ADVERTISEMENT

ಭಕ್ತರಿಗೆ ಮೂಲ ಸೌಲಭ್ಯ ಕಲ್ಪಿಸಿ: ಶಾಸಕ ದರ್ಶನ್ ಧ್ರುವನಾರಾಯಣ

ಶ್ರೀಕಂಠೇಶ್ವರ ಸ್ವಾಮಿ ದೊಡ್ಡ ಜಾತ್ರಾ ಮಹೋತ್ಸವ ಪೂರ್ವಭಾವಿ ಸಭೆಯಲ್ಲಿ ಶಾಸಕ ಸೂಚನೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 5:49 IST
Last Updated 10 ಫೆಬ್ರುವರಿ 2026, 5:49 IST
ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇವಾಲಯದ ದಾಸೋಹ ಭವನದಲ್ಲಿ ಸೋಮವಾರ ದೊಡ್ಡಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ ನಡೆಯಿತು
ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇವಾಲಯದ ದಾಸೋಹ ಭವನದಲ್ಲಿ ಸೋಮವಾರ ದೊಡ್ಡಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ ನಡೆಯಿತು   

ನಂಜನಗೂಡು: ನಗರದ ಶ್ರೀಕಂಠೇಶ್ವರಸ್ವಾಮಿ ದೊಡ್ಡ ಜಾತ್ರಾ ಮಹೋತ್ಸವ ಮಾರ್ಚ್ 30ರಂದು ನಡೆಯಲಿದ್ದು, ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಸೌಲಭ್ಯ ಕಲ್ಪಿಸಬೇಕು. ಜಾತ್ರೆಯನ್ನು ವ್ಯವಸ್ಥಿತವಾಗಿ, ಅಚ್ಚುಕಟ್ಟಾಗಿ ನಡೆಸಲು ಈಗಿನಿಂದಲೇ ಅಗತ್ಯ ಸಿದ್ಧತೆ ಕೈಗೊಳ್ಳಬೇಕು’ ಎಂದು ಶಾಸಕ ದರ್ಶನ್ ಧ್ರುವನಾರಾಯಣ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ದಾಸೋಹ ಭವನದಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

‘ದೊಡ್ಡ ಜಾತ್ರೆಯನ್ನು ಅದ್ದೂರಿಯಾಗಿ ನಡೆಸಲು ಒಂದೂವರೆ ತಿಂಗಳು ಮುಂಚಿತವಾಗಿ ಜಾತ್ರೆಯ ಪೂರ್ವಭಾವಿ ಸಭೆ ಆಯೋಜಿಸಲಾಗಿದೆ. ಜಾತ್ರೆಯ ಕುರಿತು ರಾಜ್ಯವ್ಯಾಪಿ ಪ್ರಚಾರ ನೀಡಲು ಈಗಿನಿಂದಲೇ ಕ್ರಮ ವಹಿಸಬೇಕು’ ಎಂದರು.

