ADVERTISEMENT

ಪ್ರಗತಿ ಪಥದಲ್ಲಿ ಎಂಸಿಡಿಸಿಸಿ ಬ್ಯಾಂಕ್‌

ಹೆಬ್ಬಾಳು ಶಾಖೆ ಉದ್ಘಾಟನೆ–‘ರೈತ ಸ್ಪಂದನೆ’ ನಾಳೆ: ಜಿ.ಡಿ.ಹರೀಶ್‌ಗೌಡ

​ಪ್ರಜಾವಾಣಿ ವಾರ್ತೆ
Published 4 ಜುಲೈ 2021, 15:44 IST
Last Updated 4 ಜುಲೈ 2021, 15:44 IST

ಮೈಸೂರು: ‘ರೈತರ ಜೀವನಾಡಿಯಾಗಿರುವ ಮೈಸೂರು–ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ (ಎಂಸಿಡಿಸಿಸಿ) ಬ್ಯಾಂಕ್‌ನ ಚುಕ್ಕಾಣಿಯನ್ನು ಹಿಡಿದ ಎರಡೂವರೆ ವರ್ಷದ ಅವಧಿಯಲ್ಲಿ ಹಲವು ಪ್ರಗತಿ ಸಾಧಿಸಲಾಗಿದೆ’ ಎಂದು ಬ್ಯಾಂಕ್‌ನ ಅಧ್ಯಕ್ಷ ಜಿ.ಡಿ.ಹರೀಶ್‌ಗೌಡ ಭಾನುವಾರ ಇಲ್ಲಿ ತಿಳಿಸಿದರು.

‘ಜುಲೈ 6ರ ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಹೆಬ್ಬಾಳಿನ ಸೂರ್ಯ ಬೇಕರಿ ರಸ್ತೆಯಲ್ಲಿ ಹೆಬ್ಬಾಳು ಶಾಖೆ ಉದ್ಘಾಟಿಸಲಾಗುವುದು. ಮೈಮುಲ್‌ ಹಾಗೂ ಸಹಕಾರ ಇಲಾಖೆಯ ಸಹಕಾರದಲ್ಲಿ 11 ಗಂಟೆಗೆ ರೈತ ಸ್ಪಂದನೆ ಆಯೋಜಿಸಿದ್ದೇವೆ. ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್ ಭಾಗಿಯಾಗಲಿದ್ದಾರೆ’ ಎಂದು ಬ್ಯಾಂಕ್‌ನ ಕಚೇರಿಯಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದರು.

‘2018ರ ನವೆಂಬರ್‌ನಲ್ಲಿ ಬ್ಯಾಂಕ್‌ನ ಚುಕ್ಕಾಣಿ ಹಿಡಿದಾಗ ₹ 704 ಕೋಟಿ ಸಾಲ ನೀಡಲಾಗಿತ್ತು. 2021ರ ಮಾರ್ಚ್‌ ಅಂತ್ಯಕ್ಕೆ ₹ 1012.82 ಕೋಟಿ ಸಾಲ ವಿತರಿಸಲಾಗಿದೆ. ₹ 377.17 ಕೋಟಿಯಷ್ಟಿದ್ದ ಠೇವಣಿ ಮೊತ್ತ ₹ 695.75 ಕೋಟಿಗೇರಿದೆ’ ಎಂದು ಅಧ್ಯಕ್ಷರು ಮಾಹಿತಿ ನೀಡಿದರು.

ADVERTISEMENT

‘₹ 180.52 ಕೋಟಿಯಷ್ಟಿದ್ದ ಹೂಡಿಕೆ, ಇದೀಗ ₹ 327.44 ಕೋಟಿಗೇರಿದೆ. ಶೇ 3.01ರಷ್ಟಿದ್ದ ಎನ್‌ಪಿಎ, ಶೇ 1.85ಕ್ಕೆ ಇಳಿದಿದೆ. ರೈತರ ಹಿತದೃಷ್ಟಿಯಿಂದ ಶೇ 6ರ ಬಡ್ಡಿ ದರದಲ್ಲಿ ಸಾಲ ಮರುಪಾವತಿಗೆ ಅವಕಾಶ ಮಾಡಿಕೊಡಲಾಗಿದೆ. ₹ 27 ಲಕ್ಷವಿದ್ದ ಲಾಭ, ₹ 4.04 ಕೋಟಿಯಷ್ಟಾಗಿದೆ. 45,829 ರೈತರು ಸಾಲ ಪಡೆದಿದ್ದರೆ; ಇದೀಗ 80,365 ರೈತರಿಗೆ ಸಾಲ ನೀಡಲಾಗಿದೆ’ ಎಂದು ಹರೀಶ್‌ಗೌಡ ಬ್ಯಾಂಕ್‌ನ ಪ್ರಗತಿಯ ಪಥದ ಬಗ್ಗೆ ತಿಳಿಸಿದರು.

