ADVERTISEMENT

‘ಅಂಕದ ಜತೆ ಕೌಶಲ ಗಳಿಸಿ’

ಮೈಸೂರು ವಿ.ವಿ.ಕುಲಪತಿ ಪ್ರೊ.ಜಿ.ಹೇಮಂತ್‌ಕುಮಾರ್‌ ಸಲಹೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2019, 14:35 IST
Last Updated 24 ಜುಲೈ 2019, 14:35 IST
ಮೈಸೂರಿನ ವಿಶ್ವಕವಿ ಕುವೆಂಪು ಪ್ರಥಮ ದರ್ಜೆ ಕಾಲೇಜು, ದೇಜಗೌ ಪ್ರಥಮ ದರ್ಜೆ ಸಂಜೆ ಕಾಲೇಜಿನಲ್ಲಿ ಮಂಗಳವಾರ ನಡೆದ ಸಾಂಸ್ಕೃತಿಕ ಹಾಗೂ ಎನ್‌ಎಸ್‌ಎಸ್‌, ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್‌ಕುಮಾರ್ ಮಾತನಾಡಿದರು
ಮೈಸೂರಿನ ವಿಶ್ವಕವಿ ಕುವೆಂಪು ಪ್ರಥಮ ದರ್ಜೆ ಕಾಲೇಜು, ದೇಜಗೌ ಪ್ರಥಮ ದರ್ಜೆ ಸಂಜೆ ಕಾಲೇಜಿನಲ್ಲಿ ಮಂಗಳವಾರ ನಡೆದ ಸಾಂಸ್ಕೃತಿಕ ಹಾಗೂ ಎನ್‌ಎಸ್‌ಎಸ್‌, ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್‌ಕುಮಾರ್ ಮಾತನಾಡಿದರು   

ಮೈಸೂರು: ‘ಪ್ರಸ್ತುತ ಶೇ.80, ಶೇ.90ರ ಅಂಕ ಗಳಿಕೆಯೂ ಪ್ರಯೋಜನಕ್ಕೆ ಬಾರದು. ಅಂಕದ ಜತೆ ಕೌಶಲ ಬೆಳೆಸಿಕೊಂಡರೆ ಮಾತ್ರ ಉದ್ಯೋಗ ಗಿಟ್ಟಿಸಲು ಸಾಧ್ಯ’ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್‌ಕುಮಾರ್‌ ತಿಳಿಸಿದರು.

ವಿಶ್ವಕವಿ ಕುವೆಂಪು ಪ್ರಥಮ ದರ್ಜೆ ಕಾಲೇಜು, ದೇಜಗೌ ಪ್ರಥಮ ದರ್ಜೆ ಸಂಜೆ ಕಾಲೇಜಿನ ಸಾಂಸ್ಕೃತಿಕ ಹಾಗೂ ಎನ್‌ಎಸ್‌ಎಸ್‌, ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭಕ್ಕೆ ಮಂಗಳವಾರ ಕಾಲೇಜಿನ ಕುವೆಂಪು ರಂಗಮಂದಿರದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ‘ಖಾಸಗಿ ಕ್ಷೇತ್ರದಲ್ಲಿ ಉದ್ಯೋಗ ಗಿಟ್ಟಿಸಲು ಕೌಶಲ ಅಗತ್ಯ’ ಎಂದು ಹೇಳಿದರು.

‘ದೇಶದಲ್ಲಿನ ಯುವ ಶಕ್ತಿಯನ್ನು ಮಾನವ ಸಂಪನ್ಮೂಲವನ್ನಾಗಿ ಪರಿವರ್ತಿಸಬೇಕು. ಇದು ಸಾಧ್ಯವಾದರೆ ಮಾತ್ರ ದೇಶದ ಪ್ರಗತಿ ಸಾಧ್ಯ’ ಎಂದು ಕುಲಪತಿ ಪ್ರತಿಪಾದಿಸಿದರು.

ADVERTISEMENT

‘ಪದವಿ ಶಿಕ್ಷಣದ ಹಂತ ವಿದ್ಯಾರ್ಥಿಗಳಿಗೆ ತಮ್ಮ ಭವಿಷ್ಯ ರೂಪಿಸಿಕೊಳ್ಳುವ ಸುವರ್ಣ ಅವಕಾಶ ಒದಗಿಸುವ ವೇದಿಕೆ. ಸಮಯ ವ್ಯರ್ಥ ಮಾಡಿಕೊಳ್ಳದೇ, ತಮ್ಮ ಬದುಕಿನ ಭದ್ರ ಬುನಾದಿಗೆ ಮುನ್ನುಡಿ ಬರೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ವಿದ್ಯಾರ್ಥಿ ಸಮೂಹ ಪಠ್ಯ, ತರಗತಿಗೆ ಸೀಮಿತವಾಗಬಾರದು. ಎಲ್ಲ ಕ್ಷೇತ್ರಗಳಲ್ಲೂ ಪರಿಣಿತಿ ಸಾಧಿಸಬೇಕು. ಪಠ್ಯೇತರ ಚಟುವಟಿಕೆಗಳಲ್ಲಿ ತಲ್ಲೀನರಾಗಬೇಕು. ಎನ್‌ಎಸ್‌ಎಸ್‌, ಎನ್‌ಸಿಸಿ, ಕ್ರೀಡೆ ಸೇರಿದಂತೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಹೆಚ್ಚೆಚ್ಚು ತಲ್ಲೀನವಾದರೆ ವ್ಯಕ್ತಿತ್ವಕ್ಕೆ ಮೆರುಗು ಬರಲಿದೆ’ ಎಂದು ಹೇಳಿದರು.

‘ಎನ್‌ಎಸ್‌ಎಸ್‌, ಎನ್‌ಸಿಸಿ ಸೇವಾ ಮನೋಭಾವನೆ, ಶಿಸ್ತು, ಬದ್ಧತೆಯನ್ನು ಬೆಳೆಸಲಿದೆ. ವ್ಯಕ್ತಿತ್ವವನ್ನು ಉನ್ನತಗೊಳಿಸುತ್ತದೆ. ಈ ಎರಡೂ ಘಟಕಗಳಿಗೆ ಸೇರ್ಪಡೆಗೊಳ್ಳುವುದು ಮುಖ್ಯವಲ್ಲ. ಅವುಗಳ ಧ್ಯೇಯೋದ್ದೇಶ ಅರ್ಥ ಮಾಡಿಕೊಂಡು, ಉದಾತ್ತ ಆಶಯಗಳಿಗನುಗುಣವಾಗಿ ನಡೆದುಕೊಳ್ಳಬೇಕು’ ಎಂದು ಹೇಮಂತ್‌ಕುಮಾರ್ ಕಿವಿಮಾತು ಹೇಳಿದರು.

ಕುವೆಂಪು ವಿದ್ಯಾವರ್ಧಕ ಟ್ರಸ್ಟ್‌ನ ಅಧ್ಯಕ್ಷ ಪ್ರೊ.ಜೆ.ಶಶಿಧರ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾದ ನಾಗರಾಜು, ರೇಣುಕಾಮೂರ್ತಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.