ಸಾಲಿಗ್ರಾಮ: ‘ಕೆ.ಆರ್.ನಗರ ಹಾಗೂ ಸಾಲಿಗ್ರಾಮ ತಾಲ್ಲೂಕು ವ್ಯಾಪ್ತಿಯಲ್ಲಿ ಇರುವ ಸುಮಾರು 14ಕ್ಕೂ ಹೆಚ್ಚು ಸಮುದಾಯಗಳಿಗೆ ಭವನ ನಿರ್ಮಾಣ ಮಾಡಿಕೊಳ್ಳಲು ಮುಖ್ಯಮಂತ್ರಿ ತಲಾ ₹ 25ಲಕ್ಷ ಹಣ ಮಂಜೂರು ಮಾಡಿದ್ದಾರೆ’ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಪಟ್ಟಣದ ಬಾಹುಬಲಿ ಭವನದಲ್ಲಿ ಅವಳಿ ತಾಲ್ಲೂಕಿನ ವೀರ ಮಡಿವಾಳ ಸಮುದಾಯ ಆಯೋಜಿಸಿದ್ದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಅವರು ಮಾತನಾಡಿದರು.
‘ಸಮುದಾಯ ಅಭಿವೃದ್ಧಿ ಅಗತ್ಯ ಇರುವ ಸೌಲಭ್ಯಗಳನ್ನು ಒದಗಿಸಲು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸುತ್ತೇನೆ. ಅಲ್ಲದೆ ಕೆ.ಆರ್.ನಗರದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಶೀಘ್ರವೇ ನಿವೇಶನ ಮಂಜೂರು ಮಾಡಿಸುವುದಾಗಿ ಭರವಸೆ’ ನೀಡಿದರು.
‘ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ನಿಮ್ಮ ಮಕ್ಕಳಿಗೆ ವಿದ್ಯೆಯನ್ನು ಕಲಿಸಿದರೆ ಮಾತ್ರ ಸಮಾಜದಲ್ಲಿ ಎಲ್ಲರಂತೆ ಬದುಕು ಕಟ್ಟಿ ಕೊಳ್ಳಲು ಸಾಧ್ಯವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ಮಕ್ಕಳಿಗೆ ಶಿಕ್ಷಣವನ್ನು ಕೊಡಲು ಶ್ರಮಿಸಬೇಕು’ ಸಲಹೆ ನೀಡಿದರು.
‘ಸಿಎಂ ಸಿದ್ದರಾಮಯ್ಯ ಅವರ ಗುರಿ ಸಮಾಜ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಪ್ರತಿಯೊಂದು ಯೋಜನೆಯ ಸವಲತ್ತುಗಳು ಸಿಗಬೇಕು ಎಂಬ ಉದ್ದೇಶ. ಈ ಹಿನ್ನೆಲೆಯಲ್ಲಿ ಹಲವು ಯೋಜನೆಗಳನ್ನು ಜಾರಿಗೆ ತಂದು ಸೌಲಭ್ಯಗಳನ್ನು ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಇಂತಹ ನಾಯಕನಿಗೆ ನಿಮ್ಮ ಬೆಂಬಲ ಇರಬೇಕು’ ಎಂದು ಮನವಿ ಮಾಡಿದರು.
‘ಸಾಲಿಗ್ರಾಮ ಪಟ್ಟಣದ ಮೈಲಾರಲಿಂಗೇಶ್ವರ ದೇವಾಲಯ ಕಾಂಪೌಂಡ್ ನಿರ್ಮಾಣಕ್ಕೆ ₹ 3ಲಕ್ಷ ಹಾಗೂ ಭೇರ್ಯ ಸಮೀಪ ಗೇರದಡದ ದೇವಾಲಯಕ್ಕೆ ₹ 1 ಲಕ್ಷ ಅನುದಾನ ನೀಡಲಾಗುತ್ತದೆ. ಇದಲ್ಲದೆ ಸಮುದಾಯದ ಮುಖಂಡರಿಗೆ ರಾಜಕೀಯವಾಗಿ ಸ್ಥಾನಮಾನ ನೀಡುತ್ತೇನೆ’ ಎಂದು ಭರವಸೆ ನೀಡಿದರು.
ಸಿಎಂ ವೈದ್ಯಕೀಯ ಸಲಹೆಗಾರ ಡಾ.ರವಿಕುಮಾರ್, ತಹಶೀಲ್ದಾರ್ ನರಗುಂದ, ಸಾಲಿಗ್ರಾಮ ತಾಲ್ಲೂಕು ವೀರ ಮಡಿವಾಳ ಸಂಘದ ಅಧ್ಯಕ್ಷ ಎಸ್.ಜಿ.ಹರ್ಷವರ್ಧನ್, ಸಿದ್ದನಕೊಪ್ಪಲು ಕುಮಾರ್, ಪಟ್ಟಣ ಘಟಕದ ಅಧ್ಯಕ್ಷ ಗೋಪಾಲ್, ಗ್ರಾ.ಪಂ ಅಧ್ಯಕ್ಷೆ ಫಾತಿಮಾಉನ್ನಿಸಾ, ತಾ.ಪಂ ಮಾಜಿ ಅಧ್ಯಕ್ಷ ಚಂದ್ರಶೇಖರ್, ಬೋರಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯಕುಮಾರ್, ನಗರ ಘಟಕದ ಅಧ್ಯಕ್ಷ ಪ್ರಭಾಕರ್, ತಿಮ್ಮಶೆಟ್ಟಿ, ನಾಗರಾಜಶೆಟ್ಟಿ, ಶಿವಶಂಕರ್, ಜಯಣ್ಣ, ಸಣ್ಣಸ್ವಾಮಿ, ಬಲರಾಮ ಉಪಸ್ಥಿತರಿದ್ದರು.
ಸ್ಪರ್ಧಾತ್ಮಕ ದಿನಗಳಲ್ಲಿ ಮಕ್ಕಳಿಗೆ ಶಿಕ್ಷಣ ನೀಡಿ ಸೌಲಭ್ಯಗಳನ್ನು ಮನೆ ಬಾಗಿಲಿಗೆ ತಲುಪಿಸುವ ಕೆಲಸ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.