ADVERTISEMENT

ಮಳೆಗಾಲಕ್ಕೆ ಸಜ್ಜಾಗದ ಮಹಾನಗರ ಪಾಲಿಕೆ

ಹದಗೆಟ್ಟ ರಸ್ತೆಗಳಲ್ಲಿ ಸಂಚಾರ ಬಲು ದುಸ್ತರ: ದೂರವೇ ಉಳಿದ ದುರಸ್ತಿ

ಪ್ರದೀಪ ಕುಂದಣಗಾರ
Published 2 ಆಗಸ್ಟ್ 2021, 2:45 IST
Last Updated 2 ಆಗಸ್ಟ್ 2021, 2:45 IST
ಟೆರಿಷಿಯನ್ ಕಾಲೇಜು ರಸ್ತೆಯಲ್ಲಿ ದೊಡ್ಡ ಗುಂಡಿ ಬಿದ್ದಿರುವುದು
ಟೆರಿಷಿಯನ್ ಕಾಲೇಜು ರಸ್ತೆಯಲ್ಲಿ ದೊಡ್ಡ ಗುಂಡಿ ಬಿದ್ದಿರುವುದು   

ಮೈಸೂರು: ನಗರದಲ್ಲಿ ಪ್ರಮುಖ ರಸ್ತೆಗಳು ವಿಶಾಲವಾಗಿವೆ. ಸ್ವಚ್ಛವಾಗಿವೆ. ಓಡಾಡಲು ಖುಷಿಯಾಗುತ್ತದೆ ಎಂಬುದು ಪ್ರವಾಸಿಗರ ಖುಷಿಯ ಮಾತು. ಆದರೆ, ಇತ್ತೀಚಿನ ವರ್ಷಗಳಲ್ಲಿ ನಗರದ ರಸ್ತೆಗಳು ಸಮರ್ಪಕವಾಗಿ ದುರಸ್ತಿ ಕಾಣದೆ ರಸ್ತೆಗಳು ಹಳ್ಳ, ಹೊಂಡಗಳೇ ಕಾಣುತ್ತಿವೆ. ವಾಹನ ಸಂಚಾರ ದುಸ್ತರವಾಗಿದೆ.

ಮಳೆಗಾಲ ಆರಂಭವಾಗಿದ್ದರೂ ರಸ್ತೆ ಗಳನ್ನು ದುರಸ್ತಿ ಮಾಡಲು ಮಹಾನಗರ ಪಾಲಿಕೆ ಗಮನಹರಿಸಿಲ್ಲ. ನಾಗರಿಕರ ಸಂಚಾರ ಸಮಸ್ಯೆ ಕೇಳುವವರಿಲ್ಲ ಎನ್ನುವಂತಾಗಿದೆ.

ಪ್ರಮುಖ ರಸ್ತೆ, ವೃತ್ತಗಳಲ್ಲೂ ದೊಡ್ಡ ದೊಡ್ಡ ಹೊಂಡಗಳು ಬಿದ್ದಿದ್ದು ಮಳೆ ಯಾದರೆ ನೀರು ತುಂಬುವುದರಿಂದ ರಸ್ತೆ– ಹಳ್ಳ ಎಂದು ತಿಳಿಯದೇ ಅಪಘಾತ ಗಳು ನಡೆಯುತ್ತಿವೆ. ಸಂತ್ರಸ್ತ ದ್ವಿಚಕ್ರ ವಾಹನ ಸವಾರರ ಸಮಸ್ಯೆಯೇ ಹೆಚ್ಚು.

ADVERTISEMENT

ರೈಲು ನಿಲ್ದಾಣದಿಂದ ನಂಜನ ಗೂಡು– ಊಟಿ ರಸ್ತೆವರೆಗೆ ಸುಮಾರು 5–6 ಕಿ.ಮೀ ಉದ್ದವಿರುವ ಜೆಎಲ್‌ಬಿ ರಸ್ತೆಯ ಆರಂಭದಿಂದ ಅಂತ್ಯದವರೆಗೂ ಬರೀ ಗುಂಡಿಗಳು, ಕೆಲಕಡೆ ದುರಸ್ತಿ ಮಾಡಿ ಡಾಂಬರು ಪ್ಯಾಚ್‌ಗಳು ರಸ್ತೆಗಿಂತ ಎತ್ತರವಾಗಿದ್ದು ಸಂಚಾರ ದುಸ್ತರವಾಗಿದೆ. ಸಿಕೆಸಿ ಸ್ಕೂಲ್‌ ಹಾಗೂ ಪೆಟ್ರೋಲ್‌ ಬಂಕ್ ಎದುರಿನ ರಸ್ತೆ ಎರಡು ವರ್ಷದಿಂದ ದುರಸ್ತಿ ಕಂಡಿಲ್ಲ.

