ADVERTISEMENT

ಬಿದಿರು ಹೆಣೆದು ಬದುಕು ಕಟ್ಟಿಕೊಂಡ ಮೇದರು

ಕಲ್ಕುಣಿಕೆ ಬಡಾವಣೆಯ ಮೇದರ ಕೇರಿ– ಬಿದಿರು ಕೌಶಲಕ್ಕೆ ಹೆಸರುವಾಸಿ

ಎಚ್.ಎಸ್.ಸಚ್ಚಿತ್
Published 9 ಮೇ 2019, 20:00 IST
Last Updated 9 ಮೇ 2019, 20:00 IST
ಬಿದಿರಿನ ಮೊರ ಹೆಣೆಯುತ್ತಿರುವ ಮಹಿಳೆಯರು
ಬಿದಿರಿನ ಮೊರ ಹೆಣೆಯುತ್ತಿರುವ ಮಹಿಳೆಯರು   

ಹುಣಸೂರು: ಸಾಂಪ್ರದಾಯಿಕ ಕುಲ ಕಸುಬು ಬಿದಿರು ಹೆಣೆದು ಬದುಕು ಕಟ್ಟಿಕೊಂಡಿರುವ ಮೇದರು ಇತರ ಗ್ರಾಮಗಳ ಜನರಿಗೆ ಮಾದರಿಯಾಗಿದ್ದಾರೆ.

ನಗರದ ಕಲ್ಕುಣಿಕೆ ಬಡಾವಣೆಯ ಮೇದರ ಕೇರಿಯಲ್ಲಿ ವಾಸಿಸುತ್ತಿರುವ ಸುಮಾರು 130 ಕುಟುಂಬಗಳು ಬಿದಿರಿನಿಂದ ಸಿದ್ಧಗೊಳಿಸಿದ ಪರಿಕರ ಮಾರಾಟ ಮಾಡಿ ಜೀವನ ನಡೆಸುತ್ತಿದ್ದಾರೆ.

‘ಓದುವ ಆಸೆ ಇದೆ. ಆದರೆ, ಕುಲ ಕಸುಬು ಬಿಡಬಾರದೆಂದು ಈ ಕೆಲಸದಲ್ಲಿ ತೊಡಗಿದ್ದೇನೆ. ಬಿದಿರಿನ ಸಾವಿರಾರು ಪರಿಕರ ತಯಾರಿಸಿ ಮಾರಿದ್ದೇನೆ. ಮೇದರು ಮಾತ್ರ ಬಿದಿರು ಹೆಣೆಯುವಲ್ಲಿ ನಿಸ್ಸೀಮರು ಎಂಬ ಹೆಗ್ಗಳಿಕೆ ಹಾಗೂ ಹೆಮ್ಮೆ ನಮಗಿದೆ’ ಎಂದು ಹೇಳುತ್ತಾರೆ 60 ವರ್ಚದ ತೊಳಸಮ್ಮ.

ADVERTISEMENT

ಮೊರ, ಬುಟ್ಟಿ, ತಿಂಡಿ ಬುಟ್ಟಿ, ಬೀಸಣಿಗೆ, ಕೋಳಿ ಗೂಡು, ಕುಕ್ಕೆ, ‍ಪೂಜಾ ಸಾಮಗ್ರಿ ಬುಟ್ಟಿ, ಪಂಜರ, ಏಣಿ ಹೀಗೆ ಬಿದಿರಿನಿಂದ ಅನೇಕ ಪ‍ರಿಕರ ಸಿದ್ಧಪಡಿಸಿ ಮಾರಾಟ ಮಾಡುತ್ತಿದ್ದಾರೆ. ವಿವಿಧೆಡೆಯಿಂದ ಭಾರಿ ಬೇಡಿಕೆಯೂ ಬರುತ್ತಿದೆ.

