ಮೈಸೂರು: ಇದೇ 26ರಂದು ನಡೆಯಲಿರುವ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಎಂಸಿಡಿಸಿಸಿ) ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಗೆ ಸ್ಪರ್ಧೆ ಬಯಸಿ ಚಾಮರಾಜನಗರ ಕ್ಷೇತ್ರದ ಶಾಸಕ ಸಿ.ಪುಟ್ಟರಂಗಶೆಟ್ಟಿ ಸೇರಿದಂತೆ 15 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.
ಸೋಮವಾರ ಒಂದೇ ದಿನ 11 ಮಂದಿಯಿಂದ ಉಮೇದುವಾರಿಕೆ ಸಲ್ಲಿಕೆಯಾಗಿದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರಗಳಿಂದ ಮೈಸೂರು ತಾಲ್ಲೂಕಿನಿಂದ ಕೆಂಚಪ್ಪ, ಎಚ್.ಡಿ. ಕೋಟೆಯಿಂದ ಲಕ್ಷ್ಮೀಪ್ರಸಾದ್, ಶಿವಣ್ಣ, ಶಿವನಂಜೇಗೌಡ, ಮಾದಪ್ಪ, ಗುಂಡ್ಲುಪೇಟೆಯಿಂದ ವೀರಪ್ಪ, ಚಾಮರಾಜನಗರದಿಂದ ಸಿ. ಪುಟ್ಟರಂಗಶೆಟ್ಟಿ, ವೈಷಭೇಂದ್ರಪ್ಪ, ಪಿರಿಯಾಪಟ್ಟಣದಿಂದ ರವಿ, ಲೋಕೇಶ್, ಕೊಳ್ಳೇಗಾಲದಿಂದ ಹನೂರು ಕ್ಷೇತ್ರದ ಮಾಜಿ ಶಾಸಕ ಸಿ.ನರೇಂದ್ರ, ನಾಗರಾಜು, ಹುಣಸೂರಿನಿಂದ ಉದ್ಯಮಿ ಅಮರನಾಥ್ ಕಣಕ್ಕಿಳಿದಿದ್ದಾರೆ.
ತಾಲ್ಲೂಕು, ಜಿಲ್ಲೆ ಹಾಗೂ ಜಿಲ್ಲೆ ಮೇಲ್ಪಟ್ಟು ಕಾರ್ಯವ್ಯಾಪ್ತಿ ಹೊಂದಿರುವ ಸಹಕಾರ ಸಂಘಗಳು ಮತ್ತು ಸಹಕಾರ ಬ್ಯಾಂಕ್‌ಗಳ ಕ್ಷೇತ್ರದ ಒಂದು ಸ್ಥಾನಕ್ಕೆ ಜಿ.ಎಸ್. ಮಂಜುನಾಥ್ ಹಾಗೂ ನಗರಪಾಲಿಕೆ ಮಾಜಿ ಸದಸ್ಯ ಎಸ್.ಬಿ.ಎಂ. ಮಂಜು ನಾಮಪತ್ರ ಸಲ್ಲಿಸಿದ್ದಾರೆ.
ಈ ಬಾರಿ ಘಟಾನುಘಟಿಗಳು ಕಣಕ್ಕಿಳಿಯುತ್ತಿರುವುದರಿಂದ ಚುನಾವಣಾ ಕಣ ರಂಗೇರಿದೆ. ಆಕಾಂಕ್ಷಿಗಳು ಈಗಾಗಲೇ ಮತದಾರರಾಗಿರುವ ಸಹಕಾರ ಸಂಘಗಳ ‘ಪ್ರತಿನಿಧಿ’ (ಡೆಲಿಗೇಟ್ಸ್)ಗಳನ್ನು ಭೇಟಿಯಾಗಿ ಮನವೊಲಿಸುವ ಕೆಲಸದಲ್ಲಿ ತೊಡಗಿದ್ದಾರೆ.
ಈ ಬಾರಿ ಹಳೆಯ ಮುಖಗಳೊಂದಿಗೆ ಕೆಲವು ಹೊಸ ಮುಖಗಳು ಕೂಡ ಕಣಕ್ಕಿಳಿಯುತ್ತಿವೆ. ಎಚ್.ಡಿ.ಕೋಟೆ ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು, ಹುಣಸೂರು ಶಾಸಕ ಜಿ.ಡಿ. ಹರೀಶ್‌ಗೌಡ, ಗುಂಡ್ಲುಪೇಟೆ ಕ್ಷೇತ್ರದ ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್, ಎಂಸಿಡಿಸಿಸಿ ಮಾಜಿ ಅಧ್ಯಕ್ಷ ಎಂ. ಚಂದ್ರಶೇಖರ್, ಸಿ. ಬಸವೇಗೌಡ, ಮಾಜಿ ನಿರ್ದೇಶಕರಾದ ಬಿ.ಎನ್. ಸದಾನಂದ, ಅಮಿತ್ ವಿ.ದೇವರಹಟ್ಟಿ, ಮುಡಾ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್ ಕಣಕ್ಕಿಳಿಯುವುದು ಖಚಿತವಾಗಿದೆ ಎನ್ನಲಾಗುತ್ತಿದೆ. ಕೆ.ಆರ್. ನಗರ ಕ್ಷೇತ್ರದ ಶಾಸಕ ಡಿ.ರವಿಶಂಕರ್ ತಂದೆ ದೊಡ್ಡಸ್ವಾಮೇಗೌಡ ಸ್ಪರ್ಧಿಸಲಿದ್ದಾರೆ ಎನ್ನಲಾಗುತ್ತಿದೆ.
‘ನಾನು ಈ ಬಾರಿಯೂ ಸ್ಪರ್ಧಿಸಲಿದ್ದೇನೆ. ನಮ್ಮ ತಂಡದಲ್ಲಿ ಯಾರಾರು ಇರಲಿದ್ದಾರೆ ಎಂಬುದನ್ನು ಶೀಘ್ರವೇ ಪ್ರಕಟಿಸಲಾಗುವುದು’ ಎಂದು ಶಾಸಕ, ಬ್ಯಾಂಕ್‌ನ ನಿಕಟಪೂರ್ವ ಅಧ್ಯಕ್ಷ ಜಿ.ಡಿ. ಹರೀಶ್‌ಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.
ಉಮೇದುವಾರಿಕೆ ಸಲ್ಲಿಸಲು ಜೂನ್ 18 (ಮಧ್ಯಾಹ್ನ 2ರವರೆಗೆ) ಕಡೆಯ ದಿನವಾಗಿದೆ. ಚುನಾವಣೆಯು 26ರಂದು ನಂಜರಾಜ ಬಹದ್ದೂರ್ ಛತ್ರದಲ್ಲಿ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.