ADVERTISEMENT

ಮೈಸೂರು-ಬೆಂಗಳೂರು ನಡುವೆ ಮತ್ತೆರಡು ಮೆಮು ರೈಲು

ಪುಷ್‌ಪುಲ್‌ ಬದಲಿಗೆ ಮತ್ತೆರೆಡು ಮೆಮು ರೈಲು; ಪ್ರಯಾಣ ದರ ₹30

ಡಿ.ಬಿ, ನಾಗರಾಜ
Published 26 ಆಗಸ್ಟ್ 2019, 2:59 IST
Last Updated 26 ಆಗಸ್ಟ್ 2019, 2:59 IST
ಮೈಸೂರು–ಬೆಂಗಳೂರು ನಡುವೆ ಸಂಚರಿಸುವ ಮೆಮು ರೈಲಿನ ಬೋಗಿಯೊಂದರ ಚಿತ್ರ
ಮೈಸೂರು–ಬೆಂಗಳೂರು ನಡುವೆ ಸಂಚರಿಸುವ ಮೆಮು ರೈಲಿನ ಬೋಗಿಯೊಂದರ ಚಿತ್ರ   

ಮೈಸೂರು: ಬೆಂಗಳೂರು–ಮೈಸೂರು ನಡುವೆ ನಿತ್ಯ ಬೆಳಿಗ್ಗೆ, ಮಧ್ಯಾಹ್ನ ಸಂಚರಿಸುತ್ತಿದ್ದ ಎರಡು ಪುಷ್‌ಪುಲ್‌ ರೈಲುಗಳನ್ನು ಸ್ಥಗಿತಗೊಳಿಸಿರುವ ನೈರುತ್ಯ ರೈಲ್ವೆ, ಇದೇ ಸಮಯದಲ್ಲಿ ಮೆಮು ರೈಲು ಸಂಚಾರ ಆರಂಭಿಸಿದ್ದು, ರೈಲ್ವೆ ಪ್ರಯಾಣಿಕರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ.

ಪುಷ್‌ಪುಲ್‌ ರೈಲುಗಳು ತಲಾ 16 ಬೋಗಿ ಹೊಂದಿದ್ದು, ಒಂದೊಂದು ಬೋಗಿಯೂ 108 ಆಸನ ಸಾಮರ್ಥ್ಯ ಹೊಂದಿದ್ದವು. ಏಕಕಾಲಕ್ಕೆ 1728 ಪ್ರಯಾಣಿಕರು ಮೈಸೂರು–ಬೆಂಗಳೂರು ನಡುವೆ ಕೂತು ಸಂಚರಿಸುತ್ತಿದ್ದರು. ಬೆಂಗಳೂರು ಸಮೀಪಿಸಿದಂತೆ ಮಂಡ್ಯ, ರಾಮನಗರ, ಚನ್ನಪಟ್ಟಣ ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಸಲಿಕ್ಕಾಗಿ ಈ ರೈಲಿಗೆ ಹತ್ತುವವರಿಗೆ, ನಿಲ್ಲಲು ಸ್ಥಳವೂ ಸಹ ಸಿಗುತ್ತಿರಲಿಲ್ಲ.

ಆ.5ರಿಂದಲೇ ಪುಷ್‌ಪುಲ್‌ ರೈಲುಗಳ ಸಂಚಾರ ಸ್ಥಗಿತಗೊಂಡಿದೆ. ಈ ರೈಲುಗಳು ಓಡಾಡುತ್ತಿದ್ದ ಆಸುಪಾಸಿನ ಅವಧಿಯಲ್ಲೇ ಎರಡೂ ಕಡೆ ಮೆಮು ರೈಲು ಸಂಚಾರ ಆರಂಭಿಸಲಾಗಿದೆ. ಇದರಿಂದ ನೂಕುನುಗ್ಗಲಿನ ಪ್ರಯಾಣಿಕರ ದಟ್ಟಣೆ ಕೊಂಚ ತಗ್ಗಿದ್ದು, ಇದೀಗ ಒಂದೊಂದು ರೈಲಿನಲ್ಲಿ 6000ಕ್ಕೂ ಹೆಚ್ಚು ಪ್ರಯಾಣಿಕರು ಏಕಕಾಲಕ್ಕೆ ಪ್ರಯಾಣಿಸುತ್ತಿದ್ದಾರೆ ಎಂದು ನೈರುತ್ಯ ರೈಲ್ವೆಯ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ADVERTISEMENT

