ಕಟ್ಟಡ
ಮೈಸೂರು: ನಗರದ ಹೆಬ್ಬಾಳದಲ್ಲಿರುವ ಗಣಪತ್ ಲಾಲ್ ಮಾಲಿಕತ್ವದ ಕಟ್ಟಡಕ್ಕೆ ಎಂಡಿಎಂಎ ತಯಾರು ಮಾಡುತ್ತಿದ್ದ ಆರೋಪದಲ್ಲಿ ದೆಹಲಿಯ ಎನ್ ಸಿಬಿ (ನಾರ್ಕೊಟಿಕ್ ಕಂಟ್ರೋಲ್ ಬ್ಯೂರೊ) ಪೊಲೀಸರು ದಾಳಿ ನಡೆಸಿದ್ದಾರೆ.
ಜೆ.ಕೆ ಟಯರ್ಸ್ ಹಿಂಭಾಗದ ರಸ್ತೆಯಲ್ಲಿರುವ ಕಟ್ಟಡದಲ್ಲಿ ರಾಸಾಯನಿಕ ತಯಾರಿಕ ಘಟಕವೊಂದು ಪತ್ತೆಯಾಗಿದ್ದು. ಘಟಕದ ಸಿಬ್ಬಂದಿಗಳ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಈಚೆಗೆ ನರಸಿಂಹರಾಜ ಠಾಣಾ ವ್ಯಾಪ್ತಿಯಲ್ಲಿ ಮಹಾರಾಷ್ಟ್ರ ಪೊಲೀಸರು ಎಂಡಿಎ ತಯಾರಿಕಾ ಘಟಕ ಪತ್ತೆಹಚ್ಚಿದ್ದರು.
ಕೋಟ್ಯಾಂತರ ಮೌಲ್ಯದ ಎಂಡಿಎಂಎ ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಪೊಲೀಸರು ಖಚಿತಪಡಿಸಿಲ್ಲ.
'ಇದು ಫಿನೈಲ್ ಕಾರ್ಖಾನೆ, ಕಾಸ್ಟಿಕ್ ಸೋಡಾ ಮತ್ತು ಉಪ್ಪಿನಂತಹ ಮಾರ್ಜಕ ವಶಪಡಿಸಿಕೊಂಡಿದ್ದಾರೆ. ಡ್ರಗ್ಸ್ ಸಂಬಂಧಿಸಿದ ಯಾವುದೇ ವಸ್ತು ಸಿಕ್ಕಿಲ್ಲ' ಎಂದು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
'ಕಟ್ಟಡವು ಬೋರೇಗೌಡ ಅವರಿಗೆ ಸೇರಿದ್ದು, ಗಣಪತ್ ಲಾಲ್ ಅವರು ಕಳೆದ ಫೆಬ್ರವರಿಯಿಂದ ಕಟ್ಟಡವನ್ನು ತಿಂಗಳಿಗೆ ₹ 47 ಸಾವಿರ ಬಾಡಿಗೆಗೆ ಪಡೆದಿದ್ದರು. ಗಣಪತ್ ಲಾಲ್ ಸಂಬಂಧಿಯೊಬ್ಬ ಗುಜರಾತ್ ನಲ್ಲಿ ಡ್ರಗ್ಸ್ ಪ್ರಕರಣದಲ್ಲಿ ಬಂಧಿಯಾಗಿದ್ದಾನೆ. ಅಲ್ಲಿನ ಮಾಹಿತಿ ಆಧರಿಸಿ ಇಲ್ಲಿ ದಾಳಿ ನಡೆಸಿದ್ದಾರೆ' ಎಂದು ಬೋರೇಗೌಡ ಅವರ ವಕೀಲ ಭರತ್ ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.