ADVERTISEMENT

ಬೆಳಗಾವಿಯಲ್ಲಿ ಗುತ್ತಿಗೆದಾರರ ಪ್ರತಿಭಟನೆ: ಗಮನಕ್ಕೆ ಬಂದಿಲ್ಲ ಎಂದ ಸಚಿವ ಸುರೇಶ್‌

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2023, 10:54 IST
Last Updated 6 ನವೆಂಬರ್ 2023, 10:54 IST
<div class="paragraphs"><p>ಸಚಿವ ಬಿ.ಎಸ್. ಸುರೇಶ್‌</p></div>

ಸಚಿವ ಬಿ.ಎಸ್. ಸುರೇಶ್‌

   

ಮೈಸೂರು: ‘ಬೆಳಗಾವಿಯಲ್ಲಿ ಗುತ್ತಿಗೆದಾರರು ನನ್ನ ವಿರುದ್ಧ ಪ್ರತಿಭಟಿಸಿರುವುದು ಗಮನಕ್ಕೆ ಬಂದಿಲ್ಲ’ ಎಂದು ನಗರಾಭಿವೃದ್ಧಿ ಸಚಿವ ಬಿ.ಎಸ್. ಸುರೇಶ್‌ ಪ್ರತಿಕ್ರಿಯಿಸಿದರು.

ಇಲ್ಲಿ ಪತ್ರಕರ್ತರೊಂದಿಗೆ ಸೋಮವಾರ ಮಾತನಾಡಿದ ಅವರು, ‘ಗುತ್ತಿಗೆದಾರರು ನೇರವಾಗಿ ನನ್ನ ಹೆಸರು ಹೇಳಿದ್ದಾರೆಯೇ, ಗುತ್ತಿಗೆ ವಿಚಾರಕ್ಕೂ ನನಗೂ ಏನು ಸಂಬಂಧ?’ ಎಂದು ಗರಂ ಆಗಿ ಕೇಳಿದರು.

ADVERTISEMENT

‘ಕಾಮಗಾರಿಗಳನ್ನು ಇ– ಟೆಂಡರ್ ಮೂಲಕ ನೀಡಲಾಗುತ್ತದೆ. ಇದು ಪ್ರಕ್ರಿಯೆ. ಅದರಲ್ಲಿ ನಮ್ಮವರನ್ನು ಹೇಗೆ ಸೇರಿಸಲು ಸಾಧ್ಯ? ಅಷ್ಟಕ್ಕೂ ನಾವಿನ್ನೂ ಟೆಂಡರ್‌ ಪ್ರಕ್ರಿಯೆಯನ್ನೇ ನಡೆಸಿಲ್ಲ. ಸುಮ್ಮನೆ ಆರೋಪಗಳನ್ನು ಮಾಡಲಾಗುತ್ತಿದೆ. ಭಾಗವಹಿಸಿದವರಲ್ಲಿ ಹೆಚ್ಚು ಕೋಟ್ ಮಾಡಿದವರಿಗೆ ಟೆಂಡರ್ ಸಿಗುತ್ತದೆ. ಶಕ್ತಿವಂತ ಪಡೆದುಕೊಳ್ಳುತ್ತಾನೆ’ ಎಂದು ಹೇಳಿದರು.

‘ಕಾಂಗ್ರೆಸ್ ಪಕ್ಷವು ಎಲ್ಲಿಯೇ ಸರ್ಕಾರ ರಚಿಸಿದರೂ ಭ್ರಷ್ಟಾಚಾರದಲ್ಲಿ ತೊಡಗುತ್ತದೆ’ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಪ್ರಧಾನಿ ಹೇಳಿಕೆಗೆ ಉತ್ತರ ಕೊಡುವಷ್ಟು ದೊಡ್ಡವನಲ್ಲ. ಆದರೆ, ದೇಶದಲ್ಲಿ ಭ್ರಷ್ಟಾಚಾರದ ಪಿತಾಮಹರೇ ಬಿಜೆಪಿಯವರು‌. ರಾಜ್ಯದಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ಮಾಡಿದ್ದೇ ಆ ಪಕ್ಷದವರೇ. ಅವರು ಮಾಡಿ ಈಗ ನಮ್ಮ ಮೇಲೆ ಹೇಳುತ್ತಿದ್ದಾರೆ. ನಮ್ಮ ಸರ್ಕಾರ ಉತ್ತಮವಾಗಿ ನಡೆಯುತ್ತಿದೆ ಎಂದು ಇಡೀ ರಾಜ್ಯದ ಜನರೇ ಹೇಳುತ್ತಿದ್ದಾರೆ’ ಎಂದರು.

ಮುಖ್ಯಮಂತ್ರಿ ಸ್ಥಾನದ ಬಗ್ಗೆ ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.