ADVERTISEMENT

ಮೈಸೂರು | ವೈದ್ಯಕೀಯ ತ್ಯಾಜ್ಯ ಸಮರ್ಪಕ ವಿಲೇವಾರಿಗೆ ಮಹಾನಗರಪಾಲಿಕೆ ಆಯುಕ್ತರ ಸೂಚನೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2025, 3:59 IST
Last Updated 5 ಆಗಸ್ಟ್ 2025, 3:59 IST
ಮೈಸೂರಿನ ಮಹಾನಗರಪಾಲಿಕೆ ವಲಯ ಕಚೇರಿ–3ರ ಸಭಾಂಗಣದಲ್ಲಿ ಸೋಮವಾರ ನಡೆದ ಆಸ್ಪತ್ರೆಗಳ ಪ್ರತಿನಿಧಿಗಳ ಸಭೆಯಲ್ಲಿ ಆಯುಕ್ತ ಶೇಖ್ ತನ್ವೀರ್‌ ಆಸೀಫ್ ಮಾತನಾಡಿದರು
ಮೈಸೂರಿನ ಮಹಾನಗರಪಾಲಿಕೆ ವಲಯ ಕಚೇರಿ–3ರ ಸಭಾಂಗಣದಲ್ಲಿ ಸೋಮವಾರ ನಡೆದ ಆಸ್ಪತ್ರೆಗಳ ಪ್ರತಿನಿಧಿಗಳ ಸಭೆಯಲ್ಲಿ ಆಯುಕ್ತ ಶೇಖ್ ತನ್ವೀರ್‌ ಆಸೀಫ್ ಮಾತನಾಡಿದರು   

ಮೈಸೂರು: ‘ವೈದ್ಯಕೀಯ ತ್ಯಾಜ್ಯ ಸಮರ್ಪಕ ವಿಲೇವಾರಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ನಿಯಮಾನುಸಾರ ನಿರ್ವಹಣೆ ಮಾಡಬೇಕು’ ಎಂದು ಮಹಾನಗರಪಾಲಿಕೆ ಆಯುಕ್ತ ಶೇಖ್ ತನ್ವೀರ್‌ ಆಸೀಫ್‌ ಸೂಚಿಸಿದರು.

ಇಲ್ಲಿನ ನಗರಪಾಲಿಕೆ ವಲಯ ಕಚೇರಿ–3ರಲ್ಲಿ ಸೋಮವಾರ ನಡೆದ ಆಸ್ಪತ್ರೆಗಳು, ಚಿಕಿತ್ಸಾಲಯಗಳು ಮತ್ತು ಪ್ರಯೋಗಾಲಯಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ನಗರದಲ್ಲಿ ಪರಿಸರ ಸುರಕ್ಷತೆ ಮತ್ತು ಸಾರ್ವಜನಿಕ ಆರೋಗ್ಯವನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ತ್ಯಾಜ್ಯ ವಿಲೇವಾರಿ ಮಹತ್ವದ್ದಾಗಿದೆ. ಇದಕ್ಕಾಗಿ ಜೈವಿಕ ವೈದ್ಯಕೀಯ ತ್ಯಾಜ್ಯ ನಿರ್ವಹಣಾ ನಿಯಮಗಳು 2016 (ಬಿಎಂಡಬ್ಲ್ಯೂ ನಿಯಮಗಳು 2016) ಪರಿಣಾಮಕಾರಿ ಅನುಷ್ಠಾನಕ್ಕೆ ಕೈಜೋಡಿಸಬೇಕು’ ಎಂದು ತಿಳಿಸಿದರು.

ADVERTISEMENT

‘ಸಾರ್ವಜನಿಕ ಆರೋಗ್ಯ ಮತ್ತು ಪರಿಸರಕ್ಕೆ ತೀವ್ರ ಅಪಾಯ ಉಂಟು ಮಾಡುವ ಜೈವಿಕ ವೈದ್ಯಕೀಯ ತ್ಯಾಜ್ಯವನ್ನು ಘನತ್ಯಾಜ್ಯದೊಂದಿಗೆ ಬೆರೆಸುವುದು ಅಲ್ಲಲ್ಲಿ ಕಂಡುಬರುತ್ತಿದೆ. ಈ ಅಭ್ಯಾಸ ಕಳವಳಕಾರಿಯಾಗಿದ್ದು, ಗಂಭೀರವಾಗಿ ಪರಿಗಣಿಸಲಾಗಿದೆ. ಪೌರಕಾರ್ಮಿಕರು ಈ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು’ ಎಂದು ಸೂಚಿಸಿದರು.

‘ಜೈವಿಕ ವೈದ್ಯಕೀಯ ತ್ಯಾಜ್ಯದ ವೈಜ್ಞಾನಿಕ ವಿಂಗಡಣೆ, ಸಂಗ್ರಹಣೆ ಮತ್ತು ವಿಲೇವಾರಿಯನ್ನು ಖಚಿತಪಡಿಸಿಕೊಳ್ಳಬೇಕು. ಇದಕ್ಕಾಗಿ ಎಲ್ಲಾ ಆರೋಗ್ಯ ಸಂಸ್ಥೆಗಳು ಬಿಎಂಡಬ್ಲ್ಯೂ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು’ ಎಂದು ತಿಳಿಸಿದರು.

ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಸಂಬಂಧ ಸೆ.1ರ ಗಡುವನ್ನು ನೀಡಿದರು. ಮಾನದಂಡಗಳನ್ನು ಪಾಲಿಸಲು ವಿಫಲವಾದರೆ ಕಾನೂನಿನ ನಿಬಂಧನೆಗಳ ಪ್ರಕಾರ ಕಠಿಣ ಕ್ರಮ ಹಾಗೂ ದಂಡ ವಿಧಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

‘ಮೈಸೂರು ಸ್ವಚ್ಛ ಮತ್ತು ಸುರಕ್ಷಿತ ನಗರವಾಗಿ ಉಳಿಯುವಂತೆ ನೋಡಿಕೊಳ್ಳಲು ಪಾಲಿಕೆ ಬದ್ಧವಾಗಿದ್ದು, ಈ ಗುರಿ ಸಾಧಿಸಲು ಎಲ್ಲಾ ಪಾಲುದಾರರು ಸಹಕರಿಸಬೇಕು’ ಎಂದು ಕೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.