
ಮೈಸೂರು: ‘ಜಿಲ್ಲಾ ಯೋಜನಾ ವರದಿಗಳನ್ನು ಬಜೆಟ್ ಸಿದ್ಧಪಡಿಸುವ ಮೊದಲು ಸಮಿತಿಗೆ ಸಲ್ಲಿಸಬೇಕು. ಮೈಸೂರು ವಿಭಾಗದ ಎಲ್ಲಾ ಜಿಲ್ಲೆಗಳು ವರದಿಯನ್ನು ಡಿ.15ರೊಳಗೆ ಕೊಡಬೇಕು’ ಎಂದು ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ ಸೂಚಿಸಿದರು.
ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಮೈಸೂರು ವಿಭಾಗದ 8 ಜಿಲ್ಲೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ವಿಕೇಂದ್ರೀಕರಣ ವ್ಯವಸ್ಥೆಯನ್ನು ಸೈದ್ಧಾಂತಿಕವಾಗಿ ನಾವು ಒಪ್ಪಿಕೊಂಡಿದ್ದರೂ ಜಿಲ್ಲಾ ಯೋಜನಾ ವರದಿ ತಯಾರಿಕೆ ಸಮಿತಿ ಸಭೆಗಳು ನಿಗದಿತವಾಗಿ ನಡೆಯಬೇಕು. ಆ ವರದಿಯಲ್ಲಿ ಸುಸ್ಥಿರ ಅಭಿವೃದ್ಧಿ, ಜಿಡಿಪಿ, ಮಾನವ ಅಭಿವೃದ್ಧಿ ಸೂಚ್ಯಂಕಕ್ಕೆ ಆದ್ಯತೆ ನೀಡಬೇಕು’ ಎಂದು ತಿಳಿಸಿದರು.
‘ಜಿಲ್ಲಾ ಮಟ್ಟದಲ್ಲಿ ಯೋಜನೆ ತಯಾರಿಸುವಾಗ ಸಮರ್ಪಕವಾಗಿ ಪರಿಶೀಲಿಸಬೇಕು. ಆಯಾ ಜಿಲ್ಲೆಯಲ್ಲಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಹೆಚ್ಚಿನ ಆದ್ಯತೆ ನೀಡಬೇಕು’ ಎಂದು ಹೇಳಿದರು.
ಅರ್ಥ ಮಾಡಿಕೊಂಡು ಕ್ರಮ ವಹಿಸಿ:
‘ಮಾನವ ಅಭಿವೃದ್ಧಿ ಸೂಚ್ಯಂಕ ಹೆಚ್ಚಳ ಮಾಡಲು ಕ್ರಮ ಕೈಗೊಳ್ಳಬೇಕು. ಲಭ್ಯವಿರುವ ಅನುದಾನದ ಆಧಾರದ ಮೇಲೆ ಯೋಜನೆ ರೂಪಿಸಿ ಅನುಷ್ಠಾನದ ನಂತರ ಉಂಟಾಗುವ ಉತ್ತಮ ಬೆಳವಣಿಗೆಯ ಬಗ್ಗೆ ಅರ್ಥ ಮಾಡಿಕೊಂಡು ಕ್ರಮ ವಹಿಸಬೇಕು’ ಎಂದು ನಿರ್ದೇಶನ ನೀಡಿದರು.
ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಯುಕೇಶ್ ಕುಮಾರ್ ಮಾತನಾಡಿ, ‘ಜಿಲ್ಲೆಯ 9 ತಾಲ್ಲೂಕುಗಳಲ್ಲಿ ಆಯಾ ಶಾಸಕರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಮಟ್ಟದ ಯೋಜನಾ ಸಮಿತಿ ಸಭೆಯನ್ನು ನ.4ರಿಂದ 15ರವರೆಗೆ ನಡೆಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಸಭೆ ನಡೆಸಿ ವರದಿ ಸಲ್ಲಿಸಲಾಗುವುದು’ ಎಂದು ತಿಳಿಸಿದರು.
ಯೋಜನೆ ಸಿದ್ಧಪಡಿಸಲಾಗುತ್ತಿದೆ:
‘ಸುಸ್ಥಿರ ಅಭಿವೃದ್ಧಿಯಲ್ಲಿ ಮುಖ್ಯವಾಗಿ ಶಿಕ್ಷಣ, ಕೃಷಿ, ಪೌಷ್ಟಿಕ ಆಹಾರ ಸೇರಿದಂತೆ ಹಲವು ವಿಷಯವನ್ನು ಮುಖ್ಯವಾಗಿಟ್ಟುಕೊಂಡು ಯೋಜನೆ ಸಿದ್ಧಪಡಿಸಲಾಗುತ್ತಿದೆ’ ಎಂದು ಮಂಡ್ಯ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್. ನಂದಿನಿ ಮಾಹಿತಿ ನೀಡಿದರು.
ಮಾನವ ಯೋಜನೆ ಸಂಯೋಜನೆಯ ಹಿರಿಯ ನಿರ್ದೇಶಕ ಬಸವರಾಜು ಎಸ್. ಅವರು ಮಾನವ ಅಭಿವೃದ್ಧಿ, ಸುಸ್ಥಿರ ಅಭಿವೃದ್ಧಿ ಸಾಧಿಸುವುದು ಹೇಗೆ? ಯಾವ ಯಾವ ಜಿಲ್ಲೆಗಳು ಹೆಚ್ಚು ಪ್ರಗತಿ ಸಾಧಿಸಿದೆ, ಯಾವ ಕ್ಷೇತ್ರ ಹಿಂದುಳಿದಿದೆ ಎಂಬಿತ್ಯಾದಿ ವಿಷಯ ಮಂಡಿಸಿದರು.
ಸರ್ಕಾರದ ಕಾರ್ಯದರ್ಶಿ ರಮಣ್‌ದೀಪ್ ಚೌದರಿ, ಹಾಸನ, ಚಿಕ್ಕಮಗಳೂರು, ಚಾಮರಾಜನಗರ, ಮಂಗಳೂರು ಜಿಲ್ಲೆಯ ಸಿಇಒಗಳು, ತಾಲ್ಲೂಕು ಮತ್ತು ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.