ADVERTISEMENT

‘ಕಪಿಲಾ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಸದ್ಯ ತೀರಾ ಕಡಿಮೆಯಿರುವುದರಿಂದ ಯಂತ್ರಗಳನ್ನು ಬಳಸಿ ಜೊಂಡು ತೆರವುಗೊಳಿಸಲು ನೀರಾವರಿ ಇಲಾಖೆ ಅಧಿಕಾರಿಗಳು ಮುಂದಾಗಬೇಕು. ಜಾತ್ರೆಯ ಸಮಯದಲ್ಲಿ ದೇಗುಲದ ಅಂಗಳ ಹಾಗೂ ರಥ ಬೀದಿಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವ ಸಲುವಾಗಿ ನಗರಸಭೆಯಿಂದ ಹೆಚ್ಚುವರಿಯಾಗಿ ಪೌರ ಕಾರ್ಮಿಕರನ್ನು ನಿಯೋಜಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಮಾತನಾಡಿ, ‘ಜಾತ್ರೆಯ ಸಮಯದಲ್ಲಿ ಐದು ದಿನಗಳ ಕಾಲ ಕಬಿನಿ ಜಾಲಾಶಯದಿಂದ ನದಿಗೆ ನೀರು ಹರಿಸಲು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಕ್ರಮ ವಹಿಸಬೇಕು. ಜಾತ್ರಾ ಮಹೋತ್ಸವದ ನೂಡೆಲ್ ಅಧಿಕಾರಿಯನ್ನಾಗಿ ಹೆಚ್ಚುವರಿ ಜಿಲ್ಲಾಧಿಕಾರಿ ಶಿವರಾಜು ಅವರನ್ನು ನಿಯೋಜಿಸಲಾಗಿದೆ. ಅವರು ಜಾತ್ರೆಯ ಒಂದು ವಾರ ಮೊದಲು, ಪ್ರತಿದಿನ ಜಾತ್ರಾ ಮಹೋತ್ಸವ ಆಚರಣೆ ಸಂಬಂಧ ಅಧಿಕಾರಿಗಳೊಡನೆ ಸಭೆಗಳನ್ನು ನಡೆಸಲಿದ್ದಾರೆ. ಹೀಗಾಗಿ ಸಂಘಸಂಸ್ಥೆಗಳವರು ಹಾಗೂ ಸ್ಥಳೀಯ ನಾಗರಿಕರು ಜಾತ್ರಾ ಮಹೋತ್ಸವದ ಯಶಸ್ವಿಗೆ ಸಹಕರಿಸಬೇಕು’ ಎಂದು ಮನವಿ ಮಾಡಿದರು.

ಸಭೆಯಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಎಡಿಸಿ ಶಿವರಾಜು, ಉಪವಿಭಾಗಾಧಿಕಾರಿ ಆಶಪ್ಪ ಪೂಜಾರಿ, ತಹಶೀಲ್ದಾರ್ ಸ್ಮಿತಾ, ಡಿವೈಎಸ್ಪಿ ರಘು, ದೇವಾಲಯದ ಇಒ ಕೃಷ್ಣ, ಆಗಮಿಕ ನಾಗಚಂದ್ರ ದೀಕ್ಷಿತ್, ನಗರಸಭೆ ಮಾಜಿ ಅಧ್ಯಕ್ಷ ಶ್ರೀಕಂಠಸ್ವಾಮಿ, ಮಂಜುನಾಥ್, ಸಿ.ಎಂ.ಶಂಕರ್,ಶಂಕರಪುರ ಸುರೇಶ್, ಎಂ.ಡಿ.ಬಾಲರಾಜು ಉಪಸ್ತಿತರಿದ್ದರು.

‘ಡ್ರೋನ್ ಹಾರಿಸುವುದು ನಿಯಂತ್ರಿಸಿ’

‘ರಥೋತ್ಸವದ ಸಮಯದಲ್ಲಿ ರಥ ಎಳೆಯುವವರನ್ನು ಹೊರತುಪಡಿಸಿ ಸಾರ್ವಜನಿಕರು ರಥದ ಸಮೀಪಕ್ಕೆ ತೆರಳದಂತೆ ಮುನ್ನೆಚ್ಚರಿಕೆ ವಹಿಸಬೇಕು. ಜಾತ್ರಾ ಮಹೋತ್ಸವದ ಸಮಯದಲ್ಲಿ ಸಿಕ್ಕಸಿಕ್ಕವರೆಲ್ಲರೂ ಡ್ರೋನ್‌ಗಳನ್ನು ಹಾರಿಸುತ್ತಾರೆ. ಭದ್ರತೆಯ ಸಲುವಾಗಿ ಡ್ರೋನ್ ಹಾರಿಸುವುದನ್ನು ನಿಯಂತ್ರಿಸಬೇಕು’ ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.