ADVERTISEMENT

ಸಚಿವ ಸುರೇಶ್‌ಕುಮಾರ್‌ ವಜಾಗೆ ಆಗ್ರಹ

ವಿವಿಧ ಸಂಘಟನೆಗಳಿಂದ ಪ್ರತಿಭಟನೆ; ಕಲಾಪದಿಂದ ಹೊರಗುಳಿದ ವಕೀಲರು

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2019, 15:50 IST
Last Updated 16 ನವೆಂಬರ್ 2019, 15:50 IST
ದಲಿತ ಸಂಘಟನೆಗಳ ಒಕ್ಕೂಟ, ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಕಾರ್ಯಕರ್ತರು ಶನಿವಾರ ಮೈಸೂರಿನಲ್ಲಿ ಸಚಿವ ಸುರೇಶ್‌ಕುಮಾರ್ ವಿರುದ್ಧ ಪ್ರತಿಭಟಿಸಿದರು - ಚಿತ್ರ: ಸವಿತಾ ಬಿ.ಆರ್‌
ದಲಿತ ಸಂಘಟನೆಗಳ ಒಕ್ಕೂಟ, ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಕಾರ್ಯಕರ್ತರು ಶನಿವಾರ ಮೈಸೂರಿನಲ್ಲಿ ಸಚಿವ ಸುರೇಶ್‌ಕುಮಾರ್ ವಿರುದ್ಧ ಪ್ರತಿಭಟಿಸಿದರು - ಚಿತ್ರ: ಸವಿತಾ ಬಿ.ಆರ್‌   

ಮೈಸೂರು: ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ಗೆ ಅಪಮಾನ ಮಾಡಿರುವ ಶಿಕ್ಷಣ ಸಚಿವ ಸುರೇಶ್‍ಕುಮಾರ್ ಅವರನ್ನು ವಜಾಗೊಳಿಸುವಂತೆ ಒತ್ತಾಯಿಸಿ, ಹಿಂದುಳಿದ ವರ್ಗಗಳ ಜಾಗೃತ ವೇದಿಕೆ, ಅಂಬೇಡ್ಕರ್ ಸೇನೆ ಹಾಗೂ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಯಿತು. ವಕೀಲರು ಸಹ ಕಲಾಪದಿಂದ ಹೊರಗುಳಿದು ಖಂಡಿಸಿದರು.

ನಗರದ ಪುರಭವನದ ಮುಂಭಾಗದಲ್ಲಿರುವ ಅಂಬೇಡ್ಕರ್ ಪ್ರತಿಮೆ ಎದುರು ಜಮಾವಣೆಗೊಂಡ ಪ್ರತಿಭಟನಾಕಾರರು, ಬಿಜೆಪಿ ಸರ್ಕಾರದ ವಿರುದ್ಧ ಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಶಿವರಾಮು ಮಾತನಾಡಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಶ್ರಮವನ್ನು ಕಡೆಗಣಿಸಲಿಕ್ಕಾಗಿಯೇ, ಕಾರ್ಯಸೂಚಿಯೊಂದನ್ನು ಸಿದ್ದಪಡಿಸಿ, ಶಿಕ್ಷಣ ಇಲಾಖೆಗೆ ನೀಡಿದ್ದ ಸಿಎಂಸಿಎ ಸಂಸ್ಥೆಗೆ ಗಣ್ಯಾತಿಗಣ್ಯರು ಟ್ರಸ್ಟಿಯಾಗಿದ್ದಾರೆ. ಸಂಸ್ಥೆ ನೀಡಿದ ಮನವಿ ಮತ್ತು ಇದರೊಂದಿಗೆ ಸಲ್ಲಿಸಿದ್ದ ಕಾರ್ಯಸೂಚಿಯನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು ಪರಾಮರ್ಶಿಸದಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಈ ಕಾರ್ಯಸೂಚಿ ಜಾರಿಗೆ ನ.26ರಂದು ಆಚರಿಸುವ ಸಂವಿಧಾನ ದಿನವನ್ನು ವ್ಯವಸ್ಥಿತವಾಗಿ ಬಳಸಿಕೊಂಡಿರುವ ಬಿಜೆಪಿ ಸರ್ಕಾರ, ಡಾ.ಬಿ.ಆರ್.ಅಂಬೇಡ್ಕರ್ ಅವರೊಬ್ಬರೇ ಸಂವಿಧಾನ ಬರೆದಿಲ್ಲ ಎಂದು ದೇಶಾದ್ಯಂತ ಪ್ರತಿಪಾದನೆ ಮಾಡಲು ಹೊರಟಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದರು.

