ADVERTISEMENT

ತೆಪ್ಪದ ಮಾಲೀಕರೊಂದಿಗೆ ಸಭೆ: ನಿರ್ಧಾರ

ಪ್ರಿ ವೆಡ್ಡಿಂಗ್ ಫೋಟೊಶೂಟ್‌ ಪ್ರಕರಣ; ತೆಪ್ಪದ ಮಾಲೀಕರ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2020, 5:58 IST
Last Updated 12 ನವೆಂಬರ್ 2020, 5:58 IST

ಮೈಸೂರು: ತಲಕಾಡಿನ ಮುಡುಕುತೊರೆಯ ಕಾವೇರಿ ನದಿಯಲ್ಲಿ ‘ಪ್ರಿ ವೆಡ್ಡಿಂಗ್ ಫೊಟೊಶೂಟ್‌’ ವೇಳೆ ತೆಪ್ಪ ಮುಳುಗಿ ನವಜೋಡಿ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

ತೆಪ್ಪ ನಡೆಸುತ್ತಿದ್ದ ಕಟ್ಟೇಪುರದ ನಿವಾಸಿ ಮೂಗಪ್ಪ (50) ಎಂಬುವವರ ಮೇಲೆ ಪ್ರಕರಣ ದಾಖಲಿಸಿ, ಅವರ ಪತ್ತೆಗೆ ಹುಡುಕಾಟ ನಡೆಸಲಾಗುತ್ತಿದೆ. ಇನ್ನುಳಿದ ತೆಪ್ಪಗಳ ಮಾಲೀಕರು ಮತ್ತು ಅಂಬಿಗರೊಂದಿಗೆ ಸಭೆ ನಡೆಸಲು ನಿರ್ಧರಿಸಲಾಗಿದೆ.

ಈ ಕುರಿತು ‘ಪ್ರಜಾವಾಣಿ’ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆರ್.ಶಿವಕುಮಾರ್ ಅವರನ್ನು ಸಂಪರ್ಕಿ ಸಿದಾಗ ಅವರು, ‘ಇನ್ನು ಮುಂದೆ ಇಂತಹ ಘಟನೆ ನಡೆಯದಂತೆ ತಡೆಯಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಕುರಿತು ತೆಪ್ಪದ ಮಾಲೀಕರೊಂದಿಗೆ ಸಭೆ ನಡೆಸಲು ನಿರ್ಧರಿಸಲಾಗಿದೆ. ಎಲ್ಲರಿಗೂ ಇಂತಹ ಅಜಾಗರೂಕತೆಯ ತೆಪ್ಪ ಚಾಲನೆ, ಫೋಟೊ ತೆಗೆಸಿಕೊಳ್ಳುವುದುಮತ್ತಿತರ ಕೆಲಸಗಳಿಗೆ ಸಹಕರಿಸಬಾರದು. ಲೈಫ್‌ ಜಾಕೆಟ್ ಸೇರಿದಂತೆ ಅಗತ್ಯ ಇರುವ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಸೂಚಿಸಲಾಗುವುದು ಎಂದು ಹೇಳಿದರು.

ADVERTISEMENT

ಇಂತಹ ಕೃತ್ಯಗಳನ್ನು ತಡೆಯಲು ಎಲ್ಲ ಕ್ರಮ ಕೈಗೊಳ್ಳಬೇಕು ಎಂದು ನೀರಾವರಿ ಸೇರಿದಂತೆ ಇತರೆ ಇಲಾಖೆಗಳಿಗೆ ಪತ್ರ ಬರೆಯಲೂ ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.