ADVERTISEMENT

ಮೈಸೂರು | ‘ಐದು ವೃತ್ತಗಳಿಗೆ ಶಾಶ್ವತ ದೀಪಾಲಂಕಾರ’

ಮಂಗಳವಾರ ಮುಂಜಾನೆ ಮೇಯರ್‌ ನಗರ ಪ್ರದಕ್ಷಿಣೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2023, 7:05 IST
Last Updated 13 ಸೆಪ್ಟೆಂಬರ್ 2023, 7:05 IST
ಮೈಸೂರಿನ ಚಿಕ್ಕಗಡಿಯಾರ ವೃತ್ತದಲ್ಲಿ ಮಂಗಳವಾರ ಮುಂಜಾನೆ ಮೇಯರ್‌ ಶಿವಕುಮಾರ್ ಸ್ಥಳ ಪರಿಶೀಲನೆ ನಡೆಸಿದರು. ನಗರಪಾಲಿಕೆ ಆಯುಕ್ತ ಆಸಾದ್ ರೆಹಮಾನ್ ಷರೀಫ್, ಅಧೀಕ್ಷಕ ಎಂಜಿನಿಯರ್ ಸಿಂಧು, ಕಾರ್ಯಪಾಲಕ ಎಂಜಿನಿಯರ್‌ ಸತ್ಯಮೂರ್ತಿ ಇದ್ದರು
ಮೈಸೂರಿನ ಚಿಕ್ಕಗಡಿಯಾರ ವೃತ್ತದಲ್ಲಿ ಮಂಗಳವಾರ ಮುಂಜಾನೆ ಮೇಯರ್‌ ಶಿವಕುಮಾರ್ ಸ್ಥಳ ಪರಿಶೀಲನೆ ನಡೆಸಿದರು. ನಗರಪಾಲಿಕೆ ಆಯುಕ್ತ ಆಸಾದ್ ರೆಹಮಾನ್ ಷರೀಫ್, ಅಧೀಕ್ಷಕ ಎಂಜಿನಿಯರ್ ಸಿಂಧು, ಕಾರ್ಯಪಾಲಕ ಎಂಜಿನಿಯರ್‌ ಸತ್ಯಮೂರ್ತಿ ಇದ್ದರು   

ಮೈಸೂರು: ಜಂಬೂಸವಾರಿ ಸಾಗುವ ಮಾರ್ಗದ ರಸ್ತೆ, ಫುಟ್‌ಪಾತ್ ಸರಿಪಡಿಸುವ ಜತೆಗೆ ಅರಮನೆ ಸುತ್ತಮುತ್ತಲಿನ ಐದು ಪ್ರಮುಖ ವೃತ್ತಗಳಿಗೆ ಶಾಶ್ವತವಾದ ವಿದ್ಯುತ್ ದೀಪಾಲಂಕಾರದ ವ್ಯವಸ್ಥೆಯನ್ನು ಮಾಡಲು ಮೈಸೂರು ನಗರಪಾಲಿಕೆ ಮುಂದಾಗಿದೆ.

ದಸರಾ ಹಿನ್ನಲೆಯಲ್ಲಿ ಮೇಯರ್‌ ಶಿವಕುಮಾರ್, ಪಾಲಿಕೆ ಆಯುಕ್ತ ಅಷದ್‌ ಉರ್ ರೆಹಮಾನ್‌ ಷರೀಫ್‌ ಅವರನ್ನು ಒಳಗೊಂಡ ತಂಡವು ಮಂಗಳವಾರ ಮುಂಜಾನೆ ನಗರದಲ್ಲಿ ಪರಿಶೀಲನೆ ನಡೆಸಿ ಸಿದ್ಧತೆಗಳ ಕುರಿತು ಚರ್ಚಿಸಿತು.

ಅರಮನೆಯ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಬನ್ನಿಮಂಟಪದ ತನಕ ಸಾಗುವ ಮಾರ್ಗಗಳು, ಸಬ್‌ವೇ, ವೃತ್ತಗಳನ್ನು ತಂಡವು ವೀಕ್ಷಣೆ ಮಾಡಿತು. ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ವೃತ್ತ, ಚಾಮರಾಜ ವೃತ್ತ, ಚಾಮರಾಜೇಂದ್ರ ಒಡೆಯರ್ ವೃತ್ತ, ಗಾಂಧಿ ವೃತ್ತ, ಅಂಬೇಡ್ಕರ್ ಪ್ರತಿಮೆ ಇರುವ ವೃತ್ತಗಳಿಗೆ ಗಾರ್ಡನಿಂಗ್ ಮಾಡುವ ಜತೆಗೆ ಶಾಶ್ವತವಾದ ದೀಪಾಲಂಕಾರ ಮಾಡಬೇಕು. ವಾರಾಂತ್ಯದಲ್ಲಿ ಅರಮನೆಯಲ್ಲಿ ದೀಪಾಲಂಕಾರದ ಸಮಯದಲ್ಲಿ ಈ ವೃತ್ತಗಳ ದೀಪಾಲಂಕಾರ ಇರುವಂತೆ ಮಾಡಬೇಕು. ಐದೂ ವೃತ್ತಗಳಿಗೆ ಆಕರ್ಷಣೆಯ ರೀತಿಯಲ್ಲಿ ಹೂವಿನ ಕುಂಡಗಳನ್ನು ಜೋಡಿಸಿ ನಿರ್ವಹಣೆ ಮಾಡಬೇಕು ಎಂದು ಮೇಯರ್‌ ಅಧಿಕಾರಿಗಳಿಗೆ ಸೂಚಿಸಿದರು.