ಸಿಲ್ಕ್ ಫ್ಯಾಕ್ಟರಿ ರಸ್ತೆಯಲ್ಲಿ ಕಲ್ಲು: ‘ಸಿಲ್ಕ್‌ ಫ್ಯಾಕ್ಟರಿ ರಸ್ತೆ’ ಎಂದೇ ಪ್ರಸಿದ್ಧವಾಗಿರುವ ಮಾನಂದವಾಡಿ – ಎಚ್‌.ಡಿ.ಕೋಟೆ ರಸ್ತೆಯೂ ಜೆಎಲ್‌ಬಿ ರಸ್ತೆಗೆ ಹೊಂದಿಕೊಂಡಿದ್ದು ಮಾನಂದವಾಡಿ ಸರ್ಕಲ್‌ಗೆ ಹತ್ತಿರದಲ್ಲಿದೆ. ಇಲ್ಲಿ ಚಿಕ್ಕ ಸೇತುವೆ ಇದ್ದು, ಅದರ ಬಳಿ ಹಳ್ಳ ಬಿದ್ದು, ಕಲ್ಲು– ಮಣ್ಣು ಕಾಣುತ್ತಿದೆ. ದ್ವಿಚಕ್ರ ವಾಹನಗಳು ವೇಗವಾಗಿ ಬಂದರೆ ಕಲ್ಲುಗಳು ಪಕ್ಕಕ್ಕೆ ಸಿಡಿಯುತ್ತವೆ. ಪಾದಚಾರಿಗಳಿಗೆ ಅಪಾಯವಾಗುವ ಸಾಧ್ಯತೆ ಹೆಚ್ಚಿದೆ.

ನಾಲ್ಕೇ ತಿಂಗಳಲ್ಲೇ ದುಸ್ಥಿತಿ: ವಿದ್ಯಾರಣ್ಯ ಪುರಂನಿಂದ ಅಕ್ಕಮಹಾದೇವಿ ರಸ್ತೆವರೆಗೂ ದುರಸ್ತಿ ಮಾಡಿ ನಾಲ್ಕು ತಿಂಗಳು ಕಳೆದಿಲ್ಲ. ಫುಟ್‌ಪಾತ್‌ ಕಾಮಗಾರಿ ಇನ್ನೂ ನಡೆದಿದೆ. ಅಷ್ಟರಲ್ಲೇ ನೀರಿನ ಪೈಪ್‌ಲೈನ್, ಕೇಬಲ್ ಅಳವಡಿಕೆಗಾಗಿ ಅಲ್ಲಲ್ಲಿ ರಸ್ತೆಯನ್ನು ಅಗೆಯಲಾಗಿದೆ. ಕಟ್ಟಡ ಕಟ್ಟುವವರು ಸಿಮೆಂಟ್ ಮರಳು, ಜಲ್ಲಿ ಕಲ್ಲನ್ನು ರಸ್ತೆಗೆ ಹಾಕಿದ್ದಾರೆ. ಫುಟ್‌ಪಾತ್ ಕಾಮಗಾರಿಗೆ ಹಾಕಿದ ಸಾಮಗ್ರಿಗಳು ಎಲ್ಲೆಡೆ ಹರಡಿವೆ. ರಸ್ತೆ ದೊಡ್ಡದಾಗಿದ್ದರೂ ಸಂಚಾರ ಸುರಕ್ಷಿತವಾಗಿಲ್ಲ ಎಂದು ಹಲವು ನಾಗರಿಕರು ದೂರಿದ್ದಾರೆ.

ನೀರಿನ ಪೈಪ್‌ಲೈನ್ ಹಾಗೂ ಕೇಬಲ್‌ ಅಳವಡಿಕೆಗೆ ರಸ್ತೆ ಅಗೆದು ಮುಚ್ಚುವಾಗ ಸರಿಯಾಗಿ ಮಣ್ಣು ಹಾಕದೆ ಕೆಲಕಡೆ ಹೊಂಡ, ಕೆಲಕಡೆ ದಿನ್ನೆ ಆಗಿದ್ದು, ವಾಹನ ಸವಾರರು ದಿನ್ನೆ ತಪ್ಪಿಸಲು ಹೋಗಿ ಅಪಘಾತಗಳಾಗುತ್ತಿವೆ.

