
ಬೆಟ್ಟದಪುರ: ‘ರಾಗಿ ಖರೀದಿ ವೇಳೆ ಅಧಿಕಾರಿಗಳು ರೈತರ ಪರವಾಗಿ ಕೆಲಸ ಮಾಡಬೇಕು’ ಎಂದು ಸಚಿವ ಕೆ.ವೆಂಕಟೇಶ್ ಹೇಳಿದರು.
ಗ್ರಾಮದ ಎಪಿಎಂಸಿ ಆವರಣರದಲ್ಲಿ ಸೋಮವಾರ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರಾಗಿ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸರ್ಕಾರವು ರೈತರ ಅನುಕೂಲಕ್ಕಾಗಿ ಬೆಂಬಲ ಯೋಜನೆಯಡಿ ರಾಗಿ ಖರೀದಿಸುತ್ತಿದೆ. ಇದರಿಂದ ಅವರ ಜೀವನಕ್ಕೆ ಅನುಕೂಲಕರವಾಗಲಿದೆ. ಆದರೆ, ಮಧ್ಯವರ್ತಿಗಳು, ವ್ಯಾಪಾರಸ್ಥರು ಇದಕ್ಕೆ ಬಂಡವಾಳವಾಗಿ ಇಟ್ಟುಕೊಂಡು ಲಾಭ ಮಾಡುತ್ತಿರುವುದು ಸರಿಯಲ್ಲ. ರೈತರು ಇದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು ಎಂದರು.
ಕಳೆದ ಬಾರಿ ಒಬ್ಬ ರೈತನಿಗೆ 20 ಕ್ವಿಂಟಲ್ ರಾಗಿ ಮಾರಾಟಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಈ ಬಾರಿ 10-50 ಕ್ವಿಂಟಲ್‌ವರೆಗೆ ರಾಗಿ ಮಾರಾಟ ಮಾಡಲು ಅವಕಾಶ ನೀಡಲಾಗಿದೆ. ರೈತರು ಗುಣಮಟ್ಟ ರಾಗಿಯನ್ನು ತರಬೇಕು. ಯಾವುದೇ ಕಾರಣಕ್ಕೂ ಅಧಿಕಾರಿಗಳು ಕಳಪೆ ರಾಗಿ ತೆಗೆದುಕೊಳ್ಳಬಾರದು. ಯಾರ ಒತ್ತಡಕ್ಕೂ ಮಣಿಯಬಾರದು. ತಾಲ್ಲೂಕಿನಲ್ಲಿರುವ ನಾಲ್ಕು ಕೇಂದ್ರಗಳಿಗೂ ತಲಾ ನಾಲ್ಕು ಜನ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗುವುದು ಎಂದು ತಿಳಿಸಿದರು.
ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಯುವ ಘಟಕ ಅಧ್ಯಕ್ಷ ಕೋಮಲಾಪುರ ಸ್ವಾಮಿಗೌಡ ಮಾತನಾಡಿ, ರಾಗಿ ಖರೀದಿ ಕೇಂದ್ರಗಳಲ್ಲಿ ಕಡ್ಡಾಯವಾಗಿ ಸೂಚನೆ ಹಾಗೂ ಮಾಹಿತಿ ಫಲಕ ಹಾಕಬೇಕು. ರೈತರು ತರುವ ರಾಗಿಯಲ್ಲಿ ಚೀಲದ ತೂಕ ಎಂದು ನೆಪ ಹೇಳುವ ಮೂಲಕ ಹೆಚ್ಚು ತೂಕ ಕಳೆಯಬಾರದು. ಎಲ್ಲಾ ರೈತರಿಗೂ ಒಂದೇ ನ್ಯಾಯ ಸಿಗಬೇಕಿದೆ. ನೋಂದಣಿ ಪ್ರಕಾರ ಸರತಿ ಸಾಲಿನಲ್ಲಿ ರಾಗಿ ಖರೀದಿ ಮಾಡಬೇಕು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಟಿ.ಸ್ವಾಮಿ, ರಹಮತ್ ಜಾನ್ ಬಾಬು, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಹೊಲದಪ್ಪ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಈಚೂರು ಲೋಕೇಶ್, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಮಂಟೇಸ್ವಾಮಿ, ರೈತಮುಖಂಡರಾದ ಕೊಣಸೂರು ಆನಂದ್, ಮಲ್ಲೇಶ್, ವಿಜಯರಾಜೇಅರಸ್, ಜಯಚಂದ್ರ, ಚಿಕ್ಕೇಗೌಡ, ಆಹಾರ ಇಲಾಖೆಯ ಜಿಲ್ಲಾ ವ್ಯವಸ್ಥಾಪಕ ಕಿರಣ್, ಶಿರಸ್ತೆದಾರ್ ಸಣ್ಣಸ್ವಾಮಿ, ಖರೀದಿ ಕೇಂದ್ರದ ಅಧಿಕಾರಿ ಎಂ.ಆರ್.ಮಂಜುನಾಥ್, ಉಪತಹಶೀಲ್ದಾರ್ ಶಶಿಧರ್, ಪಿಡಿಒ ಮಂಜುನಾಥ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.