ADVERTISEMENT

ಜವಾಬ್ದಾರಿ ಹೊತ್ತುಕೊಳ್ಳಿ: ಜಿಟಿಡಿ ಅಹ್ವಾನಿಸಿ ಕಣ್ಣೀರಿಟ್ಟ ಶಾಸಕ ಸಾ.ರಾ.ಮಹೇಶ್

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2021, 8:13 IST
Last Updated 17 ಮಾರ್ಚ್ 2021, 8:13 IST
 ಶಾಸಕ ಸಾ.ರಾ.ಮಹೇಶ್‌
ಶಾಸಕ ಸಾ.ರಾ.ಮಹೇಶ್‌   

‌ಮೈಸೂರು: ‘ನೀವೇ ನಮ್ಮ ನಾಯಕರು ಅಂತಲೇ ಹೇಳುತ್ತಾ ಬಂದಿದ್ದೇನೆ. ನಾನು ಯಾವತ್ತೂ ನಿಮ್ಮ ಜತೆ ಪೈಪೋಟಿ ಮಾಡಿಲ್ಲ. ಬನ್ನಿ, ನಾಳೆಯೇ ಜವಾಬ್ದಾರಿ ಹೊತ್ತುಕೊಳ್ಳಿ. ಎಚ್‌.ಡಿ.ಕುಮಾರಸ್ವಾಮಿ ಜತೆ ಸೇರಿಕೊಂಡು ಪಕ್ಷವನ್ನು ಕಟ್ಟಿ’ ಎಂದು ಶಾಸಕ ಸಾ.ರಾ.ಮಹೇಶ್‌ ಅವರು ಪಕ್ಷದ ಚಟುವಟಿಕೆಗಳಿಂದ ದೂರವಾಗಿರುವ ಜಿ.ಟಿ.ದೇವೇಗೌಡ ಅವರಿಗೆ ಆಹ್ವಾನ ನೀಡಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ನೀವು ಸಕ್ರಿಯವಾಗಿಲ್ಲ ಎಂಬ ಕಾರಣ ನಾನು ಸ್ವಲ್ಪ ಓಡಾಡುತ್ತಿದ್ದೇನೆ. ನನ್ನ ಈ ಓಡಾಟದಿಂದ ನಿಮಗೆ ನೋವಾಗಿದ್ದರೆ ದೂರ ಸರಿಯುವೆ. ಇನ್ನು ಮುಂದೆ ಎಂದೂ ಚುನಾವಣೆಗೆ ನಿಲ್ಲಲ್ಲ ಎಂದು ಚಾಮುಂಡಿಬೆಟ್ಟದಲ್ಲಿ ಪ್ರಮಾಣ ಮಾಡಿ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ. ನೀವು ಕಾರ್ಯಕರ್ತರ ಜತೆ ಸೇರಿಕೊಂಡು ಪಕ್ಷವನ್ನು ಉಳಿಸುವ ಕೆಲಸ ಮಾಡಿ’ ಎಂದು ಭಾವುಕರಾಗಿ ಕಣ್ಣೀರು ಹಾಕಿದರು.

‘ನೀವು‍ ಪದೇ ಪದೇ ನನ್ನನ್ನು ಟೀಕಿಸುತ್ತಿದ್ದೀರಿ. ಎಷ್ಟೇ ಟೀಕೆ ಮಾಡಿದರೂ ನಿಮ್ಮ ಬಗ್ಗೆ ಗೌರವ ಇಟ್ಟುಕೊಂಡಿದ್ದೇನೆ. ನಾನು ಏನು ಅನ್ಯಾಯ ಮಾಡಿದ್ದೇನೆ, ನಿಮ್ಮ ಜತೆ ಇರುವ ಕಾರ್ಯಕರ್ತರಲ್ಲಿ ನಾನೂ ಒಬ್ಬ ಎಂಬುದನ್ನು ದಯವಿಟ್ಟು ಅರ್ಥಮಾಡಿಕೊಳ್ಳಿ, ನನ್ನ ಮೇಲೆ ದ್ವೇಷ ಏಕೆ? ಎಂದು ಭಾವುಕರಾದರು.

ADVERTISEMENT

ಶಕುನಿ, ಮಂಥರೆ ಹೇಳಿಕೆಗೆ ತಿರುಗೇಟು: ‘ಶಕುನಿ’ ಮಾತಿನಿಂದ ಜೆಡಿಎಸ್‌ ನಾಶ ಎಂಬ ಜಿ.ಟಿ.ದೇವೇಗೌಡ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಶಕುನಿ ಇಲ್ಲದಿದ್ದರೆ ಮಹಾಭಾರತ ನಡೀತಿತ್ತಾ? ದುಷ್ಟಶಕ್ತಿಗಳ ನಿರ್ನಾಮ ಆಗುತ್ತಿತ್ತಾ? ಮಂಥರೆ ಇಲ್ಲದಿದ್ದರೆ ರಾಮಾಯಣ ನಡೀತಿತ್ತಾ? ಶಬರಿ ಶಾಪ ವಿಮೋಚನೆ ಆಗುತ್ತಿತ್ತಾ? ರಾವಣನ ಸಂಹಾರ, ರಾಮರಾಜ್ಯ ಸ್ಥಾಪನೆ ಆಗುತ್ತಿತ್ತಾ? ಎಂದು ತಿರುಗೇಟು ನೀಡಿದರು.