‘ಚಾಮರಾಜನಗರ ಜಿಲ್ಲೆಗೂ ಹೆಚ್ಚಿನ ಆದ್ಯತೆ ನೀಡಿದ್ದೇವೆ. ಕೇಂದ್ರ ಸರ್ಕಾರದ ಆತ್ಮನಿರ್ಭರ್‌ ಯೋಜನೆಯಡಿ ಮಂಜೂರಾದ ₹ 75 ಕೋಟಿಯಲ್ಲಿ ₹ 40 ಕೋಟಿಯನ್ನು ಮೈಸೂರು ಜಿಲ್ಲೆಯಲ್ಲಿ ಸಾಲ ನೀಡಿದರೆ, ₹ 35 ಕೋಟಿ ಚಾಮರಾಜನಗರಕ್ಕೆ ಕೊಟ್ಟಿದ್ದೇವೆ’ ಎಂದು ಅವರು ಹೇಳಿದರು.

‘ಕೋವಿಡ್‌ನ ಸಂಕಷ್ಟದ ಅವಧಿಯ ಮೂರು ತಿಂಗಳು ಬೆಳೆ ಸಾಲ (₹ 200 ಕೋಟಿ) ಮರು ಪಾವತಿಯನ್ನು ಮುಂದೂಡಲಾಗಿತ್ತು. ಮಧ್ಯಮವಧಿ ಸಾಲ (₹ 30 ಕೋಟಿ) ಮರು ಪಾವತಿಗೆ 2022ರ ಮಾರ್ಚ್‌ ಅಂತ್ಯದವರೆಗೂ ಸಮಯವಿದೆ’ ಎಂದು ತಿಳಿಸಿದರು.

‘ಈ ಹಿಂದೆ ನಡೆದಿದ್ದ ಅವ್ಯವಹಾರದ ತನಿಖೆ ನಡೆಸಿ ಕ್ರಮ ತೆಗೆದುಕೊಂಡ ಬಳಿಕ ಎರಡೂ ಜಿಲ್ಲೆಯ ರೈತರಲ್ಲಿ ಬ್ಯಾಂಕ್‌ನ ಬಗ್ಗೆ ಈಚೆಗಿನ ವರ್ಷಗಳಲ್ಲಿ ವಿಶ್ವಾಸ ಹೆಚ್ಚಿದೆ. ಇದರ ಪರಿಣಾಮ ಬ್ಯಾಂಕ್‌ ಪ್ರಗತಿ ಪಥದಲ್ಲಿ ಸಾಗಿದೆ. ರಾಜ್ಯ ಸರ್ಕಾರ ₹ 860 ಕೋಟಿ ಬೆಳೆ ಸಾಲದ ಗುರಿ ನಿಗದಿ ಪಡಿಸಿದ್ದರೆ, ನಾವು ₹ 1000 ಕೋಟಿ ಸಾಲ ನೀಡಬೇಕು ಎಂದು ತೀರ್ಮಾನಿಸಿದ್ದೇವೆ’ ಎಂದು ಜಿ.ಡಿ.ಹರೀಶ್‌ಗೌಡ ಹೇಳಿದರು.

ಪಶು ಆಹಾರ ಕಾರ್ಖಾನೆಗಾಗಿ ಮನವಿ: ಪ್ರಸನ್ನ

‘ಮೈಸೂರು–ಚಾಮರಾಜನಗರ ಜಿಲ್ಲೆಯಲ್ಲಿ ಮೆಕ್ಕೆಜೋಳವನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಇದನ್ನು ಬಳಸಿಕೊಂಡು ಪಶು ಆಹಾರ ತಯಾರಿಸುವ ಕಾರ್ಖಾನೆಯೊಂದನ್ನು ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಆರಂಭಿಸುವಂತೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರಿಗೆ ಮನವಿ ಸಲ್ಲಿಸಲಾಗಿದೆ’ ಎಂದು ಮೈಮುಲ್‌ ಅಧ್ಯಕ್ಷ ಪಿ.ಎಂ.ಪ್ರಸನ್ನ ತಿಳಿಸಿದರು.

‘2021–22ನೇ ಸಾಲಿನಲ್ಲಿ ₹ 73 ಕೋಟಿ ವೆಚ್ಚದಲ್ಲಿ ಮೈಮುಲ್‌ ವತಿಯಿಂದ ಯುಎಸ್‌ಬಿ ಪ್ಲಾಂಟ್‌ ಹಾಗೂ ಹಾಲಿನ ಪೌಡರ್‌ ತಯಾರಿಕೆ ಘಟಕವೊಂದನ್ನು ಸ್ಥಾಪಿಸಲಾಗುವುದು’ ಎಂದು ಅವರು ಹೇಳಿದರು.

