ADVERTISEMENT

ಹೋರಾಟಕ್ಕೆ ಅಣಿಯಾಗಲು ಕರೆ

ಕಾರ್ಮಿಕರಿಂದ ಬೃಹತ್ ಜಾಥಾ, ಬಂಡವಾಳಷಾಹಿ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 3 ಮೇ 2019, 4:55 IST
Last Updated 3 ಮೇ 2019, 4:55 IST
ವಿವಿಧ ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರು ಮೇ ದಿನಾಚರಣೆ ಪ್ರಯುಕ್ತ ಮೈಸೂರಿನಲ್ಲಿ ಬುಧವಾರ ಜಾಥಾ ನಡೆಸಿದರು
ವಿವಿಧ ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರು ಮೇ ದಿನಾಚರಣೆ ಪ್ರಯುಕ್ತ ಮೈಸೂರಿನಲ್ಲಿ ಬುಧವಾರ ಜಾಥಾ ನಡೆಸಿದರು   

2 ಕೋಟ್‌ಗಳಿವೆ...

ಮೈಸೂರು: ಮೇ ದಿನಾಚರಣೆ ಪ್ರಯುಕ್ತ ವಿವಿಧ ಎಡಪಕ್ಷಗಳ ನೇತೃತ್ವದಲ್ಲಿ ಕಾರ್ಮಿಕರು ನಗರದಲ್ಲಿ ಬುಧವಾರ ಬೃಹತ್ ಜಾಥಾ ನಡೆಸಿದರು.

ಪುರಭವನದಿಂದ ಹೊರಟ ನೂರಾರು ಕಾರ್ಮಿಕರು ಕೆಂಬಾವುಟಗಳನ್ನು ಹಿಡಿದು, ಕೆಂಪು ಟೋಪಿ ಧರಿಸಿ, ಬಂಡವಾಳಷಾಹಿ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು.

ADVERTISEMENT

ವಿವಿಧ ಸಂಘಟನೆಗಳ ಬ್ಯಾನರ್‌ಗಳನ್ನು ಹಿಡಿದ ಕಾರ್ಮಿಕರು ಸುಬ್ಬರಾಯರಕೆರೆಯ ಸ್ವಾತಂತ್ರ್ಯ ಉದ್ಯಾನಕ್ಕೆ ಬಂದು ಸಮಾವೇಶ ನಡೆಸಿದರು.

ಸಮಾವೇಶದಲ್ಲಿ ಮಾತನಾಡಿದ ಎಐಟಿಯುಸಿ ಮುಖಂಡ ಶೇಷಾದ್ರಿ, ‘ಪ್ರಭುತ್ವದ ವಿರುದ್ದ ಮತ್ತು ಬಂಡವಾಳಷಾಹಿ ವಿರುದ್ಧ ಮುಂಬರುವ ದಿನಗಳಲ್ಲಿ ಬೃಹತ್ ಹೋರಾಟ ನಡೆಸಬೇಕಿದೆ. ಹಾಗಾಗಿ, ಕಾರ್ಮಿಕರು ಈಗಿನಿಂದಲೇ ಮಾನಸಿಕವಾಗಿ ಹೋರಾಟಕ್ಕೆ ಅಣಿಯಾಗಿರಬೇಕು’ ಎಂದು ಕರೆ ನೀಡಿದರು.‌

‘ವಿವಿಧ ಕಾರ್ಮಿಕ ಸಂಘಟನೆಗಳು ಈಗಾಗಲೇ 44 ಪ್ರಮುಖ ಬೇಡಿಕೆಗಳನ್ನು ಸಿದ್ಧಪಡಿಸಿಕೊಂಡಿವೆ. ಚುನಾವಣೆಯಲ್ಲಿ ಯಾರು ಜಯಶಾಲಿಯಾಗುತ್ತಾರೆ ಎಂಬುದು ನಮಗೆ ಮುಖ್ಯ ಅಲ್ಲ. ಯಾರೇ ಅಧಿಕಾರಕ್ಕೆ ಬಂದರೂ ಅವರ ಮುಂದೆ ಈ ಬೇಡಿಕೆಗಳನ್ನು ಮಂಡಿಸಲಾಗುವುದು’ ಎಂದು ಹೇಳಿದರು.

