ADVERTISEMENT

ಕಲ್ಲಂಗಡಿ ಬಗ್ಗೆ ಅಪಪ್ರಚಾರ; ಕ್ರಮಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2025, 14:44 IST
Last Updated 20 ಮಾರ್ಚ್ 2025, 14:44 IST

ಪ್ರಜಾವಾಣಿ ವಾರ್ತೆ

ಪಿರಿಯಾಪಟ್ಟಣ: ‘ರೈತರು ಬೆಳೆದ ಕಲ್ಲಂಗಡಿ ಹಣ್ಣಿನ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಸರ್ಕಾರ ಶಿಸ್ತು ಕ್ರಮ ಕೈಗೊಳ್ಳಬೇಕು’ ಎಂದು ರೈತ ಮುಖಂಡ ಆವರ್ತಿ ಚಂದ್ರಶೇಖರ್  ಒತ್ತಾಯಿಸಿದ್ದಾರೆ.

ಪಟ್ಟಣದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಾದ್ಯಂತ ರೈತರು ಸಾವಿರಾರು ಎಕರೆಯಲ್ಲಿ ಕಲ್ಲಂಗಡಿಯನ್ನು ಬೆಳೆದಿದ್ದಾರೆ. ಈ ಬೆಳೆಗೆ ಸೂಕ್ತ ಬೆಂಬಲ ಕೂಡ ಸರ್ಕಾರ ನೀಡುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕೆಲವು ಕಿಡಿಗೇಡಿಗಳು ಕಲ್ಲಂಗಡಿ ಹಣ್ಣಿಗೆ ಬಣ್ಣ ಬರಲು ಆರೋಗ್ಯಕ್ಕೆ ಹಾನಿಕರವಾಗಿರುವ ರಾಸಾಯನಿಕ ಚುಚ್ಚುಮದ್ದು ಹಾಕುತ್ತಿದ್ದಾರೆ ಎಂದು ಅಪಪ್ರಚಾರ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊಗಳನ್ನು ವೈರಲ್ ಮಾಡುತ್ತಿದ್ದಾರೆ. ಇದರಿಂದಾಗಿ ಕಲ್ಲಂಗಡಿ ಹಣ್ಣು ಕೊಳ್ಳುವವರ ಮತ್ತು ಸೇವಿಸುವ ಗ್ರಾಹಕರ ಸಂಖ್ಯೆ ಕಡಿಮೆಯಾಗುತ್ತಿದೆ. ಭಯದ ವಾತಾವರಣದಲ್ಲಿ ಸಾರ್ವಜನಿಕರು ಕಲ್ಲಂಗಡಿಯನ್ನು ತಿರಸ್ಕಾರ ಮಾಡುತ್ತಿದ್ದಾರೆ’ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

‘ಕಲ್ಲಂಗಡಿಯನ್ನು ಬಹಳ ವರ್ಷಗಳಿಂದ ನಾನು ಹತ್ತು ಎಕರೆಯಲ್ಲಿ ಬೆಳೆಯುತ್ತಿದ್ದೇನೆ. ಪ್ರತಿ ಹಣ್ಣಿಗೂ ಕೂಡ ಅದರ ಸ್ವಭಾವದ ಬಣ್ಣ ಮತ್ತು ಆಕಾರ, ರುಚಿಯನ್ನು ಹೊಂದಿರುತ್ತದೆ ಇದನ್ನು ಪ್ರತಿಯೊಬ್ಬರು ಅರ್ಥೈಸಿಕೊಳ್ಳಬೇಕು. ಹಣ್ಣಿಗೆ ಕೃತಕವಾಗಿ ಯಾವುದೇ ರೀತಿಯ ಮದ್ದನ್ನು ನೀಡಲು ಸಾಧ್ಯವಿಲ್ಲ. ಸರ್ಕಾರವು ಕೂಡಲೇ ಹಣ್ಣಿನ್ನು ಪರೀಕ್ಷೆಗೆ ಒಳಪಡಿಸಿ ಅದನ್ನು ತಿನ್ನಲು ಉಪಯುಕ್ತವಾದ ಆಹಾರ ಪದಾರ್ಥವೆಂದು ಸೂಕ್ತ ಬೆಲೆ ನಿಗದಿಪಡಿಸಿ ಘೋಷಿಸಬೇಕು ಮತ್ತು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತ ಸಾರ್ವಜನಿಕರನ್ನು ದಿಕ್ಕು ತಪ್ಪಿಸುತ್ತಿರುವ ಕಿಡಿಗೇಡಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶಿವರುದ್ರ ನಾಯಕ, ಎ.ಎಸ್.ಜಗದೀಶ್, ಎ.ಎಸ್.ಮಂಜು, ಎ.ಎಂ.ಧರ್ಮ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.