ADVERTISEMENT

ಮೈಸೂರು, ಹಾಸನದ ಹಲವೆಡೆ ಲಘು ಭೂಕಂಪ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2020, 14:18 IST
Last Updated 3 ಏಪ್ರಿಲ್ 2020, 14:18 IST
ಭೂಮಿ ಕಂಪಿಸಿದ ಅನುಭವದ ನಂತರ ಹುಣಸೂರು ತಾಲ್ಲೂಕಿನ ಹಿರಿಕ್ಯಾತನಹಳ್ಳಿ ಗ್ರಾಮಸ್ಥರು ಮನೆಯಿಂದ ಹೊರ ಬಂದರು
ಭೂಮಿ ಕಂಪಿಸಿದ ಅನುಭವದ ನಂತರ ಹುಣಸೂರು ತಾಲ್ಲೂಕಿನ ಹಿರಿಕ್ಯಾತನಹಳ್ಳಿ ಗ್ರಾಮಸ್ಥರು ಮನೆಯಿಂದ ಹೊರ ಬಂದರು   

ಮೈಸೂರು/ಹಾಸನ: ಜಿಲ್ಲೆಯ ಕೆ.ಆರ್.ನಗರ, ಪಿರಿಯಾಪಟ್ಟಣ, ಹುಣಸೂರು ಹಾಗೂ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಹಲವೆಡೆ ಶುಕ್ರವಾರ ಸಂಜೆ ಭೂಮಿ ಲಘುವಾಗಿ ಕಂಪಿಸಿದೆ. ಕಂಪನದ ತೀವ್ರತೆ ರಿಕ್ಟರ್‌ ಮಾಪಕದಲ್ಲಿ 2.6 ದಾಖಲಾಗಿದೆ.

ಸಂಜೆ 5.18ರ ಸುಮಾರಿನಲ್ಲಿ ಭಾರಿ ಶಬ್ದದೊಂದಿಗೆ ಹಲವು ಸೆಕೆಂಡ್‌ಗಳ ಕಾಲ ಭೂಮಿ ಕಂಪಿಸಿದ ಅನುಭವ ಜನರಿಗಾಯಿತು. ಕೂಡಲೇ ಜನರು ಮನೆಗಳಿಂದ ಹೊರಗೋಡಿ ಬಂದರು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕರ್ನಾಟಕ ರಾಜ್ಯ ನೈಸರ್ಗಿಕ ಪ್ರಕೋಪ ಉಸ್ತುವಾರಿ ಕೇಂದ್ರದ ಹಿರಿಯ ವೈಜ್ಞಾನಿಕ ಅಧಿಕಾರಿ ಡಾ.ಸಿ.ಎನ್.ಪ್ರಭು, ‘ನಮ್ಮ ತುಂಗಾಭದ್ರಾ, ಕೆಆರ್‌ಎಸ್‌ ಹಾಗೂ ಹಾರಂಗಿ ಜಲಾಶಯದ ಬಳಿ ಅಳವಡಿಸಲಾದ ರಿಕ್ಟರ್ ಮಾಪನ ಕೇಂದ್ರಗಳ ವರದಿಗಳ ಆಧಾರದ ಮೇಲೆ ಭೂಕಂಪದ ಕೇಂದ್ರಬಿಂದು ಅರಕಲಗೂಡು–ಕೆ.ಆರ್.ನಗರ ಗಡಿಯಲ್ಲಿರುವುದು ಖಚಿತಪಟ್ಟಿದೆ. 2.6 ತೀವ್ರತೆಯ ಲಘು ಕಂಪನ ಇದಾಗಿದ್ದು, ಇದರಿಂದ ಯಾವುದೇ ತೊಂದರೆ ಉಂಟಾಗದು. ಜನರು ಆತಂಕಗೊಳ್ಳುವ ಅವಶ್ಯಕತೆ ಇಲ್ಲ. ಈ ಕಂಪನ ಏಕೆ ಉಂಟಾಯಿತು ಎಂಬ ವಿಶ್ಲೇಷಣೆ ನಡೆಸಲಾಗುತ್ತಿದೆ’ ಎಂದು ತಿಳಿಸಿದ್ದಾರೆ.

ADVERTISEMENT

ಕೇಂದ್ರ ಸರ್ಕಾರದ ನ್ಯಾಷನಲ್ ಸೆಂಟರ್ ಫಾರ್ ಸೆಸ್ಮೊಲಜಿ ವಿಭಾಗವು, ತನ್ನ ಊಟಿ ರಿಕ್ಟರ್‌‍ ಮಾಪಕದನ್ವಯ 3.2 ತೀವ್ರತೆಯ ಕಂಪನ ಸಂಭವಿಸಿದ್ದಾಗಿ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.