ನಂಜನಗೂಡು: ‘ನಾರಾಯಣ ಗುರುಗಳು ಮೌಢ್ಯ, ಕಂದಾಚಾರ , ಅಸಮಾನತೆ ವಿರುದ್ಧ ಹೋರಾಟ ನಡೆಸಿ ಸಮಾಜವನ್ನು ಜಾಗೃತಿಗೊಳಿಸಿದರು’ ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಭಾನುವಾರ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಮಹೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಸಾಮಾಜಿಕ ಹಾಗೂ ಧಾರ್ಮಿಕ ಪರಿವರ್ತನೆಯ ಹರಿಕಾರ ನಾರಾಯಣ ಗುರುಗಳು ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ಮಾನವೀಯ ತತ್ವವನ್ನು ಸಾರಿದ ಮಹಾ ತತ್ವಜ್ಞಾನಿ. ಸಾಮಾಜಿಕ ಧಾರ್ಮಿಕ ಪರಿವರ್ತನೆಯ ಹರಿಕಾರ. ಅವರ ಸಮಾನತೆ, ಸಹೋದರತ್ವ ಮತ್ತು ಮಾನವೀಯ ಮೌಲ್ಯಗಳ ಬೋಧನೆ ಇಂದು ಕೂಡ ಸಮಾನತೆಯ ಸಮಾಜಕ್ಕೆ ದಾರಿ ತೋರಿಸುತ್ತಿದೆ’ ಎಂದು ಹೇಳಿದರು.
ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ನಗರಸಭಾಧ್ಯಕ್ಷ ಶ್ರೀಕಂಠ ಸ್ವಾಮಿ, ತಹಶೀಲ್ದಾರ್ ಶಿವಕುಮಾರ್ ಕಾಸನೂರ್, ನಗರಸಭೆ ಆಯುಕ್ತ ವಿಜಯ್, ಶಂಕರಪುರ ಸುರೇಶ್, ಉದ್ಯಮಿ ಎನ್.ಟಿ. ಗಿರೀಶ್, ಜಿ.ಕೆ.ಮಂಜುನಾಥ್, ಕೃಷ್ಣಕುಮಾರ್, ಸಿಂಧುವಳ್ಳಿಪುರ ರಾಜು, ಎಚ್.ಎಸ್. ದಿಲೀಪ್, ನಾರಾಯಣ, ರಘು, ರಾಘವೇಂದ್ರ,ಹುಲ್ಲಹಳ್ಳಿ ಶ್ರೀನಿವಾಸ್ ಉಪಸ್ಥಿತರಿದ್ದರು.
‘ಸರಳ ಪ್ರತಿಪಾದನೆ’
ಮುಖ್ಯ ಭಾಷಣಕಾರ ರಾಜು ಮಾತನಾಡಿ ‘ಕೇರಳದಲ್ಲಿ ಶೂದ್ರರಿಗೆ ದೇವಾಲಯ ಪ್ರವೇಶ ನಿರಾಕರಿಸಿದ್ದ ಸಂದರ್ಭದಲ್ಲಿ ಆ ತೀರ್ಮಾನದ ವಿರುದ್ಧ ಸಂಘರ್ಷಕ್ಕಿಳಿಯದೆ ನಾರಾಯಣ ಗುರುಗಳು ಶೂದ್ರರಿಗಾಗಿ ದೇವಾಲಯ ನಿರ್ಮಿಸಿ ಅವರನ್ನೇ ಅರ್ಚಕರನ್ನಾಗಿ ನೇಮಿಸುವಂತೆ ನೋಡಿಕೊಂಡರು. ಅಲ್ಲಿ 60ಕ್ಕೂ ಹೆಚ್ಚು ದೇವಾಲಯವನ್ನು ಕಟ್ಟಿದರು. ರಾಜ್ಯದ ಮಂಗಳೂರಿನಲ್ಲೂ ದೇವಾಲಯ ನಿರ್ಮಿಸಿದ್ದಾರೆ ಅಲ್ಲಿ ಈಗಲೂ ತಳಸಮುದಾಯದವರೇ ಅರ್ಚಕರಾಗಿ ಪೂಜೆ ಸಲ್ಲಿಸುತ್ತಿದ್ದಾರೆ. ಗುರುಗಳು ಧರ್ಮ ಅರ್ಥವಾಗುವ ರೀತಿಯಲ್ಲಿ ಸರಳವಾಗಿ ಪ್ರತಿಪಾದಿಸಿದರು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.