ಹಾಳಾದ ಮೈಮುಲ್‌ ರಸ್ತೆ

ನಗರದ ಪ್ರಮುಖ ಬಡಾವಣೆಗಳಲ್ಲಿ ಸಿದ್ಧಾರ್ಥ ಬಡಾವಣೆಯೂ ಒಂದು. ಇಲ್ಲಿನ ರಸ್ತೆಗಳಲ್ಲಿ ಹಳ್ಳ ಮತ್ತು ಹೊಂಡಗಳಿವೆ. ವರ್ಷಗಳು ಕಳೆದರೂ ಈ ವಾರ್ಡ್‌ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಿ ಗಮನಹರಿಸಿಲ್ಲ. ನಜರಬಾದ್‌ನಿಂದ ಸಿದ್ಧಾರ್ಥನಗರ ಸೇರುವ ಮೈಮುಲ್‌ ರಸ್ತೆ ಕೂಡಾ ಹಾಳಾಗಿದೆ.

ಬಾವಿಯಾದ ಟೆರೆಷಿಯನ್‌ ವೃತ್ತ

ಸಿದ್ಧಾರ್ಥ ಲೇಔಟ್‌ ಸಮೀಪದ ಟೆರೆಷಿಯನ್ ಕಾಲೇಜು ವೃತ್ತದಲ್ಲಿ ದೊಡ್ಡ ಹೊಂಡವೇ ಬಿದ್ದಿದ್ದು ಬಾವಿಯಂತೆ ಕಾಣುತ್ತಿದೆ. ಒಮ್ಮೆ ಮಳೆಯಾದರೆ ಇಲ್ಲಿ ನಿಂತ ನೀರು ವಾರಗಟ್ಟಲೇ ಹಾಗೆ ಇರುತ್ತದೆ. ನಿತ್ಯ ಇಲ್ಲಿ ಸಾವಿರಾರು ವಾಹನಗಳು ಸಂಚರಿಸುತ್ತವೆ. ಸವಾರರು ಹೊಂಡ ತಪ್ಪಿಸುವ ಸಲುವಾಗಿ ಮತ್ತೊಂದು ಬದಿಗೆ ಬಂದಾಗ ವಾಹನಗಳು ಡಿಕ್ಕಿ ಆಗಿ ವಾಗ್ವಾದ ಗಲಾಟೆಗಳೂ ನಡೆಯುತ್ತವೆ.

ಬಸ್, ಲಾರಿ ಈ ರಸ್ತೆಯಲ್ಲಿ ಸಾಗುತ್ತಿದ್ದರೆ, ಚಿಕ್ಕ ವಾಹನಗಳು ಪಕ್ಕಕ್ಕೆ ಸರಿಯಬೇಕು ಅಥವಾ ನಿಲ್ಲಿಸಬೇಕು. ಇಲ್ಲದಿದ್ದರೆ ಸಮಸ್ಯೆ ತಪ್ಪಿದ್ದಲ್ಲ. ದೊಡ್ಡ ವಾಹನಗಳ ಚಕ್ರಗಳು ಹೊಂಡದಲ್ಲಿ ಇಳಿದರೆ ಮೇಲೆ ಬರುವುದು ಕಷ್ಟ.

ಶ್ರೀನಗರ ರಸ್ತೆಯಲ್ಲಿ ದೂಳು, ರಾಡಿ

ಜೆ.ಪಿ. ನಗರ ಎರಡನೇ ಹಂತದ ಮುಖ್ಯ ರಸ್ತೆಯಾಗಿರುವ ಶ್ರೀನಗರ– ನಂಜನಗೂಡು ರಸ್ತೆಯೂ ಅಧ್ವಾನವಾಗಿದೆ. ಅಶೋಕಪುರಂ ರೈಲ್ವೆ ಸ್ಟೇಷನ್ ಗೇಟ್‌ ಪಕ್ಕದಲ್ಲಿ ಹಾದು ಹೋಗಿರುವ ರಸ್ತೆಯ ಸುಮಾರು ಒಂದು ಕಿ.ಮೀ ರಸ್ತೆ ಮಣ್ಣು– ಕಲ್ಲುಗಳಿಂದ ಕೂಡಿದ್ದು, ಬಿಸಿಲು ಬಿದ್ದರೆ ಬರೀ ದೂಳು, ಮಳೆಯಾದರೆ ಕೆಸರು ಗದ್ದೆಯಂತಾಗಿರುತ್ತದೆ.

