ADVERTISEMENT

‘ಕೋವಿಡ್–19’ಗೆ ನೆಲಕಚ್ಚಿದ ತರಕಾರಿ, ಕುಕ್ಕುಟ್ಟೋದ್ಯಮ

ಬೇಡಿಕೆ ಇಲ್ಲದೇ ಕುಸಿದ ಧಾರಣೆಗಳು, ಬೆಳೆಗಾರರು ಕಂಗಾಲು

ಕೆ.ಎಸ್.ಗಿರೀಶ್
Published 10 ಮಾರ್ಚ್ 2020, 10:46 IST
Last Updated 10 ಮಾರ್ಚ್ 2020, 10:46 IST
ಕೋಳಿ
ಕೋಳಿ   

ಮೈಸೂರು: ‘ಕೋವಿಡ್–19’ ಸೋಂಕಿನ ಭೀತಿಯಿಂದ ನಗರದಲ್ಲಿ ತರಕಾರಿ ಮತ್ತು ಕುಕ್ಕುಟ್ಟೋದ್ಯಮದ ಉತ್ಪನ್ನಗಳು ಅಕ್ಷರಶಃ ನೆಲಕಚ್ಚಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ.

‘ಕೋವಿಡ್–19’ ದಾಂಗುಡಿ ಇಡುತ್ತಿದ್ದಂತೆ ಪ್ರವಾಸಿಗರಿಲ್ಲದೇ ಕೇರಳ ಭಣಗುಡಲಾರಂಭಿಸಿದೆ. ಇದರಿಂದ ಅಲ್ಲಿನ ಹೋಟೆಲ್ ಉದ್ಯಮದಲ್ಲಿ ವಹಿವಾಟು ಕಡಿಮೆಯಾಗಿದೆ. ಅಲ್ಲಿಂದ ಗಲ್ಫ್‌ ರಾಷ್ಟ್ರಗಳಿಗೆ ತರಕಾರಿ ರಫ್ತಾಗುವುದೂ ನಿಂತಿದೆ. ಹೀಗಾಗಿ, ಇಲ್ಲಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಕೇರಳ ವರ್ತಕರ ಸಂಖ್ಯೆ ಅರ್ಧದಷ್ಟು ಕಡಿಮೆಯಾಗಿದೆ.

ಬೇಡಿಕೆ ವ್ಯಕ್ತವಾಗದ ಕಾರಣ ತರಕಾರಿಗಳ ಸಗಟು ವಹಿವಾಟು ಒಂದಂಕಿಗೆ ಇಳಿದಿದೆ. ಎಲೆಕೋಸು ಮತ್ತು ಬದನೆ ಕೆ.ಜಿಗೆ 2, ಟೊಮೆಟೊ ₹ 4, ಬೀನ್ಸ್ ಮತ್ತು ಹಸಿಮೆಣಸಿನಕಾಯಿ ₹ 8ಕ್ಕೆ ಕುಸಿತ ಕಂಡಿವೆ. ಸಗಟು ಮಾರುಕಟ್ಟೆಯಲ್ಲಿ ತರಕಾರಿಗಳನ್ನು ಕೇಳುವವರೇ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ.

ADVERTISEMENT

ಮತ್ತೊಂದೆಡೆ ಕುಕ್ಕುಟ್ಟೋದ್ಯಮ ಗರ ಬಡಿದಂತಹ ಸ್ಥಿತಿಯಲ್ಲಿದೆ. ರಾಷ್ಟ್ರೀಯ ಮೊಟ್ಟೆ ದರ ಸಮನ್ವಯ ಸಮಿತಿಯ ದರವು ಒಂದು ಮೊಟ್ಟೆಗೆ ₹ 3.35ಕ್ಕೆ ಕುಸಿದಿದೆ. ಇದೇ ದರ ಹೊಸಪೇಟೆಯಲ್ಲಿ ₹ 2.95ಕ್ಕೆ ಕಡಿಮೆಯಾಗಿದೆ. ಕಳೆದ ತಿಂಗಳು ₹ 4.50ಕ್ಕೆ ಮೊಟ್ಟೆ ಮಾರಾಟವಾಗಿತ್ತು. ಕೋಳಿ ಹಾಗೂ ಕೋಳಿಮೊಟ್ಟೆಯನ್ನು ತಿಂದರೆ ‘ಕೋವಿಡ್ –19’ ಬರುತ್ತದೆ ಎಂಬ ತಪ್ಪು ವಾಟ್ಸ್‌ಆ್ಯಪ್ ಸಂದೇಶಗಳಿಂದಾಗಿ ಈ ಪರಿಸ್ಥಿತಿ ನಿರ್ಮಾಣವಾಗಿದೆ.

ಹಕ್ಕಿಜ್ವರವು ಕಲ್ಲಿಕೋಟೆಯಲ್ಲಿ ಕಾಣಿಸಿಕೊಂಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೋಳಿ ಮಾಂಸಕ್ಕೂ ಬೇಡಿಕೆ ಕಡಿಮೆಯಾಗಿ ಕುಕ್ಕುಟ್ಟೋದ್ಯಮ ತೀರಾ ಸಂಕಷ್ಟಕ್ಕೆ ಸಿಲುಕಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪು ಸಂದೇಶ

ಇಷ್ಟೆಲ್ಲ ಅನಾಹುತಗಳಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪು ಸಂದೇಶ ವೇಗವಾಗಿ ಹರಡುತ್ತಿರುವುದೇ ಕಾರಣ ಎಂದು ರಾಷ್ಟ್ರೀಯ ಮೊಟ್ಟೆ ದರ ಸಮನ್ವಯ ಸಮಿತಿ (ಎನ್‌ಇಸಿಸಿ)ಯ ಮೈಸೂರು ವಲಯದ ಮುಖ್ಯಸ್ಥ ಸತೀಶ್‌ಬಾಬು ಹೇಳುತ್ತಾರೆ. ಸರ್ಕಾರ ಇಂತಹ ತಪ್ಪು ಸಂದೇಶ ಹರಡುವುದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದೇ ಹೋದರೆ ಕೋಳಿ ಸಾಕಾಣಿಕೆದಾರರು ಬೀದಿಗೆ ಬೀಳುವುದು ಖಚಿತ ಎಂದು ಆತಂಕ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.