷಯಗಳನ್ನು ಜೋಡಣೆ ಮಾಡಬೇಕು. ಇದರಿಂದ ಮಾತ್ರ ಯಾವುದೇ ನಾಡಿನಲ್ಲಿ, ದೇಶದಲ್ಲಿ ಶಾಂತಿ ನೆಲೆಸಲು ಸಾಧ್ಯ’ ಎಂದಿದ್ದಾರೆ.

‘ಆಕ್ಷೇಪಾರ್ಹ ಅಂಶಗಳನ್ನು ಹೊಂದಿರುವ ಮರುಪರಿಷ್ಕರಣೆಯಾದ ಪಠ್ಯಪುಸ್ತಕಗಳನ್ನು ಈ ಸಾಲಿನಲ್ಲಿ ಬೋಧಿಸಬಾರು. ಸಾಹಿತಿಗಳು, ವಿಷಯ ತಜ್ಞರು, ಚಿಂತಕರೊಡನೆ ಸಮಾಲೋಚಿಸಿ ದೋಷಗಳನ್ನು ಸರಿಪಡಿಸಿ ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಬೋಧನೆಗೆ ಅವಕಾಶ ಮಾಡಿಕೊಡಕು’ ಎಂದು ಮುಖ್ಯಮಂತ್ರಿಯನ್ನು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.