‘ಸಾಂಪ್ರದಾಯಿಕ ಪರಿಕರವನ್ನು ಸಿದ್ಧಪಡಿಸುವಲ್ಲಿ ಕೌಶಲ ಹೊಂದಿದ್ದೇವೆ. ಆದರೆ, ಇತ್ತೀಚಿನ ದಿನಗಳಲ್ಲಿ ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಬಿದಿರು ಪರಿಕರಗಳನ್ನು ಮಾರುಕಟ್ಟೆಗೆ ಒದಗಿಸಬೇಕಾಗಿದೆ. ಈ ಹಂತದಲ್ಲಿ ಸ್ವಲ್ಪ ಸಮಸ್ಯೆ ಎದುರಾಗುತ್ತಿದೆ’ ಎಂದು ಸಮಾಜದ ಮುಖಂಡ ರೇವಣ್ಣ ಹೇಳುತ್ತಾರೆ.

ಈ ಸಮುದಾಯದವರು ಹಲವಾರು ತಲೆಮಾರುಗಳಿಂದ ಈ ವೃತ್ತಿಯಲ್ಲಿ ತೊಡಗಿದ್ದಾರೆ. ಪ್ಲಾಸ್ಟಿಕ್ ವಸ್ತುಗಳ ಹಾವಳಿಯ ನಡುವೆಯೂ ಈ ಸಮುದಾಯ ಅಸ್ತಿತ್ವ ಉಳಿಸಿಕೊಂಡು ಸ್ಪರ್ಧೆ ನೀಡುತ್ತಿರುವುದು ವಿಶೇಷ.

‘ಮೇದರಿಗೆ ಆರ್ಥಿಕ ಶಕ್ತಿಗೆ ಸಹಕಾರಿ ಸಂಘ ಅಗತ್ಯವಿದೆ. ಯುವಕರಿಗೆ ಮತ್ತಷ್ಟು ಕೌಶಲ ತರಬೇತಿ ನೀಡಬೇಕಾಗಿದೆ. ಇದರಿಂದ ಸಾಂಪ್ರದಾಯಕ ಮತ್ತು ಆಧುನಿಕ ಬಿದಿರು ಸಾಮಗ್ರಿ ತಯಾರಿಸಿ ಗ್ರಾಹಕರ ಬೇಡಿಕೆಗೆ ಸ್ಪಂದಿಸಲು ಸಾಧ್ಯವಾಗಲಿದೆ’ ಎಂದು ಅವರು ನುಡಿಯುತ್ತಾರೆ.

ಕೊರತೆ: ‘ಬಿದಿರು ಗಿಡ ಅರಣ್ಯ ಉತ್ಪನ್ನಗಳ ವ್ಯಾಪ್ತಿಗೆ ಸೇರಿಸಿದ ನಂತರ ಮೇದರ ಸಾಂಪ್ರದಾಯಕ ಕಸುಬಿಗೆ ಹೊಡೆತ ಬಿದ್ದಿದೆ. ಆರ್ಥಿಕವಾಗಿ ಏರುಪೇರು ಉಂಟಾಗಿದೆ. ಈ ಹಿಂದೆ ಅರಣ್ಯ ಇಲಾಖೆಯಿಂದಲೇ ಬಿದಿರು ವಿತರಿಸುವ ವ್ಯವಸ್ಥೆ ಇತ್ತು. ಕಾನೂನು ತೊಡಕಿನಿಂದ ಆ ವ್ಯವಸ್ಥೆ ಸ್ಥಗಿತಗೊಂಡಿದೆ. ಕೊರತೆ ನೀಗಿಸಿಕೊಳ್ಳಲು ಕೊಡಗಿನ ಕಾಫಿ ತೋಟದಿಂದ ಖಾಸಗಿ ವ್ಯಕ್ತಿಗಳಿಂದ ಬಿದಿರು ಖರೀದಿಸಬೇಕಾಗಿದೆ’ ಎನ್ನುವರು ಮಹೇಶ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.