ADVERTISEMENT

ಆತ್ಮರಕ್ಷಣೆ ಕಲೆಯ ಜಾಗೃತಿ ಅಗತ್ಯ: ನ್ಯಾಯಾಧೀಶೆ ಬಿ.ಎಸ್‌.ಜಯಶ್ರೀ ಅಭಿಮತ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2021, 6:03 IST
Last Updated 28 ಫೆಬ್ರುವರಿ 2021, 6:03 IST
ಮೈಸೂರು ನಗರದ ಬೋಗಾದಿ 2ನೇ ಹಂತದ ರಾಯಲ್‌ ಕಾನ್‌ಕಾರ್ಡ್‌ ಇಂಟರ್‌ನ್ಯಾಷನಲ್‌ ಸ್ಕೂಲ್‌ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಮಹಿಳೆಯರ ಆತ್ಮರಕ್ಷಣೆ ತರಬೇತಿ ಶಿಬಿರ’ವನ್ನು ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಬಿ.ಎಸ್‌.ಜಯಶ್ರೀ ಉದ್ಘಾಟಿಸಿದರು
ಮೈಸೂರು ನಗರದ ಬೋಗಾದಿ 2ನೇ ಹಂತದ ರಾಯಲ್‌ ಕಾನ್‌ಕಾರ್ಡ್‌ ಇಂಟರ್‌ನ್ಯಾಷನಲ್‌ ಸ್ಕೂಲ್‌ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಮಹಿಳೆಯರ ಆತ್ಮರಕ್ಷಣೆ ತರಬೇತಿ ಶಿಬಿರ’ವನ್ನು ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಬಿ.ಎಸ್‌.ಜಯಶ್ರೀ ಉದ್ಘಾಟಿಸಿದರು   

ಮೈಸೂರು: ಶಾಲಾ ಮಕ್ಕಳಿಗೂ ಕಾನೂನು ಶಿಕ್ಷಣ ನೀಡಬೇಕು; ಹಳ್ಳಿಯ ಮಕ್ಕಳಿಗೂ ಉತ್ತಮ ಶಿಕ್ಷಣ ಸಿಗಬೇಕು ಎಂದು ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಬಿ.ಎಸ್‌.ಜಯಶ್ರೀ ಇಲ್ಲಿ ಹೇಳಿದರು.

ನಗರದ ಬೋಗಾದಿ 2ನೇ ಹಂತದ ರಾಯಲ್‌ ಕಾನ್‌ಕಾರ್ಡ್‌ ಇಂಟರ್‌ನ್ಯಾಷನಲ್‌ ಸ್ಕೂಲ್‌ನಲ್ಲಿ ‘ರಿಯೂಐ ರಿಯು ಕರಾಟೆ ಡು ಕುಬುಡೂ ಆರ್ಗನೈಜೇಷನ್‌ ಆಫ್‌ ಇಂಡಿಯ’ ಶನಿವಾರ ಹಮ್ಮಿಕೊಂಡಿದ್ದ ‘ಮಹಿಳೆಯರ ಆತ್ಮರಕ್ಷಣೆ ತರಬೇತಿ ಶಿಬಿರ’ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿ ಪ್ರಬಲವಾದ ಕಾನೂನು ಇದ್ದರೂ ರಕ್ಷಣೆ ಸಿಗುತ್ತಿಲ್ಲ. ಘೋರ ಶಿಕ್ಷೆ ಇದ್ದರೂ ಅಪರಾಧ ಹೆಚ್ಚುತ್ತಿದೆ. ಇದನ್ನು ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಈ ಬಗ್ಗೆ ಜ್ಞಾನ ಇಲ್ಲದಿರುವುದು, ಶಿಕ್ಷಣ ಹಾಗೂ ಸಂಸ್ಕಾರ ಇಲ್ಲದೆ ಇರುವುದೂ ಇಂಥ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಹೇಳಿದರು.

