ADVERTISEMENT

ಜೀವದ ಜೊತೆ ಚೆಲ್ಲಾಟ ಸರಿಯಲ್ಲ; ಜ.1ರಿಂದ ಶಾಲೆ ಆರಂಭ ಬೇಡ: ವಿಶ್ವನಾಥ್

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2020, 8:08 IST
Last Updated 24 ಡಿಸೆಂಬರ್ 2020, 8:08 IST
ಎ.ಎಚ್.ವಿಶ್ವನಾಥ್
ಎ.ಎಚ್.ವಿಶ್ವನಾಥ್    

ಮೈಸೂರು: ಜೀವದ ಜೊತೆ ಚೆಲ್ಲಾಟ ಸರಿಯಲ್ಲ. ಮಕ್ಕಳು ಮನೆಯ ಆಸ್ತಿ. ಜನವರಿ ಒಂದರಿಂದ ಶಾಲೆ ಆರಂಭಿಸುವುದು ಬೇಡ. ಸಚಿವ ಸುರೇಶ್ ಕುಮಾರ್ ಹೇಳಿದ್ದು ಯಾವುದಾದಾರೂ ಒಂದು ಆಗಿದೆಯಾ? ಎಂದು ವಿಧಾನಪರಿಷತ್‌ ಬಿಜೆಪಿ ಸದಸ್ಯ ಎ.ಎಚ್.ವಿಶ್ವನಾಥ್ ಪ್ರಶ್ನಿಸಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪೋಷಕರು ಮತ್ತು ಮಕ್ಕಳನ್ನು ಆತಂಕಕ್ಕೀಡು ಮಾಡುವುದು ಸರಿಯಲ್ಲ. ಸಂಕ್ರಾಂತಿ ಹಬ್ಬ ಮುಗಿದ ಬಳಿಕ ಶಾಲೆ ಆರಂಭಿಸುವುದು ಸೂಕ್ತ’ ಎಂದು ಹೇಳಿದರು.

‘ಕೊರೊನಾ ವೈರಸ್‌ ಎರಡನೇ ಅಲೆಯ ಬಗ್ಗೆ ಜನರಲ್ಲಿ ಆತಂಕ ಇದೆ. ಯಾರೂ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ. ಹೀಗಾಗಿ ಜನವರಿ 1ರಿಂದ ಶಾಲೆ ಆರಂಭ ಬೇಡ. ಸಚಿವ ಸುರೇಶ್ ಕುಮಾರ್ ಅವರಿಗೆ ಆಡಿದ ಮಾತು ವಾಪಸ್ ಪಡೆಯುವ ಕಾಯಿಲೆ ಇದ್ದಂತೆ ಇದೆ’ ಎಂದು ವಿಶ್ವನಾಥ್ ವಾಗ್ದಾಳಿ ನಡೆಸಿದರು.

ADVERTISEMENT

ಸಿದ್ದರಾಮಯ್ಯ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ‘ಕೊಡವರು ಹಸುವನ್ನು ಪೂಜೆ ಮಾಡುತ್ತಾರೆ. ಕೊಡಗಿನವರು ಹಸು ಮಾಂಸ ತಿನ್ನುತ್ತಾರೆ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಕೊಡವರಿಗೆ ಅವಮಾನ ಮಾಡಿದ್ದಾರೆ. ಅವರ (ಸಿದ್ದರಾಮಯ್ಯ) ಹೇಳಿಕೆಗಳಲ್ಲಿ ಕಾಂಗ್ರೆಸ್ ಮುಗಿಸುವ ಹುನ್ನಾರ ಇದೆ’ ಎಂದರು.

ನೈಟ್ ಕರ್ಪ್ಯೂ ಕುರಿತು ಪ್ರತಿಕ್ರಿಯಿಸಿದ ಅವರು, ‘ನೈಟ್ ಕರ್ಪ್ಯೂ ಬಗ್ಗೆ ಜನಾಭಿಪ್ರಾಯ ಬರುತ್ತಿದೆ. ಸರ್ಕಾರದ ಪರವಾಗಿ ನಾನು ಸರಿಯಿದೆ ಅಂತಾ ಹೇಳಬಹುದು. ಆದರೆ, ನಾಡಿನ ಜನರು ಇದನ್ನು ಜೋಕ್ ರೀತಿ ತೆಗೆದುಕೊಂಡಿದ್ದಾರೆ. ನೈಟ್ ಕರ್ಪ್ಯೂ ವಿಚಾರದಲ್ಲಿ ಸರ್ಕಾರ ಪುನರ್ ವಿಮರ್ಶೆ ಮಾಡಬೇಕಿದೆ’ ಎಂದು ತಿಳಿಸಿದರು.

ನೈಟ್ ಕರ್ಪ್ಯೂನಿಂದ ಯಾವುದೇ ಪ್ರಯೋಜನವಿಲ್ಲ. ಸರ್ಕಾರ ಕೆಲ ತೀರ್ಮಾನಗಳನ್ನು ಯೋಚನೆ ಮಾಡಿ ತೆಗೆದುಕೊಳ್ಳಬೇಕು. ನಗೆಪಾಟಲಿಗೆ ಈಡಾಗಬಾರದು. ಇದನ್ನು ಯಾರೂ ಸ್ವಾಗತ ಮಾಡಿಲ್ಲ. ಎಲ್ಲರೂ ಮುಸಿ ಮುಸಿ ನಗುತ್ತಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.