ADVERTISEMENT

ಜನರ ದುಡಿಯುವ, ಬದುಕುವ ಹಕ್ಕು ಕಸಿದುಕೊಳ್ಳುತ್ತಿರುವ ಕೇಂದ್ರ ಸರ್ಕಾರ: ಮಹದೇವಪ್ಪ

​ಪ್ರಜಾವಾಣಿ ವಾರ್ತೆ
Published 19 ಜನವರಿ 2026, 16:16 IST
Last Updated 19 ಜನವರಿ 2026, 16:16 IST
   

ಮೈಸೂರು: ‘ಕೇಂದ್ರ ಸರ್ಕಾರವು ಜನರ ದುಡಿಯುವ ಹಾಗೂ ಬದುಕುವ ಹಕ್ಕನ್ನು ಕಸಿದುಕೊಳ್ಳುತ್ತಿದೆ. ಮನರೇಗಾ ಕಾಯ್ದೆಯನ್ನು ನಾಶಪಡಿಸಿ ಹೊಸದಾಗಿ ಕಾನೂನು ಜಾರಿಗೊಳಿಸಿ, ಬಡವರ ಅನ್ನಕ್ಕೆ ಕುತ್ತು ತಂದಿದೆ’ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ವಾಗ್ದಾಳಿ ನಡೆಸಿದರು.

ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಸೋಮವಾರ ನಡೆದ ‘ನರೇಗಾ ಬಚಾವ್ ಸಂಗ್ರಾಮ್’ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ‘ಮಹಾತ್ಮ ಗಾಂಧೀಜಿ ಅವರ ಹೆಸರನ್ನು ತಗೆದು ಹಾಕುವ ಮೂಲಕ, ದುಡಿಯುವ ಕೈಗಳಿಂದ ಕೆಲಸ ಕಿತ್ತುಕೊಳ್ಳುವ ಹುನ್ನಾರವನ್ನು ನಡೆಸಿದೆ. ಇದರ ವಿರುದ್ಧ ಚಳವಳಿಯನ್ನು ತೀವ್ರವಾಗಿಯೇ ನಡೆಸಬೇಕಾಗಿದೆ’ ಎಂದರು.

‘ಕೆಲಸ ಬೇಕು ಎನ್ನುವವರಿಗೆ ಕೆಲಸ ಕೊಡಬೇಕು. ಅದನ್ನು ಬಿಟ್ಟು ಕೊಟ್ಟಾಗ ಕೆಲಸ ಮಾಡಿ ಎನ್ನುವುದು ಸರಿಯಲ್ಲ. ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದಲ್ಲಿ ದುಡಿಯುವುದನ್ನು ಹಕ್ಕಾಗಿ ಕೊಟ್ಟಿದ್ದಾರೆ. ಆದರೆ, ಇಂದು ಆ ಹಕ್ಕಿಗೆ ಚ್ಯುತಿ ಬರುವಂತೆ ಕೇಂದ್ರ ಸರ್ಕಾರ ಕಾರ್ಯನಿರ್ವಹಿಸುತ್ತಿದೆ’ ಎಂದು ಆರೋಪಿಸಿದರು.

ADVERTISEMENT

‘2005ರಲ್ಲಿ ಯುಪಿಎ ಸರ್ಕಾರವಿದ್ದಾಗ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಮ–ನರೇಗಾ ಜಾರಿಗೊಳಿಸಿದ್ದರು. ಗ್ರಾಮೀಣ ಜನರಿಗೆ ವಿಶೇಷವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು, ಮಹಿಳೆಯರು, ಹಿಂದುಳಿದವರು, ಸಣ್ಣ ಮತ್ತು ಅತಿ ಸಣ್ಣ ರೈತರು, ಅಲ್ಪಸಂಖ್ಯಾತರಿಗೆ ಉದ್ಯೋಗದ ಖಾತ್ರಿ ಕೊಡುವುದಕ್ಕೆ ತಂದತಹ ಕ್ರಾಂತಿಕಾರ ಕಾಯ್ದೆ ಅದಾಗಿತ್ತು. ಅದನ್ನು ಈಗಿನ ಬಿಜೆಪಿ ಸರ್ಕಾರ ಸಂಪೂರ್ಣವಾಗಿ ನಾಶಪಡಿಸಿ ಅವರಿಗೆ ಬೇಕಾದ ರೀತಿಯಲ್ಲಿ ಕಾನೂನನ್ನು ತರಾತುರಿಯಲ್ಲಿ ತಂದಿದ್ದಾರೆ. ಇದರಿಂದ ಬಡವರಿಗೆ ತೀವ್ರ ತೊಂದರೆ ಆಗಿದೆ’ ಎಂದು ತಿಳಿಸಿದರು.

‘ಮನರೇಗಾಕ್ಕೆ ಕೇಂದ್ರ ಸರ್ಕಾರವೇ ಶೇ 100ರಷ್ಟು ಹಣ ಕೊಡುತ್ತಿತ್ತು. ಈಗ ಶೇ 60ರಷ್ಟು ಮಾತ್ರವೇ ಕೊಡುತ್ತದೆ. ಉಳಿದುದನ್ನು ಸರ್ಕಾರ ಭರಿಸಬೇಕಾಗಿದೆ. ಇದರಿಂದ ಹೊರೆಯಾಗುತ್ತದೆ. ರಾಜ್ಯ ಸರ್ಕಾರಗಳ ಜೊತೆ ಚರ್ಚಿಸಿದೇ ಈ ಕ್ರಮ ಕೈಗೊಂಡಿದೆ. ಅಲ್ಲದೇ, ಕೆಲಸ ತೆಗೆದುಕೊಳ್ಳುವುದನ್ನು ನಿರ್ಧರಿಸುವುದು ಸ್ಥಳೀಯ ಸಂಸ್ಥೆಗೆ ಸಾಧ್ಯವಾಗದಂತೆ ಮಾಡಲಾಗಿದೆ. ಎಲ್ಲ ನಿಯಂತ್ರಣವನ್ನೂ ಕೇಂದ್ರವೇ ಇಟ್ಟುಕೊಂಡಿದೆ. ಹೀಗಾಗಿ ವಿಬಿ–ಜಿರಾಮ್‌ಜಿ ಕಾಯ್ದೆಯನ್ನು ವಿರೋಧಿಸುತ್ತಿದ್ದೇವೆ’ ಎಂದರು.

ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್.ಉಗ್ರಪ್ಪ, ಕಾಂಗ್ರೆಸ್ ನಗರ ಜಿಲ್ಲಾ ಸಮಿತಿಯ ಅಧ್ಯಕ್ಷ ಆರ್.ಮೂರ್ತಿ, ಗ್ರಾಮಾಂತರ ಜಿಲ್ಲಾ ಸಮಿತಿಯ ಅಧ್ಯಕ್ಷ ಬಿ.ಜೆ.ವಿಜಯ್‌ಕುಮಾರ್, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಕೆಪಿಸಿಸಿ ವಕ್ತಾರ ಎಚ್‌.ಎ. ವೆಂಕಟೇಶ್, ಮುಖಂಡ ಜಿ.ಎನ್.ನಂಜುಂಡಸ್ವಾಮಿ ಮೊದಲಾದವರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.