ಕಾರ್ಮಿಕ ವರ್ಗದ ಬೇಡಿಕೆಗಳಷ್ಟೇ ಈ ಪಟ್ಟಿಯಲ್ಲಿ ಇಲ್ಲ. ಇದರಲ್ಲಿ ರೈತರು, ಮಹಿಳೆಯರು, ದಲಿತರು, ಕೃಷಿಕಾರ್ಮಿಕರು ಹೀಗೆ ನಾನಾ ದುಡಿಯುವ ವರ್ಗದವರ ಬೇಡಿಕೆಗಳಿವೆ. ಇವುಗಳ ಈಡೇರಿಕೆಗೆ ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಹೋರಾಟ ನಡೆಸಬೇಕು ಎಂದು ಅವರು ತಿಳಿಸಿದರು.‌

ಈ ಹೋರಾಟಕ್ಕೆ ಒಗ್ಗಟ್ಟು ಬೇಕೇ ಬೇಕು. ಹಾಗಾಗಿ, ಎಲ್ಲರೂ ತಮ್ಮ ತಮ್ಮ ಕಾರ್ಖಾನೆಗಳಲ್ಲಿ ಮೊದಲು ಒಗ್ಗಟ್ಟಾಗಬೇಕು. ಆಗ ಇಡೀ ದೇಶದ ಕಾರ್ಮಿಕರಲ್ಲಿ ಒಗ್ಗಟ್ಟು ಸ್ಥಾಪನೆಯಾಗುತ್ತದೆ ಎಂದು ಅಭಿಪ್ರಾಯಪ‍ಟ್ಟರು.

ಈಗಾಗಲೇ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ‘ಫಿಕ್ಸಡ್‌ ಟರ್ಮ್ ಎಂಪ್ಲಾಯ್‌ಮೆಂಟ್‌’ನ್ನು ಜಾರಿಗೊಳಿಸಿದೆ. ಸರ್ಕಾರವೇ ಬಂಡವಾಳಷಾಹಿಗಳಿಗೆ ಪರವಾದ ಕಾಯಿದೆಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿದೆ. ಶೇ 92ರಷ್ಟು ಕಾರ್ಮಿಕರಿಗೆ ಕನಿಷ್ಠ ಕೂಲಿಯನ್ನೂ ನೀಡದೇ ವಂಚಿಸುತ್ತಿದೆ ಎಂದು ಅವರು ಆರೋಪಿಸಿದರು.

ಮೋದಿ ಚಹಾ ಮಾರುತ್ತಿದ್ದರೆ, ಇಲ್ಲವೇ, ರಾಹುಲ್‌ಗಾಂಧಿ ಭಾರತೀಯ ಪ್ರಜೆಯೇ ಅಥವಾ ಇಟಲಿಯ ಪ್ರಜೆಯೇ ಎಂಬ ಚರ್ಚೆಯೇ ಮುನ್ನೆಲೆಗೆ ಬಂದಿದೆ. ಯಾರೊಬ್ಬರು ದುಡಿಯುವ ವರ್ಗದವರ ಬವಣೆಯ ಕುರಿತು ಮಾತನಾಡುತ್ತಿಲ್ಲ. ಕಾರ್ಮಿಕರ ಪರವಾದ ಧೋರಣೆಯನ್ನು ವ್ಯಕ್ತಪಡಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಎಐಟಿಯುಸಿ, ಸಿಐಟಿಯು, ಎಐಯುಟಿಯುಸಿ, ಬ್ಯಾಂಕು, ವಿಮೆ, ಬಿಎಸ್‌ಎನ್‌ಎಲ್‌, ಅಂಚೆ ಹಾಗೂ ಇತರ ಸಂಘಟನೆಗಳ ಕಾರ್ಯಕರ್ತರು ಸಮಾವೇಶದಲ್ಲಿ ಭಾಗವಹಿಸಿದ್ದರು.

ಅಂಗನವಾಡಿ ನೌಕರರ ಸಂಘದ ಮುಖಂಡ ಜಗನ್ನಾಥ, ಎಐಯುಟಿಯುಸಿ ಮುಖಂಡ ಯಶೋಧರ್, ಸಿಐಟಿಯು ತಾಲ್ಲೂಕು ಘಟಕದ ಅಧ್ಯಕ್ಷ ಅಣ್ಣಪ್ಪ ಸೇರಿದಂತೆ ಹಲವು ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.