‘ಸಂಕಷ್ಟದಲ್ಲೂ ಮೈಮುಲ್‌ ವತಿಯಿಂದ ರೈತರಿಗೆ 1 ಲೀಟರ್‌ ಹಾಲಿಗೆ ₹ 26 ನೀಡಲಾಗುತ್ತಿದೆ. ಇದರಿಂದಾಗಿ ಒಕ್ಕೂಟಕ್ಕೆ ತಿಂಗಳಿಗೆ ₹ 4 ಕೋಟಿ ಹೆಚ್ಚುವರಿ ಹೊರೆ ಬೀಳುತ್ತಿದೆ’ ಎಂದು ಪ್ರಸನ್ನ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಎಂಸಿಡಿಸಿಸಿ ಬ್ಯಾಂಕ್‌ನ 2021–22ನೇ ಸಾಲಿನ ಉದ್ದೇಶಿತ ಗುರಿ

90 ಸಾವಿರ ರೈತರಿಗೆ ₹ 860 ಕೋಟಿ ಬೆಳೆ ಸಾಲ ವಿತರಣೆಯ ಗುರಿ

16,069 ರೈತರಿಗೆ ಜೂನ್‌ ಅಂತ್ಯದೊಳಗೆ ₹ 183.74 ಕೋಟಿ ಸಾಲ ವಿತರಣೆ

1315 ಹೊಸ ರೈತರಿಗೆ ₹ 11.74 ಕೋಟಿ ಮೊತ್ತದ ಬೆಳೆ ಸಾಲ ವಿತರಣೆ

1180 ಹೊಸ ರೈತರಿಗೆ ₹ 10.60 ಕೋಟಿ ಬೆಳೆ ಸಾಲ ವಿತರಿಸಲು ಸಿದ್ಧತೆ

1200 ರೈತರಿಗೆ ₹ 40 ಕೋಟಿ ಮಧ್ಯಮಾವಧಿ ಸಾಲ ವಿತರಣೆಯ ಗುರಿ

1350 ಸ್ವ ಸಹಾಯ ಗುಂಪುಗಳಿಗೆ ₹ 40 ಕೋಟಿ ಸಾಲ ವಿತರಣೆಯ ಗುರಿ

100 ಜನ ಸದಸ್ಯರಿಗೆ ಹೈನುಗಾರಿಕೆ ಅಭಿವೃದ್ಧಿಗಾಗಿ ₹ 2.50 ಕೋಟಿ ಸಾಲ

50 ಜನ ಸದಸ್ಯರಿಗೆ ಆಡು, ಕುರಿ, ಕೋಳಿ ಸಾಕಲು ₹ 5 ಕೋಟಿ ಸಾಲ

39 ಸಹಕಾರ ಸಂಘಗಳಿಗೆ ₹ 9.04 ಕೋಟಿ ಎಂಎಸ್‌ಸಿ ಸಾಲ

80 ಸಾವಿರ ಸದಸ್ಯರಿಗೆ 16 ಲಕ್ಷ ಗಿಡ ವಿತರಣೆ

ಆಧಾರ: ಎಂಸಿಡಿಸಿಸಿ ಬ್ಯಾಂಕ್‌

ಮೈಮುಲ್‌ನ 2021–22ನೇ ಸಾಲಿನ ಉದ್ದೇಶಿತ ಗುರಿ

₹ 2.50 ಕೋಟಿ ಕಟ್ಟಡ ಅನುದಾನ ಬಿಡುಗಡೆ

500 ಮೇವು ಯಂತ್ರ ಖರೀದಿಗೆ ₹ 62.50 ಲಕ್ಷ ಮೀಸಲು (ಶೇ 50ರ ಅನುದಾನ)

1 ಲಕ್ಷ ಅಗಸೆ–ನುಗ್ಗೆ ಸಸಿ ವಿತರಣೆ

250 ಹಾಲು ಕರೆಯುವ ಯಂತ್ರ ಖರೀದಿಗೆ ₹ 81.25 ಲಕ್ಷ ಮೀಸಲು (ಶೇ 50ರ ಅನುದಾನ)

15 ಸಾವಿರ ರಬ್ಬರ್‌ ಮ್ಯಾಟ್‌ ಖರೀದಿಗೆ ₹ 2.10 ಕೋಟಿ ಮೀಸಲು (ಶೇ 50ರ ಅನುದಾನ)

40 ಸಾವಿರ ಹಸುಗಳಿಗೆ ವಿಮೆ ಮಾಡಿಸಲು ಒಕ್ಕೂಟದಿಂದ ₹ 7 ಕೋಟಿ ಸಹಾಯಧನ

₹ 1 ಕೋಟಿ ಟ್ರಸ್ಟ್‌ನಿಂದ ವಿಮಾ ಪ್ರೀಮಿಯಂಗೆ

ಆಧಾರ: ಮೈಮುಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.