ADVERTISEMENT

ಕನಿಷ್ಠ ವೇತನ ಹೆಚ್ಚಳ: ಎಐಟಿಯುಸಿ ಸ್ವಾಗತ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2025, 15:50 IST
Last Updated 13 ಏಪ್ರಿಲ್ 2025, 15:50 IST

ಮೈಸೂರು: ‘ರಾಜ್ಯ ಸರ್ಕಾರವು ಅನುಸೂಚಿತ ಉದ್ದಿಮೆಗಳಡಿ ಬರುವ ವಿವಿಧ ವಲಯವಾರು ಹಾಗೂ ಕುಶಲ ಕಾರ್ಮಿಕರಿಗೆ ನೀಡಬೇಕಿರುವ ದಿನದ ಮತ್ತು ತಿಂಗಳ ಕನಿಷ್ಠ ವೇತನ ಹೆಚ್ಚಿಸಿರುವುದು ಹಾಗೂ ಬೇಡಿಕೆಯಂತೆ ಮೂರು ವಲಯಗಳನ್ನು ರಚಿಸಿ ಅಧಿಸೂಚನೆ ಪ್ರಕಟಿಸಿರುವುದು ಸ್ವಾಗತಾರ್ಹ’ ಎಂದು ಎಐಯುಟಿಯುಸಿ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಚಂದ್ರಶೇಖರ ಮೇಟಿ ತಿಳಿಸಿದ್ದಾರೆ.

ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ‘ರಾಜ್ಯದ ಕಾರ್ಮಿಕರು ಮತ್ತು ನೌಕರರು ಮತ್ತಿತರ ದುಡಿಯುವ ಜನರು ಕಡು ಕಷ್ಟದಲ್ಲಿ ಜೀವನ ನಡೆಸುತ್ತಿರುವ ಸಂದರ್ಭದಲ್ಲಿ ಈ ಪರಿಷ್ಕೃತ ವೇತನ ದರಗಳು ಅವರ ಕುಟುಂಬಗಳಿಗೆ ಸಮಾಧಾನ ತಂದಿದೆ’ ಎಂದು ಹೇಳಿದ್ದಾರೆ.

‘ಎಐಯುಟಿಯುಸಿ ಸೇರಿದಂತೆ ರಾಜ್ಯದ ಕೇಂದ್ರೀಯ ಕಾರ್ಮಿಕ ಸಂಘಗಳು ಸೇರಿ, ಕನಿಷ್ಠ ವೇತನ ಪರಿಷ್ಕರಿಸುವಾಗ ಕಾರ್ಮಿಕರ ಜೀವನ ವೆಚ್ಚಕ್ಕೆ ಸಂಬಂಧಿಸಿದಂತೆ ಮೆ.ರೆಪ್ಟಕೋಸ್ ಬ್ರೆಟ್ ಅಂಡ್ ಕಂಪನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಹೇಳಿದ ಮಾನದಂಡ ಆಧರಿಸಿ ತಿಂಗಳಿಗೆ ₹35,950 ಕನಿಷ್ಠ ವೇತನ ನಿಗದಿಪಡಿಸುವಂತೆ ಒತ್ತಾಯಿಸಿದ್ದೆವು. ಸಂಘಟಿತ ಪ್ರಯತ್ನದ ಫಲವಾಗಿ ಸರ್ಕಾರವು ಕನಿಷ್ಠ ವೇತನ ಪರಿಷ್ಕರಿಸಿರುವುದು ಹೋರಾಟಕ್ಕೆ ಸಿಕ್ಕ ಮಹತ್ವದ ಗೆಲುವಾಗಿದೆ’ ಎಂದು ತಿಳಿಸಿದ್ದಾರೆ.

ADVERTISEMENT

‘ಕಾರ್ಮಿಕರನ್ನು ವಲಯಗಳಲ್ಲಿ ಹಂಚಿಕೆ ಮಾಡುವಲ್ಲಿ ಹಲವು ಲೋಪ–ದೋಷಗಳಿವೆ. ವಿಡಿಎ ಕುರಿತು ಪ್ರಸ್ತಾಪವಿಲ್ಲ. ಹಿಂದಿನ ಪರಿಷ್ಕರಣೆ ಮುಕ್ತಾಯವಾಗಿರುವ 2022ರಿಂದ ಅನ್ವಯ ಮಾಡದಿರುವುದು, ಹಲವು ಪ್ರಮುಖ ಸೆಕ್ಟರ್ ಕಾರ್ಮಿಕರ ವೇತನ ಪರಿಷ್ಕರಣೆ ತಡೆ ಹಿಡಿದಿರುವುದು ಸರಿಯಲ್ಲ. ಈ ವಿಷಯದಲ್ಲೂ ನ್ಯಾಯ ಒದಗಿಸಬೇಕು. ಕಾರ್ಮಿಕರ ಪರವಾದ ನ್ಯಾಯಯುತ ಅಂಶಗಳನ್ನು ಅಧಿಸೂಚನೆಯಲ್ಲಿ ಸೇರಿಸಿ ಕೂಡಲೇ ಜಾರಿಗೊಳಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.