‘ಪುಷ್‌ಪುಲ್‌ ರೈಲುಗಳ ಬದಲಿಗೆ ಮೆಮು ರೈಲು ಸಂಚಾರ ಆರಂಭವಾಗಿದೆ. ಒಂದೊಂದು ರೈಲು 16 ಕಾರುಗಳ ಬೋಗಿ ಒಳಗೊಂಡಿದೆ. ಒಂದೊಂದು ಬೋಗಿಯಲ್ಲಿ ಕನಿಷ್ಠ 350 ಪ್ರಯಾಣಿಕರು ಕೂತು–ನಿಂತು ಸಂಚರಿಸಬಹುದು. ಬೆಳಿಗ್ಗೆ 6.10ಕ್ಕೆ ಮೈಸೂರಿನಿಂದ ಹೊರಡುವ, ಸಂಜೆ 7.30ಕ್ಕೆ ಬೆಂಗಳೂರಿನಿಂದ ಇಲ್ಲಿಗೆ ಬರುವ ಮೆಮೊ ರೈಲು ಉದ್ಯೋಗಿಗಳಿಗೆ, ಕಾರ್ಮಿಕರಿಗೆ ವರದಾನವಾಗಿದೆ’ ಎಂದು ರೈಲ್ವೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಬೆಳಿಗ್ಗೆ 9.15ಕ್ಕೆ ಬೆಂಗಳೂರು ಬಿಡುವ, ಮಧ್ಯಾಹ್ನ 1.45ಕ್ಕೆ ಮೈಸೂರಿನಿಂದ ರಾಜಧಾನಿಗೆ ತೆರಳುವ ಮೆಮು ರೈಲು ಪ್ರಯಾಣಿಕ ಸ್ನೇಹಿಯಾಗಿದೆ. ಈಗಾಗಲೇ ವಾರದಲ್ಲಿ ಆರು ದಿನ ಸಂಚರಿಸುತ್ತಿರುವ ಮೆಮು ರೈಲು ಸಹ ಬೆಂಗಳೂರಿನಿಂದ ಕೆಲಸ ಮುಗಿಸಿಕೊಂಡು ಮೈಸೂರು ಕಡೆಗೆ ಬರುವವರಿಗೆ ಅನುಕೂಲಕಾರಿಯಾಗಿದೆ. ತಡರಾತ್ರಿಯೊಳಗೆ ಬೆಂಗಳೂರು ತಲುಪುವ ಮೈಸೂರಿಗರಿಗೂ ಇದು ಸಹಕಾರಿಯಾಗಿದೆ. ಈ ರೈಲುಗಳಲ್ಲಿ ಬೆಂಗಳೂರು–ಮೈಸೂರು ನಡುವಿನ ಪ್ರಯಾಣ ದರ ₹ 30 ಆಗಿದ್ದು, ಪ್ರಯಾಣಿಕ ಸ್ನೇಹಿಯಾಗಿವೆ’ ಎಂದು ಅವರು ಹೇಳಿದರು.

ಮೆಮೊ ರೈಲು ಸಂಚಾರದ ವೇಳಾಪಟ್ಟಿ

ರೈಲಿನ ಸಂಖ್ಯೆ;ಎಲ್ಲಿಂದ;ಎಲ್ಲಿಗೆ;ಬಿಡುವುದು;ತಲುಪುವುದು

66554;ಮೈಸೂರು;ಬೆಂಗಳೂರು;ಬೆ.6.10;ಬೆ.9.15

66553;ಬೆಂಗಳೂರು;ಮೈಸೂರು; ಸಂ.7.30;ರಾ.10.20

66552;ಮೈಸೂರು;ಬೆಂಗಳೂರು;ಮ.1.45;ಸಂ.5.00

66553;ಬೆಂಗಳೂರು;ಮೈಸೂರು; ಬೆ.9.20;ಮ.12.45

(ಭಾನುವಾರ ಹೊರತು ಪಡಿಸಿ)

06575;ಬೆಂಗಳೂರು;ಮೈಸೂರು; ಸಂ.5.20;ರಾ.8.20

06576;ಮೈಸೂರು;ಬೆಂಗಳೂರು;ರಾ.8.30;11.20

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.