ADVERTISEMENT

‘ಜನರ ಹಕ್ಕು ಹಿಂಪಡೆಯಲು ಸಾಧ್ಯವಿಲ್ಲ’

ಪ್ರೊ.ವಿ.ಕೆ.ನಟರಾಜ್‌ ಸ್ಮರಣಾರ್ಥ ಪುಸ್ತಕ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2025, 5:11 IST
Last Updated 21 ಡಿಸೆಂಬರ್ 2025, 5:11 IST
ಮೈಸೂರು ವಿಶ್ವವಿದ್ಯಾಲಯದ ಡಾ.ಬಿ.ಆರ್‌.ಅಂಬೇಡ್ಕರ್‌ ಸಂಶೋಧನ ಹಾಗೂ ವಿಸ್ತರಣ ಕೇಂದ್ರ ಹಾಗೂ ಅರ್ಥಶಾಸ್ತ್ರ ಮತ್ತು ಸಹಕಾರ ಅಧ್ಯಯನ ವಿಭಾಗವು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರೊ.ಎನ್‌.ಕೆ.ಲೋಕನಾಥ್‌ ಅವರು ಪ್ರೊ.ವಿ.ಕೆ.ನಟರಾಜ್‌ ಸ್ಮರಣಾರ್ಥ ‘ಕಂಟೆಂಪರರಿ ಡೆವೆಲಪ್ಮೆಂಟ್‌ ಇನ್‌ ಡಿಬೇಟ್ಸ್‌ ಇನ್‌ ಇಂಡಿಯಾ’ ಕೃತಿ ಬಿಡುಗಡೆ ಮಾಡಿದರು ಪ್ರಜಾವಾಣಿ ಚಿತ್ರ
ಮೈಸೂರು ವಿಶ್ವವಿದ್ಯಾಲಯದ ಡಾ.ಬಿ.ಆರ್‌.ಅಂಬೇಡ್ಕರ್‌ ಸಂಶೋಧನ ಹಾಗೂ ವಿಸ್ತರಣ ಕೇಂದ್ರ ಹಾಗೂ ಅರ್ಥಶಾಸ್ತ್ರ ಮತ್ತು ಸಹಕಾರ ಅಧ್ಯಯನ ವಿಭಾಗವು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರೊ.ಎನ್‌.ಕೆ.ಲೋಕನಾಥ್‌ ಅವರು ಪ್ರೊ.ವಿ.ಕೆ.ನಟರಾಜ್‌ ಸ್ಮರಣಾರ್ಥ ‘ಕಂಟೆಂಪರರಿ ಡೆವೆಲಪ್ಮೆಂಟ್‌ ಇನ್‌ ಡಿಬೇಟ್ಸ್‌ ಇನ್‌ ಇಂಡಿಯಾ’ ಕೃತಿ ಬಿಡುಗಡೆ ಮಾಡಿದರು ಪ್ರಜಾವಾಣಿ ಚಿತ್ರ   

ಮೈಸೂರು: ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂಜಿಎನ್‌ಆರ್‌ಇಜಿಎ)ಯನ್ನು ಸಂಸತ್ತಿನಲ್ಲಿ ಸರಳ ಬಹುಮತದಿಂದ ರದ್ದುಗೊಳಿಸಿರುವುದು ಆಘಾತಕಾರಿ. ಸರ್ಕಾರಗಳು ಜನರ ಹಕ್ಕುಗಳನ್ನು ಹಿಂಪಡೆಯಲು ಸಾಧ್ಯವಿಲ್ಲ’ ಎಂದು ನವದೆಹಲಿಯ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರಭಾತ್‌ ಪಟ್ನಾಯಕ್‌ ಹೇಳಿದರು.

ಇಲ್ಲಿನ ಮೈಸೂರು ವಿಶ್ವವಿದ್ಯಾಲಯದ ಡಾ.ಬಿ.ಆರ್‌.ಅಂಬೇಡ್ಕರ್‌ ಸಂಶೋಧನ ಹಾಗೂ ವಿಸ್ತರಣ ಕೇಂದ್ರ ಹಾಗೂ ಅರ್ಥಶಾಸ್ತ್ರ ಮತ್ತು ಸಹಕಾರ ಅಧ್ಯಯನ ವಿಭಾಗವು ಶನಿವಾರ ಆಯೋಜಿಸಿದ್ದ ಪ್ರೊ.ವಿ.ಕೆ.ನಟರಾಜ್‌ ಸ್ಮರಣಾರ್ಥ ‘ಕಂಟೆಂಪರರಿ ಡೆವೆಲಪ್ಮೆಂಟ್‌ ಇನ್‌ ಡಿಬೇಟ್ಸ್‌ ಇನ್‌ ಇಂಡಿಯಾ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ‘ಸಾಂವಿಧಾನಿಕವಾಗಿ ಖಾತರಿಪಡಿಸಿದ ಮೂಲಭೂತ ಆರ್ಥಿಕ ಹಕ್ಕಿನ ಕಡೆಗೆ’ ಕುರಿತು ಉಪನ್ಯಾಸ ನೀಡಿದರು.

