ಮೈಸೂರು: ‘ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಎಂಸಿಡಿಸಿಸಿ) ಆಡಳಿತ ಮಂಡಳಿಯ ಚುನಾವಣೆಯಲ್ಲಿ ಮತ ಚಲಾಯಿಸಲು ಮತದಾರರೊಬ್ಬರಿಗೆ ನಕಲಿ ಗುರುತಿನ ಚೀಟಿ ನೀಡುತ್ತಿಲ್ಲ’ ಎಂಬ ಕಾರಣಕ್ಕೆ ಶಾಸಕ ಜಿ.ಡಿ. ಹರೀಶ್ ಗೌಡ ಬ್ಯಾಂಕಿನ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೊತೆ ಮಂಗಳವಾರ ಕಚೇರಿಯಲ್ಲಿ ವಾಗ್ವಾದ ನಡೆಸಿದರು.
ಚಾಮರಾಜನಗರ ತಾಲ್ಲೂಕು ಕ್ಷೇತ್ರದ ಪುಣಜನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮತದಾರ ಗುರುನಾಯಕ ತಮ್ಮ ಸಂಘದ ಪ್ರತಿನಿಧಿ (ಡೆಲಿಗೇಟ್) ಗುರುತಿನ ಚೀಟಿಯನ್ನು ಕಳೆದುಕೊಂಡಿದ್ದರು. ನಕಲಿ ಗುರುತಿನ ಚೀಟಿಯನ್ನು ಕೊಡುವಂತೆ ಜೂ. 19ರಂದು ಅರ್ಜಿ ಸಲ್ಲಿಸಿದ್ದರು. ಆದರೆ, ಅಧಿಕಾರಿಗಳು ಮಂಗಳವಾರ ಮತದಾರರ ಗುರುತಿನ ಚೀಟಿ ನಕಲು ಪ್ರತಿ ನೀಡಲು ಸಾಧ್ಯವಿಲ್ಲ ಎಂದು ಹಿಂಬರಹ ನೀಡಿದ್ದರು ಎನ್ನಲಾಗಿದೆ.
ಇದನ್ನು ಪ್ರಶ್ನಿಸಿ ಗುರುನಾಯಕ ಹಾಗೂ ಚಾಮರಾಜನಗರ ತಾಲ್ಲೂಕು ಕ್ಷೇತ್ರದ ಬಿಜೆಪಿ ಬೆಂಬಲಿತ ಅಭ್ಯರ್ಥಿ ವೃಷಬೇಂದ್ರಪ್ಪ ಮೊದಲಿಗೆ ಎಂಸಿಡಿಸಿಸಿ ಬ್ಯಾಂಕ್‌ನ ಅಧಿಕಾರಿಗಳನ್ನು ವಿಚಾರಿಸಿದ್ದಾರೆ. ಚುನಾವಣಾ ಅಧಿಕಾರಿಗಳ ಬಳಿ ಕೇಳುವಂತೆ ಅಧಿಕಾರಿಗಳು ಉತ್ತರಿಸಿದ್ದಾರೆ. ಚುನಾವಣಾಧಿಕಾರಿ ಆಶಪ್ಪ ಮತ್ತೆ ಬ್ಯಾಂಕ್ ಅಧಿಕಾರಿಗಳ ಬಳಿಯೇ ಕಳುಹಿಸಿದ್ದಾರೆ ಎನ್ನಲಾಗಿದೆ.
ವಿಚಾರ ತಿಳಿದು ಶಾಸಕ ಜಿ.ಡಿ. ಹರೀಶ್ ಗೌಡ ಬ್ಯಾಂಕಿನ ಸಿಇಒ ಕೊಠಡಿಯಲ್ಲಿ ಅಧಿಕಾರಿಗಳನ್ನು ಪ್ರಶ್ನಿಸಿದರು. ‘ಮತದಾರರ ಹಕ್ಕನ್ನು ಕಸಿಯಲು ಹೊರಟಿರುವುದು ಸರಿಯಲ್ಲ. ಅರ್ಜಿ ಹಾಕಿದ ಮೇಲೆ ನಕಲು ಪ್ರತಿ ಕೊಡುವುದು ನಿಮ್ಮ ಕರ್ತವ್ಯ’ ಎಂದರು.