‘ಪದೇ ಪದೇ ನಮ್ಮ ವಿರುದ್ಧ ಮಾತನಾಡಿದರೆ ಎಷ್ಟು ಅಂತ ಸಹಿಸೋದು? ನನಗೂ ರಾಜಕಾರಣ ಬೇಸರ ಆಗಿದೆ. ಈ ಜಿಲ್ಲೆಯಲ್ಲಿ ಪಕ್ಷವನ್ನು ಉಳಿಸಿಬೇಕು ಎಂದು ಹೋರಾಟ ಮಾಡುತ್ತಿದ್ದೇವೆ. ನನ್ನಿಂದ ತ‍ಪ್ಪು ಆಗಿದ್ದರೆ ಈ ಅವಧಿ ಮುಗಿದ ಕೂಡಲೇ ರಾಜಕೀಯ ಮತ್ತು ಸಾರ್ವಜನಿಕ ಜೀವದಿಂದ ನಿವೃತ್ತಿಯಾಗುತ್ತೇನೆ’ ಎಂದರು.

ಆಲದ ಮರಕ್ಕೆ ಕುಮಾರಣ್ಣ ನೀರು ಹಾಕಿದ್ದಾರೆ: ‘ನಾನು 50 ವರ್ಷಗಳಿಂದ ಸಹಕಾರಿ ಕ್ಷೇತ್ರದಲ್ಲಿ ಇದ್ದು, ಆಲದ ಮರ ಆಗಿ ಬೆಳೆದಿದ್ದೇನೆ, ಕಡಿಯಲು ಆಗಲ್ಲ’ ಎಂದು ಎಂದು ನೀವೇ ಹೇಳಿದ್ದೀರಿ. ಆಲದ ಮರ ಕಡಿಯುತ್ತೇವೆ ಎಂದು ನಾವು ಎಲ್ಲೂ ಹೇಳಿಲ್ಲ. ಆದರೆ ನೀವು ಆಲದ ಮರವಾಗಿ ಬೆಳೆಯಲು ಎಚ್‌.ಡಿ.ದೇವೇಗೌಡ, ಕುಮಾರಸ್ವಾಮಿ ಮತ್ತು ಇತರ ಅನೇಕ ಮುಖಂಡರು ನೀರು ಹಾಕಿದ್ದಾರೆ ಎಂದರು.

‘ಆಲದ ಮರ ತನ್ನ ಬೇರನ್ನು ಮಾತ್ರ ಆಳವಾಗಿ ಬಿಟ್ಟು ಬೇರೆ ಯಾವುದೇ ಸಸಿಗಳನ್ನು ಬೆಳೆಯಲು ಬಿಡುವುದಿಲ್ಲ. ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಒಕ್ಕೂಟದ (ಮೈಮುಲ್) ಚುನಾವಣೆಯಲ್ಲಿ ಇದೇ ಕಾರಣದಿಂದ ನಾವು ಅಭ್ಯರ್ಥಿಗಳನ್ನು ಹಾಕಿದ್ದೆವು. ಸಮಾಜಕ್ಕೆ ನೆರಳು ನೀಡುವಂತಹ ಸಸಿಗಳನ್ನು ನೆಡುವ ಕೆಲಸವನ್ನು ಕುಮಾರಣ್ಣ ಅವರ ನೇತೃತ್ವದಲ್ಲಿ ಸಾಂಕೇತಿಕವಾಗಿ ಮಾಡಿದ್ದೇವೆ ಅಷ್ಟೆ’ ಎಂದು ಹೇಳಿದರು.

‘ಮೈಮುಲ್‌ ಚುನಾವಣೆಯಲ್ಲಿ ನಾವು ಅಭ್ಯರ್ಥಿಗಳನ್ನು ಹಾಕದೇ ಇದ್ದರೆ ಅವಿರೋಧ ಆಯ್ಕೆ ನಡೆಯುತ್ತಿತ್ತು. ಆದರೆ ನಾವು ಕಣಕ್ಕಿಳಿದ ಕಾರಣ 15 ರಲ್ಲಿ ಮೂರು ಸ್ಥಾನಗಳು ಲಭಿಸಿವೆ. ಈ ಫಲಿತಾಂಶ ಸಮಾಧಾನ ನೀಡಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.