‘ಎಂಜಿಎನ್‌ಆರ್‌ಇಜಿಎ ಜನರ ಬೇಡಿಕೆ ಆಧರಿಸಿ, ರಾಷ್ಟ್ರದ ಒಮ್ಮತದಿಂದ ಪರಿಚಯಿಸಲಾದ ಹಕ್ಕು ಆಧಾರಿತ ಯೋಜನೆ. ಎಲ್ಲಾ ರಾಜಕೀಯ ಪಕ್ಷಗಳ ಒಪ್ಪಂದದೊಂದಿಗೆ ಸಂಸತ್ತಿನಲ್ಲಿ ಸರ್ವಾನುಮತದ ನಿರ್ಣಯದ ನಂತರ ಇದನ್ನು ಜಾರಿಗೆ ತರಲಾಗಿತ್ತು. ಅಂತಹ ಕಾನೂನನ್ನು ನಂತರ ಸರಳ ಬಹುಮತದಿಂದ ರದ್ದುಗೊಳಿಸಬಹುದು ಎಂಬುದು ದೇಶದಲ್ಲಿ ಹಕ್ಕು ಆಧಾರಿತ ಕಾರ್ಯಕ್ರಮಗಳನ್ನು ಸ್ಥಾಪಿಸುವಲ್ಲಿ ಇರುವ ಮೂಲಭೂತ ಸಮಸ್ಯೆಯನ್ನು ಸೂಚಿಸುತ್ತದೆ’ ಎಂದು ಪ್ರತಿಪಾದಿಸಿದರು.

ADVERTISEMENT

ಆರ್ಥಿಕ ಅಸಮಾನತೆ:

‘ದೇಶದಲ್ಲಿ ಆರ್ಥಿಕ ಅಸಮಾನತೆ ಹೆಚ್ಚಿದ್ದು, ಪ್ರಜಾಪ್ರಭುತ್ವದ ಆಶಯ ಉಳಿಸಿಕೊಂಡು ಸಮಾನತೆ ಸಾಧಿಸಬೇಕಾದ ಸವಾಲಿದೆ. ಯುಎನ್‌ಒ ಸಂಸ್ಥೆಯು ಭಾರತ ದೇಶದಲ್ಲಿ ಬಡತನ ಕಡಿಮೆಯಾಗಿದೆ ಎಂದು ವ್ಯಾಖ್ಯಾನಿಸಿದೆ. ಭಾರತದ ಯೋಜನಾ ಆಯೋಗವು ಪೌಷ್ಟಿಕಾಂಶವನ್ನು ಮಾನದಂಡವಾಗಿರಿಸಿ ಬಡತನದ ಬಗ್ಗೆ ಅಂಕಿ– ಅಂಶ ನೀಡುತ್ತಿತ್ತು. ಅದನ್ನು ಪಾಲಿಸಿದರೆ ವಾಸ್ತವದಲ್ಲಿ ಗ್ರಾಮೀಣ ಭಾಗದಲ್ಲಿ ಈಗಲೂ ಶೇ 80ರಷ್ಟು ಬಡತನವಿದೆ’ ಎಂದರು.

‘ವಿದೇಶದಲ್ಲಿ ಸ್ವಯಂಸೇವಾ ಸಂಸ್ಥೆಗಳ ಸಂಪತ್ತಿಗೆ ಹಾಗೂ ಪಿತ್ರಾರ್ಜಿತ ತೆರಿಗೆ ಇವೆ, ಅವನ್ನು ಭಾರತದಲ್ಲೂ ಜಾರಿಗೆ ತರಬಹುದು. ಆಹಾರ, ಉದ್ಯೋಗ, ಆರೋಗ್ಯ ಸೇವೆ, ಉಚಿತ ಸಾರ್ವಜನಿಕ ಶಿಕ್ಷಣ, ಹಿರಿಯ ನಾಗರಿಕರಿಗೆ ಕನಿಷ್ಠ ₹3ಸಾವಿರ ಪಿಂಚಣಿ ನೀಡುವ ವ್ಯವಸ್ಥೆಯಿದ್ದರೆ ದೇಶವು ಆರ್ಥಿಕ ಸಮಾನತೆ ಸಾಧಿಸುತ್ತದೆ’ ಎಂದು ಪ್ರತಿಪಾದಿಸಿದರು. 

ಮೈಸೂರು ವಿ.ವಿಯ ಕುಲಪತಿ ಪ್ರೊ.ಎನ್‌.ಕೆ.ಲೋಕನಾಥ್‌, ಮಹಿಳಾ ಅಧ್ಯಯನ ಕೇಂದ್ರದ ನಿವೃತ್ತ ನಿರ್ದೇಶಕಿ ರಾಮೇಶ್ವರಿ ವರ್ಮ, ಪ್ರೊ.ಕೆ.ನಾಗರಾಜ್‌, ಡಾ.ಬಿ.ಆರ್‌.ಅಂಬೇಡ್ಕರ್‌ ಸಂಶೋಧನ ಹಾಗೂ ವಿಸ್ತರಣ ಕೇಂದ್ರದ ನಿರ್ದೇಶಕ ಪ್ರೊ.ಎಸ್‌.ನರೇಂದ್ರ ಕುಮಾರ್‌, ಪ್ರೊ.ಆರ್‌.ಇಂದಿರಾ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.