‌‘ಶ್ರೀನಗರ– ನಂಜನಗೂಡು ರಸ್ತೆಯಲ್ಲಿ ವ್ಯಾಪಾರ, ಬದುಕು ಕಷ್ಟವಾಗಿದೆ. ಬೆಳಿಗ್ಗೆ ತಂದ ತರಕಾರಿ 10 ಗಂಟೆಯಾದರೆ ದೂಳಿನಿಂದ ಬಾಡುತ್ತದೆ. ತರಕಾರಿಯನ್ನು ಸದಾ ಮುಚ್ಚಿಟ್ಟೇ ವ್ಯಾಪಾರ ಮಾಡಬೇಕು. ಗ್ರಾಹಕರು ಬಂದಾಗ ಹೊದಿಗೆ ತೆಗೆದು ತೋರಿಸಬೇಕು’ ಎಂದು ವ್ಯಾಪಾರಿ ಬೀರೇಶ್‌ ವಿಷಾದಿಸಿದರು.

ದಂಡ ಹಾಕಲು ಸಿದ್ಧತೆ

ನಗರದ ಬಹುತೇಕ ರಸ್ತೆಗಳು ಹಾಳಾಗಿವೆ ಎಂಬುದು ವಾರ್ಡ್‌ ಸಮೀಕ್ಷೆಯಲ್ಲಿ ಗೊತ್ತಾಗಿದೆ. ಯುಜಿಡಿ, ಕೇಬಲ್‌ ಹಾಗೂ ಕುಡಿಯುವ ನೀರಿನ ಪೈಪ್‌ಲೈನ್‌ ಕಾರ್ಯಕ್ಕಾಗಿ ಅಗೆಯಲಾಗಿದೆ. ಪ್ರಮುಖ ವೃತ್ತ ಹಾಗೂ ರಸ್ತೆಗಳು ಅಲ್ಲಲ್ಲಿ ಹಾಳಾಗಿವೆ. ರಸ್ತೆ ಅಗೆದು ಸರಿಯಾಗಿ ಮುಚ್ಚದ ಹಾಗೂ ಹಾಳಾಗಲು ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ದಂಡಶುಲ್ಕ ವಿಧಿಸಲಾಗುವುದು. ಭದ್ರತಾ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು

–ಲಕ್ಷ್ಮಿಕಾಂತ್‌ ರೆಡ್ಡಿ, ಮಹಾನಗರ ಪಾಲಿಕೆ ಆಯುಕ್ತ

‘ರಸ್ತೆ ದುರಸ್ತಿ ಅತ್ಯಗತ್ಯ’

ಅಭಿವೃದ್ಧಿ ಕೆಲಸಗಳು ನಿಂತು ಹೋಗಿವೆ. ರಸ್ತೆ ದುರಸ್ತಿ ಹಾಗೂ ಮೂಲ ಸೌಲಭ್ಯ ಕಲ್ಪಿಸುವತ್ತ ಪಾಲಿಕೆ ಗಮನ ಹರಿಸಬೇಕು. 3ರಂದು ಪಾಲಿಕೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ, 14, 15ನೇ ಹಣಕಾಸು ಯೋಜನೆಯಲ್ಲಿ ಉಳಿದ ಬಜೆಟ್‌ನಲ್ಲಿ ವಾರ್ಡ್‌ವಾರು ಹಂಚಿಕೆ ಮಾಡಲು ತೀರ್ಮಾನಿಸಿ ಪ್ರಮುಖವಾಗಿ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು’

–ಅನ್ವರ್‌ ಬೇಗ್, ಹಂಗಾಮಿ ಮೇಯರ್‌

ನಾಗರಿಕರು ಏನಂತಾರೆ?

