
ಮೈಸೂರು: ವಿಜಯನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿನ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಸೌಲಭ್ಯಕ್ಕೆ ಶಾಸಕ ಜಿ.ಟಿ.ದೇವೇಗೌಡ ಸೋಮವಾರ ಚಾಲನೆ ನೀಡಿದರು.
ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಕಾಲೇಜಿಗೆ ಬರುತ್ತಿದ್ದು, ಯಾರೊಬ್ಬರೂ ಹಸಿವಿನಿಂದ ಇರಬಾರದೆಂದು ಶಾಸಕರು ಮತ್ತು ಅವರ ಸ್ನೇಹಿತರೊಂದಿಗೆ ಆರಂಭಿಸಿದ ಬಿಸಿಯೂಟ ಸೇವೆಗೆ ವಿದ್ಯಾರ್ಥಿನಿಯರು ಸಂತಸಗೊಂಡರು.
ಜಿ.ಟಿ.ದೇವೇಗೌಡ ಮಾತನಾಡಿ, ‘ವಿದ್ಯಾರ್ಥಿಗಳು ಮಧ್ಯಾಹ್ನದ ಊಟಕ್ಕೆ ದೂರಕ್ಕೆ ಹೋಗಬೇಕಾಗಿತ್ತು. ಊಟದ ವ್ಯವಸ್ಥೆ ಮಾಡಬೇಕೆಂದುಕೊಂಡಾಗ ಇಸ್ಕಾನ್ ಅಕ್ಷಯಪಾತ್ರ ಪ್ರತಿಷ್ಠಾನವು ಸಹಕಾರ ನೀಡಿತು. ಸ್ನೇಹಿತರೊಂದಿಗೆ ಈ ವೆಚ್ಚವನ್ನು ನಾನು ಭರಿಸುವೆ’ ಎಂದರು.
ಇಸ್ಕಾನ್ ಮೈಸೂರು ಅಧ್ಯಕ್ಷ ಕೃಷ್ಣಸ್ವಾಮಿ ಮಹಾರಾಜ್ ಮಾತನಾಡಿ, ‘ಇಸ್ಕಾನ್‌ನ ಕಾರ್ಯಗಳಿಗೆ ಶಾಸಕರು ಬೆಂಬಲವಾಗಿದ್ದಾರೆ. ಕಾಲೇಜು ಮಕ್ಕಳಿಗೆ ಬಿಸಿಯೂಟ ಯೋಜನೆಯಿಲ್ಲ. ಹೀಗಾಗಿ, ಜಿ.ಟಿ.ದೇವೇಗೌಡ ಅವರಿಗೆ ಪ್ರತಿಷ್ಠಾನವು ಕೈಜೋಡಿಸಿದೆ’ ಎಂದರು.
ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕಿ ಪ್ರೊ.ಡಿ.ಎಸ್.ಪ್ರತಿಮಾ, ಹೂಟಗಳ್ಳಿ ನಗರಸಭೆ ಆಯುಕ್ತ ಬಿ.ಎನ್.ಚಂದ್ರಶೇಖರ್, ಇಸ್ಕಾನ್‌ನ ಕೃಷ್ಣ ಕೇಶವದಾಸ್, ಮೈಸೂರು ವಿ.ವಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್, ಮುಖಂಡರಾದ ಎಚ್.ಎನ್.ವಿಜಯ್, ಮಹೇಶ್ ಶೆಣೈ, ಕಾಂತರಾಜು, ಶ್ರೀಕಾಂತ್, ವೀರೇಶ್, ಮಂಚೇಗೌಡ, ಮರಟಿಕ್ಯಾತನಹಳ್ಳಿ ವೆಂಕಟೇಶ್, ನಂಜುಂಡೇಗೌಡ, ನೇತ್ರಾ, ಕಾಲೇಜು ಪ್ರಾಂಶುಪಾಲ ಕೆ.ಸಿ.ಭದ್ರಗಿರಿಯಯ್ಯ, ಎಸ್.ಆನಂದಕುಮಾರ್ ಪಾಲ್ಗೊಂಡಿದ್ದರು.