‘ಸಂವಿಧಾನವನ್ನು ಬುಡಮೇಲು ಮಾಡುವಂತಹ ಕೃತ್ಯ ಕೋಮುವಾದಿಗಳಿಂದ ಮತ್ತು ಬಿಜೆಪಿ ಸರ್ಕಾರದಿಂದ ಪದೇ ಪದೇ ನಡೆಯುತ್ತಿರುವುದು ವಿಷಾದನೀಯ. ಸಿಎಂಸಿಎ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಿ. ಈ ಸಂಸ್ಥೆ ವಿರುದ್ಧ ಉಗ್ರ ಕಾನೂನು ಕ್ರಮ ಕೈಗೊಳ್ಳಬೇಕು. ಬೇಜವಾಬ್ದಾರಿತನ ಪ್ರದರ್ಶಿಸಿರುವ ಸಚಿವ ಸುರೇಶ್‍ಕುಮಾರ್ ಅವರನ್ನು ಕೂಡಲೇ ಸಚಿವ ಸಂಪುಟದಿಂದ ವಜಾಗೊಳಿಸಬೇಕು’ ಎಂದು ಆಗ್ರಹಿಸಿದರು.

ದಲಿತ ಸಂಘಟನೆಗಳ ಒಕ್ಕೂಟದ ಸಂಚಾಲಕ ಪಿ.ರಾಜು, ಅಂಬೇಡ್ಕರ್ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ನಾಗೇಂದ್ರ ಬಸವಟ್ಟಿಗೆ, ಮಹೇಶ್ ತಗಡೂರು, ಡೈರಿ ವೆಂಕಟೇಶ್, ಜಾಕೀರ್ ಹುಸೇನ್, ಎಚ್.ಎಸ್.ಪ್ರಕಾಶ್, ವಿ.ಮಂಜುನಾಥ್, ದ್ಯಾವಪ್ಪ ನಾಯಕ, ಶೌಕತ್ ಅಲಿಖಾನ್ ಪ್ರತಿಭಟನೆ ನೇತೃತ್ವ ವಹಿಸಿದ್ದರು.

ಕಲಾಪದಿಂದ ಹೊರಗುಳಿದ ವಕೀಲರು

ಅಂಬೇಡ್ಕರ್‌ಗೆ ಅಪಮಾನ ಎಸಗಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಹಾಗೂ ಇದಕ್ಕೆ ಸಂಬಂಧಿಸಿದ ಇನ್ನಿತರರ ಮೇಲೂ ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ವಕೀಲರು ಕಲಾಪದಿಂದ ಹೊರಗುಳಿದು ಪ್ರತಿಭಟಿಸಿದರು.

ಜಿಲ್ಲಾ ನ್ಯಾಯಾಲಯದ ಮುಂಭಾಗವಿರುವ ಗಾಂಧಿ ಪ್ರತಿಮೆ ಬಳಿ ಜಮಾವಣೆಗೊಂಡು ಪ್ರತಿಭಟನೆ ನಡೆಸಿದರು.

ಜನ ಸಾಮಾನ್ಯರಿಗೆ, ವಿದ್ಯಾರ್ಥಿಗಳಿಗೆ ತಪ್ಪು ತಿಳಿವಳಿಕೆ ನೀಡುವ ದುರುದ್ದೇಶದಿಂದಲೇ ಸುತ್ತೋಲೆ ಹೊರಡಿಸಿರುವವರ ವಿರುದ್ಧ ಹಾಗೂ ಇದರ ಬಗ್ಗೆ ಅರಿವಿಲ್ಲದ ಶಿಕ್ಷಣ ಸಚಿವರ ವಿರುದ್ಧ ರಾಜ್ಯಪಾಲರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆ ಬಳಿಕ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ, ತಹಶೀಲ್ದಾರ್ ನರಗುಂದ ಅವರಿಗೆ ಮನವಿ ಸಲ್ಲಿಸಿದರು.

ಮೈಸೂರು ಬಾರ್ ಅಸೋಸಿಯೇಷನ್ ಉಪಾಧ್ಯಕ್ಷ ಎಸ್.ಜಿ.ಶಿವಣ್ಣೇಗೌಡ, ವಕೀಲರಾದ ಎಂ.ಆರ್.ಆನಂದ್, ಎಸ್.ಆನಂದ್ ಕುಮಾರ್, ಬಿ.ಎಸ್.ಪ್ರಶಾಂತ್, ವಿ.ಶಾರದಾ, ಕೆ.ಟಿ.ಸುರೇಶ್, ಬಿ.ಶಿವಣ್ಣ, ಸಿ.ಕೆ.ರುದ್ರಮೂರ್ತಿ, ಎಂ.ಮನೋನ್ಮಣಿ, ಜಿ.ಪಿ.ಚಂದ್ರಶೇಖರ್, ಪಡುವಾರಹಳ್ಳಿ ರಾಮಕೃಷ್ಣ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.