ADVERTISEMENT

ಫುಟ್‌ಪಾತ್ ದುರಸ್ತಿಪಡಿಸಿ: ನಗರ ಬಸ್ ನಿಲ್ದಾಣದಿಂದ ಹಾರ್ಡಿಂಜ್ ವೃತ್ತ, ಹಾರ್ಡಿಂಜ್ ವೃತ್ತದಿಂದ ಪುರಭವನ, ಕರ್ಜನ್ ಪಾರ್ಕ್‌ತನಕ, ಕೆ.ಆರ್. ವೃತ್ತದಿಂದ ಆಯುರ್ವೇದ ವೃತ್ತದ ತನಕ ಸಾಗುವ ಮಾರ್ಗದ ರಸ್ತೆಯ ಫುಟ್‌ಪಾತ್‌ನಲ್ಲಿ ಅಳವಡಿಸಿರುವ ಸ್ಲಾಬ್‌ಗಳಲ್ಲಿ ಕೆಲವು ಒಡೆದು ಹಾಳಾಗಿದೆ. ಅದನ್ನು ಸರಿಪಡಿಸಬೇಕು. ಹಾಳಾಗಿರುವ ಬ್ಯಾರಿಗೇಡ್‌ಗಳನ್ನು ತೆರವುಗೊಳಿಸಿ ಹೊಸ ಬ್ಯಾರಿಕೇಡ್‌ಗಳನ್ನು ಹಾಕಬೇಕು ಎಂದು ಮೇಯರ್‌ ತಿಳಿಸಿದರು.

ಚಿಕ್ಕಗಡಿಯಾರ ವೃತ್ತದ ಬಳಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡುವುದರಿಂದ ಸುತ್ತಲೂ ದೀಪದ ವ್ಯವಸ್ಥೆ, ರಸ್ತೆಬದಿಯಲ್ಲಿ ವ್ಯಾಪಾರ ಮಾಡುವವರಿಗೆ ಪರ್ಯಾಯ ವ್ಯವಸ್ಥೆ ಮಾಡಿ ಸಾರ್ವಜನಿಕರು ತಿರುಗಾಡಲು ಅನುವು ಮಾಡಿಕೊಡುವಂತೆ ಈಗಿನಿಂದಲೇ ಯೋಜಿಸಬೇಕು ಎಂದು ಹೇಳಿದರು.

ಪಾಲಿಕೆಯ ಅಧೀಕ್ಷಕ ಎಂಜಿನಿಯರ್ ಸಿಂಧು, ಕಾರ್ಯಪಾಲಕ ಎಂಜಿನಿಯರ್‌ ಸತ್ಯಮೂರ್ತಿ ಹಾಜರಿದ್ದರು.

ಸಬ್‌ವೇ ಸ್ವಚ್ಛಗೊಳಿಸಿ

ಅರಮನೆಯಿಂದ ದೊಡ್ಡಕೆರೆ ಮೈದಾನದ ವಸ್ತುಪ್ರದರ್ಶನಕ್ಕೆ ಹೋಗುವ ಮತ್ತು ಸಯ್ಯಾಜಿರಾವ್ ರಸ್ತೆಯಲ್ಲಿರುವ ಸಬ್‌ವೇಗೆ ನೀರು ನುಗ್ಗಿ ಸಾರ್ವಜನಿಕರು ಓಡಾಡಲು ಸಾಧ್ಯವಾಗದೆ ಬೀಗ ಹಾಕಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಮೇಯರ್‌ ಕೂಡಲೇ ಸಬ್‌ವೇಗಳಿಗೆ ಎರಡು ಮೋಟಾರ್‌ಗಳನ್ನು ಅಳವಡಿಸಿ ನೀರನ್ನು ಪಂಪ್ ಮಾಡಬೇಕು. ಹೊಸದಾಗಿ ಸುಣ್ಣಬಣ್ಣ ಬಳಿಯುವ ಜೊತೆಗೆ ಸಬ್‌ವೇ ವಿನ್ಯಾಸವನ್ನು ಬದಲಿಸಬೇಕು ಎಂದು ಸಂಬಂಧಿಸಿದ ಎಂಜಿನಿಯರ್‌ಗೆ ಸೂಚಿಸಿದರು. ರೈಲ್ವೆ ನಿಲ್ದಾಣದ ಬಳಿ ಇರುವ ಡಾ. ಬಾಬೂಜಿ ವೃತ್ತವನ್ನು ಕೂಡ ಸಿಂಗಾರ ಮಾಡಿ ದೀಪಾಲಂಕಾರ ಮಾಡುವುದಕ್ಕೆ ಆಯುಕ್ತರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.