ADVERTISEMENT

12ರಿಂದ 18 ವಯಸ್ಸಿನ ಮಕ್ಕಳಿಗೂ ‘ಪೋಕ್ಸೊ’ ಕಾಯ್ದೆ ಬಗ್ಗೆ ಜಾಗೃತಿ ಮೂಡಿಸಬೇಕು. ತಂತ್ರಜ್ಞಾನದ ಬೆಳವಣಿಗೆಯಾಗಿ, ನಾವು ಅಭಿವೃದ್ಧಿಶೀಲರು ಎಂದು ಹೇಳಿದರೂ ಮಕ್ಕಳಲ್ಲಿ ಇಂದು ಮುಗ್ಧತೆ ಕಾಣಸಿಗುತ್ತಿಲ್ಲ. ಅಜ್ಜಿ ಕತೆಯನ್ನು ಯೂಟ್ಯೂಬ್‌ನಲ್ಲಿ ಹುಡುಕುವಂಥ ಸ್ಥಿತಿ ಇದೆ. ಅಜ್ಜಿಯನ್ನು ಹೇಗೆ ಗೌರವಿಸಬೇಕು ಎನ್ನುವುದನ್ನು ನಾವು ಕಲಿಸುತ್ತಿಲ್ಲ. ಪೋಷಕರು ಉದ್ಯೋಗದಲ್ಲಿ ಇರುವುದರಿಂದ ಮಕ್ಕಳ ಮೇಲೆ ಕಾಳಜಿ ವಹಿಸಲು ಆಗುತ್ತಿಲ್ಲ ಎಂದು ವಿವರಿಸಿದರು.

ಆತ್ಮರಕ್ಷಣೆಯನ್ನು ಎಲ್ಲರೂ ಕಲಿತುಕೊಳ್ಳಬೇಕು. ಕಾನೂನಿನ ಅರಿವೂ ಇರಬೇಕು. ಹಳ್ಳಿಗಳಲ್ಲಿರುವ ಮಹಿಳೆಯರಿಗೂ ಸಮರ ಕಲೆ, ಆತ್ಮರಕ್ಷಣೆಯ ಕಲೆ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.

ಮೈಸೂರು ನಗರ ಡಿಸಿಪಿ ಗೀತಾ ಪ್ರಸನ್ನ ಮಾತನಾಡಿ, ‘ಅಪರಾಧ ತಡೆಯುವ ಬಗ್ಗೆ ನ್ಯಾಯಾಂಗ ಮತ್ತು ಪೊಲೀಸ್‌ ಇಲಾಖೆ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಶಾಲೆ, ಕಾಲೇಜುಗಳಲ್ಲಿ ಹಮ್ಮಿಕೊಳ್ಳುತ್ತಿದೆ. ಇಂಥ ಜಾಗೃತಿ ಕಾರ್ಯಕ್ರಮಗಳನ್ನು ಬೇಸಿಗೆ ಶಿಬಿರದಲ್ಲಿ ಆಯೋಜಿಸಿದರೆ ಹೆಚ್ಚಿನ ಮಕ್ಕಳಿಗೆ ಸಹಾಯವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ರಾಯಲ್‌ ಕಾನ್‌ಕಾರ್ಡ್‌ ಇಂಟರ್‌ನ್ಯಾಷನ್‌ ಸ್ಕೂಲ್‌ನ ಪ್ರಾಂಶುಪಾಲರಾದ ರೂಪಾ ಕರಂಬಯ್ಯ ಮಾತನಾಡಿ, ‘ನಾವು ಸುರಕ್ಷಿತವಾಗಿದ್ದು, ನಮಗೆ ಆತ್ಮರಕ್ಷಣೆ ಕೌಶಲ ಬೇಕಿಲ್ಲ ಎಂಬ ಮನೋಭಾವ ಮಹಿಳೆಯರಲ್ಲಿ ಇರಬಾರದು. ಮಕ್ಕಳನ್ನು ಪರೀಕ್ಷೆಗೆ ಸಿದ್ಧಗೊಳಿಸುವ ಜತೆಗೆ ಈ ಕುರಿತ ಜಾಗೃತಿಯನ್ನೂ ಮೂಡಿಸಬೇಕು’ ಎಂದು ಸಲಹೆ ನೀಡಿದರು.

ಶಾಲೆಯ ಅಧ್ಯಕ್ಷ ಶಿವಪ್ರಸಾದ್‌, ಆರ್‌ಆರ್‌ಕೆಕೆ ಅಧ್ಯಕ್ಷ ಎಸ್‌.ಚಂದ್ರಶೇಖರ್‌, ಕಿರಣ್‌ ಎಂ. ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.