ದುರಸ್ತಿ ನೆಪ; ಸಾರ್ವಜನಿಕರ ತೆರಿಗೆ ಹಣ ಪೋಲು

ನಗರದಲ್ಲಿ ರಸ್ತೆ ನವೀಕರಣವಾಗುತ್ತದೆ ಎಂದು ಖುಷಿಪಡುವಂತಿಲ್ಲ, ಜೆ.ಪಿ.ನಗರ ಅಕ್ಕಮಹಾದೇವಿ ರಸ್ತೆ. ದುರಸ್ತಿ ಮಾಡಿದ ಕೆಲವೇ ತಿಂಗಳಲ್ಲಿ ಕೇಬಲ್ ಹಾಕಿ, ವಾಟರ್‌ ಸಪ್ಲೈಗೆ ಪೈಪ್‌ಲೈನ್ ಹಾಕಲು ಅಗೆದಿದ್ದಾರೆ. ಸಾರ್ವಜನಿಕರ ತೆರಿಗೆ ಹಣ ಪೋಲಾಗುತ್ತಿದೆ. ದುರಸ್ತಿ ಮಾಡುವ ಮೊದಲು ರಸ್ತೆ ಅಗೆದು ನಿರ್ವಹಿಸಬೇಕು. ಚೆನ್ನಾಗಿ ಡಾಂಬರು ಹಾಕಿದರೆ ರಸ್ತೆ ಬಾಳಿಕೆ ಬರುವುದು.

ಸಿ.ಆರ್‌.ರಾಘವೇಂದ್ರಪ್ರಸಾದ್, ಪ್ರಸಾದ್ ಸ್ಕೂಲ್ ಆಫ್ ರಿದಮ್ಸ್‌ ತಾಳವಾದ್ಯ ಪ್ರತಿಷ್ಠಾನದ ಮಾಲೀಕ

ಶ್ರೀನಗರ – ನಂಜನಗೂಡು ರಸ್ತೆಯಲ್ಲಿ ನಿತ್ಯ ಗೋಳು ತಪ್ಪುತ್ತಿಲ್ಲ. ನಿತ್ಯ 4–5 ಸಾವಿರ ವಾಹನಗಳು ಸಂಚರಿಸುತ್ತಿವೆ. ಡಾಂಬರು ಹಾಕುತ್ತಿಲ್ಲ. ಬರೀ ದೂಳು ವ್ಯಾಪಾರ ಇಲ್ಲದಾಗ ಹೊರಗಡೆ ನಿಲ್ಲಲು ಕೂಡಾ ಆಗುವುದಿಲ್ಲ. ಮಳೆಯಾದರೆ ರಾಡಿಯಲ್ಲಿ ನಡೆಯಲೂ ಆಗದು. ಅಪಘಾತಗಳು ಆಗುತ್ತಿವೆ.

ನಮೃತಾ ಅರಸ್, ವ್ಯಾಪಾರಿ

ಮುಖ್ಯರಸ್ತೆಗಳಲ್ಲಿ ಗುಂಡಿ ಬಿದ್ದಿರುವುದು ಮತ್ತು ಮ್ಯಾನ್‌ಹೋಲ್‌ ಕೆಲವೆಡೆ ಓಪನ್‌ ಆಗಿವೆ. ವಾಹನಗಳನ್ನು ಹಿಂದಿಕ್ಕುವಾಗ ಗುಂಡಿ ತಪ್ಪಿಸಲು ಹೋಗಿ ಅಪಘಾತವಾಗುತ್ತದೆ.

ಸುಂದರೇಶ್, ಆಟೊ ಚಾಲಕ

ಎಲ್ಲರಿಗೂ ತೊಂದರೆ

ತಿಲಕನಗರದ ದೂಧ್ ಮಕಾನ್ ಸರ್ಕಲ್‌ ಗಣಪತಿ ದೇವಸ್ಥಾನದ ಬಳಿ ಕುಡಿಯುವ ನೀರಿನ ಪೈಪ್‌ಲೈನ್ ಒಡೆದು ಹಲವು ತಿಂಗಳಾದವು. ಸುತ್ತ ಬ್ಯಾರಿಕೇಡ್ ಇಟ್ಟಿದ್ದಾರೆ. ಗಲೀಜು ನೀರು ಪೈಪ್‌ಗೆ ವಾಪಸ್‌ ಹೋಗುತ್ತದೆ. ರಸ್ತೆಯೂ ಹಾಳಾಗಿದೆ. ಇರುವ ಚಿಕ್ಕ ರಸ್ತೆಯಲ್ಲಿ ವಾಹನಗಳು ಓಡಾಟ ಕಷ್ಟ. ರಾತ್ರಿ ಬೀದಿ– ದೀಪವೂ ಇರದೆ ಅಪಘಾತಗಳಾಗುತ್ತಿವೆ.

ಸುಲ್ತಾನ್‌, ಜ್ಯೂಸ್ ವ್ಯಾಪಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.