ಮೈಸೂರು: ‘ಎಂಸಿಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆಯಲ್ಲಿ ರಾಜ್ಯ ಸರ್ಕಾರವು ಸಹಕಾರಿ ನಿಯಮಾವಳಿ ಹಾಗೂ ಕಾಯ್ದೆ ಉಲ್ಲಂಘಿಸಿರುವುದನ್ನು ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರೇ ಹಾಸನದಲ್ಲಿ ಮಾತನಾಡುವಾಗ ಬಹಿರಂಗಪಡಿಸಿದ್ದಾರೆ. ಈ ವಿಷಯವನ್ನು ನ್ಯಾಯಾಲಯದ ಗಮನಕ್ಕೆ ತರಲಾಗುವುದು’ ಎಂದು ಹುಣಸೂರು ಶಾಸಕ ಜಿ.ಡಿ. ಹರೀಶ್‌ಗೌಡ ತಿಳಿಸಿದರು.
ಇಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಸಚಿವರ ಹೇಳಿಕೆ ಗಮನಿಸಿದರೆ ಅಧಿಕಾರ ದುರ್ಬಳಕೆ ಮಾಡಿಕೊಂಡಿರುವುದು ಸ್ಪಷ್ಟವಾಗಿ ಕಂಡುಬಂದಿದೆ. ಜೂನ್ 26ರಂದು ನಡೆದಿದ್ದ ಚುನಾವಣೆಯಲ್ಲಿ ಯಾವ ರೀತಿ ನಡೆದುಕೊಂಡಿದ್ದಾರೆ ಎಂಬುದನ್ನು ಸಚಿವರು ಹೇಳಿದ್ದಾರೆ’ ಎಂದರು.
‘ಒಂದೊಂದು ಕ್ಷೇತ್ರದಲ್ಲಿ ಐದು ಮತಗಳನ್ನು ಸೃಷ್ಟಿ ಮಾಡಿಕೊಟ್ಟಿದ್ದಕ್ಕೆ, ನಮ್ಮವರು ಒಂದೊಂದು ಮತದಿಂದ ಗೆಲ್ಲಲು ಕಾರಣವಾಯಿತು ಎಂದು ಹೇಳಿದ್ದಾರೆ. ಚುನಾವಣೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಶೇಷ ಆಸಕ್ತಿ ವಹಿಸಿದ್ದರಿಂದ ಹೀಗೆ ಮಾಡಿದ್ದೇನೆ ಎಂದೂ ಹೇಳಿದ್ದಾರೆ. ಅಕ್ರಮ ನಡೆದಿರುವುದಕ್ಕೆ ಇದು ಸಾಕ್ಷಿಯಾಗಿದೆ’ ಎಂದು ದೂರಿದರು.
‘2023ರ ನವೆಂಬರ್‌ನಲ್ಲೇ ನಿಗದಿಯಾಗಿದ್ದ ಚುನಾವಣೆಯನ್ನು ಸರ್ಕಾರ ವಿನಾಕಾರಣ ಮುಂದೂಡಿತ್ತು. ನಾನು ನ್ಯಾಯಾಲಯದಲ್ಲಿ ಹೋರಾಟ ಮಾಡದಿದ್ದರೆ ಚುನಾವಣೆ ನಡೆಸುತ್ತಲೇ ಇರಲಿಲ್ಲ. ವಿಳಂಬ ಮಾಡಿದ್ದೇಕೆ ಎಂಬುದಕ್ಕೆ ಸಹಕಾರ ಸಚಿವರ ಮಾತುಗಳಿಂದ ಉತ್ತರ ಸಿಕ್ಕಿದೆ. ಹೊಸ ಸೊಸೈಟಿಗಳನ್ನು ಸ್ಥಾಪಿಸಿ ಅವರಿಗೆ ಚುನಾವಣೆಯಲ್ಲಿ ಭಾಗವಹಿಸಲು ಅವಕಾಶ ನೀಡಿ ಕುತಂತ್ರ ಮಾಡಿದ್ದಾರೆ’ ಎಂದು ಆರೋಪಿಸಿದರು.
‘ಚುನಾವಣಾ ಅಕ್ರಮವನ್ನು ಹೇಗೆ ಮಾಡಬಹುದು ಎಂಬುದನ್ನು ರಾಜಣ್ಣ ಹೇಳಿಕೊಟ್ಟಿದ್ದಾರೆ. ಈ ಬಗ್ಗೆ ವಿಧಾನಮಂಡಲ ಅಧಿವೇಶನದಲ್ಲೂ ಚರ್ಚೆ ಮಾಡುತ್ತೇನೆ. ಸರ್ಕಾರ ಹೆಚ್ಚುವರಿ ಮತಗಳನ್ನು ಸೇರಿಸದಿದ್ದರೆ ಇಬ್ಬರು ಶಾಸಕರು ಹಾಗೂ ಮಾಜಿ ಶಾಸಕ ಸೋಲುತ್ತಿದ್ದರು. ಅವರು ಅಕ್ರಮವಾಗಿ ಬಂದ ಮತಗಳಿಂದ ಗೆದ್ದಿದ್ದಾರೆ’ ಎಂದು ಟೀಕಿಸಿದರು.
‘ನಾಲ್ಕು ದಶಕಗಳಿಂದ ಸಹಕಾರ ಕ್ಷೇತ್ರದಲ್ಲಿರುವ ರಾಜಣ್ಣ ಅವರು ಕ್ಷೇತ್ರ ಉಳಿಸುವ ಬಗ್ಗೆ ಕೆಲಸ ಮಾಡದೆ ದ್ವೇಷದ ರಾಜಕಾರಣಕ್ಕೆ ಮುನ್ನುಡಿ ಬರೆದಿದ್ದಾರೆ’ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.