ಸಿಇಒ ಆರ್.ಜೆ. ಕಾಂತರಾಜ್, ‘ಮೂರು ಗುರುತಿನ ಚೀಟಿಗಳಲ್ಲಿ ಒಂದು ಚುನಾವಣಾ ಶಾಖೆ, ಮತದಾರರ ಪಟ್ಟಿ, ಮತ್ತೊಂದನ್ನು ಮತದಾರರಿಗೆ ವಿತರಿಸಲಾಗಿತ್ತು. ಪೊಲೀಸ್ ದೂರು ಕೊಟ್ಟು ಬಂದರೆ ಪರಿಶೀಲನೆ ನಡೆಸಿ ಕೊಡುತ್ತೇವೆ ಎಂದಿದ್ದೆ. ಈಗ ದೂರು ಕೊಟ್ಟಿರುವ ಕಾರಣ ಮತ್ತೊಮ್ಮೆ ಪರಿಶೀಲನೆ ನಡೆಸುವೆ’ ಎಂದು ಸಮಜಾಯಿಷಿ ನೀಡಿದರು.
ನಂತರ ಚುನಾವಣಾಧಿಕಾರಿ ಕಚೇರಿಯಿಂದ ನಕಲು ಪ್ರತಿ ತರಿಸಿ, ಅದನ್ನು ದೃಢೀಕರಣ ಮಾಡಿ ಮತದಾರರಿಗೆ ನೀಡಲಾಯಿತು.
ನಾಳೆ ಮತದಾನ
ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಎಂಸಿಡಿಸಿಸಿ) ಆಡಳಿತ ಮಂಡಳಿಯ 11 ನಿರ್ದೇಶಕರ ಸ್ಥಾನಗಳಿಗೆ ಇಲ್ಲಿನ ನಂಜರಾಜ ಬಹದ್ದೂರ್ ಛತ್ರದಲ್ಲಿ ಇದೇ 26ರಂದು ಚುನಾವಣೆ ನಡೆಯಲಿದೆ. ಒಟ್ಟು 29 ಮಂದಿ ಕಣದಲ್ಲಿದ್ದಾರೆ. ಒಟ್ಟು 37 ಮಂದಿ ನಾಮಪತ್ರ ಸಲ್ಲಿಸಿದ್ದರು. ಯಳಂದೂರು ತಾಲ್ಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ವೈ.ಎಂ. ಜಯರಾಂ ಅವಿರೋಧ ಆಯ್ಕೆಯಾಗಿದ್ದಾರೆ.
ಜೂನ್ 14ರಂದು ಬಸ್‌ನಲ್ಲಿ ಪ್ರಯಾಣಿಸುವಾಗ ಗುರುತಿನ ಚೀಟಿ ಕಳೆದು ಹೋಗಿತ್ತು. ಹೀಗಾಗಿ ನಕಲು ಚೀಟಿಗಾಗಿ ಅರ್ಜಿ ಸಲ್ಲಿಸಿದ್ದೆ.-ಗುರುನಾಯಕ, ಪುಣಜನೂರು
ಮತದಾರರೊಬ್ಬರಿಗೆ ಗುರುತಿನ ಚೀಟಿ ಕೊಡದಂತೆ ಕೆಲವರು ಒತ್ತಡ ಹೇರಿದ್ದರಿಂದ ಅಧಿಕಾರಿಗಳು ಈ ರೀತಿ ವಿಳಂಬ ಮಾಡಿದ್ದಾರೆ. ಇದೊಂದು ಸಂವಿಧಾನ ವಿರೋಧಿ ನಡೆ-ವೃಷಬೇಂದ್ರಪ್ಪ, ಚಾಮರಾಜನಗರ ತಾಲ್ಲೂಕು ಕ್ಷೇತ್ರ ಅಭ್ಯರ್ಥಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.