ತಿ.ನರಸೀಪುರ: ಇಲ್ಲಿನ ಸೋಸಲೆ ವ್ಯಾಸರಾಜ ಮಠದ ವತಿಯಿಂದ ಸಾರ್ವಜನಿಕ ಸೇವೆಗೆ ವ್ಯಾಸಶ್ರೀಶ ಸೇವಾ ಉಚಿತ ಸಂಚಾರಿ ಚಿಕಿತ್ಸಾಲಯಕ್ಕೆ ಸೋಮವಾರ ಚಾಲನೆ ನೀಡಿದ್ದು, ತಿರುಮಕೂಡಲಿನಿಂದ ಕಾರ್ಯ ಆರಂಭಿಸಿತು.
ಮಠದ ಮುಖಂಡರಾದ ರಾಯರಹುಂಡಿ ಆನಂದ್ ಚಾಲನೆ ನೀಡಿ ಮಾತನಾಡಿ, ‘ಪ್ರತಿನಿತ್ಯ ಸಂಚಾರಿ ಚಿಕಿತ್ಸಾಲಯ ವ್ಯವಸ್ಥೆ ಇದ್ದು, ಬೆಳಿಗ್ಗೆ 10ರಿಂದ 11ರವರೆಗೆ ತಿರುಮಕೂಡಲಿನಲ್ಲಿ ಇರುತ್ತದೆ. ಅಗತ್ಯವಿರುವವರಿಗೆ ತುರ್ತು ಚಿಕಿತ್ಸೆ ಸೌಲಭ್ಯ ನೀಡಲಿದೆ. ಸೋಮವಾರ ಹಾಗೂ ಗುರುವಾರ ಬಿಲಿಗೆರೆಹುಂಡಿ, ಡಣಾಯಕನಪುರ, ಮಂಗಳವಾರ ಹಾಗೂ ಶುಕ್ರವಾರ ಮುಸುವಿನಕೊಪ್ಪಲು ಹಾಗೂ ಕೆಬ್ಬೆಹುಂಡಿ ಗ್ರಾಮಗಳು, ಬುಧವಾರ ಮುಡುಕನಪುರ ಉಕ್ಕಲಗೆರೆ ಗ್ರಾಮಗಳಿಗೆ ತೆರಳಿ ಚಿಕಿತ್ಸೆ ನೀಡಲಿದೆ’ ಎಂದರು.
‘ಜನರ ಆರೋಗ್ಯದ ದೃಷ್ಟಿಯಿಂದ ಗ್ರಾಮಗಳಿಗೆ ತೆರಳಿ ಔಷಧ ಹಾಗೂ ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗುತ್ತದೆ. ಜನರಿಂದ ಮೊದಲ ಬಾರಿಗೆ ₹10, ಎರಡನೇ ಬಾರಿಗೆ ₹5 ಮಾತ್ರ ಸಂಗ್ರಹಿಸಲಾಗುವುದು’ ಎಂದು ಹೇಳಿದರು.
‘ಮಠದ ವಿದ್ಯಾಶ್ರೀಶ ತೀರ್ಥ ಪಾದಂಗಳವರು ಮೈಸೂರಿನಲ್ಲಿ ಸಂಚಾರಿ ಚಿಕಿತ್ಸಾಲಯಕ್ಕೆ ಚಾಲನೆ ನೀಡಿದ್ದಾರೆ. ಮಠವು ಜೆಎಸ್ಎಸ್ ಆಸ್ಪತ್ರೆ ಹಾಗೂ ಜಯದೇವ ಆಸ್ಪತ್ರೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಹೆಚ್ಚಿನ ಚಿಕಿತ್ಸೆಗೆ ನಮ್ಮ ಶಿಫಾರಸು ಪಡೆದು ಹೋದರೆ ಚಿಕಿತ್ಸೆಯಲ್ಲಿ ರಿಯಾಯಿತಿ ದೊರೆಯಲಿದೆ’ ಎಂದು ತಿಳಿಸಿದರು.
ಮುಖಂಡ ಪಿ. ಸ್ವಾಮಿನಾಥ್ ಗೌಡ ಮಾತನಾಡಿ,‘ಗ್ರಾಮೀಣ ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಗ್ರಾಮಗಳಿಗೆ ತೆರಳಿ ಸೇವೆ ನೀಡುತ್ತಿರುವ ಮಠದ ಕಾರ್ಯ ಶ್ಲಾಘನೀಯ. ಜನರು ಚಿಕಿತ್ಸೆಗಾಗಿ ಅಲೆಯುವುದನ್ನು ಬಿಟ್ಟು ನಿಮ್ಮ ಬಳಿ ಬರುವ ಸಂಚಾರಿ ಚಿಕಿತ್ಸಾಲಯದ ಪ್ರಯೋಜನ ಪಡೆಯಿರಿ’ ಎಂದರು.
ಪುರಸಭಾ ನಾಮ ನಿರ್ದೇಶನ ಸದಸ್ಯ ತಿರುಮಕೂಡಲು ಚೇತನ್, ನಾಗಣ್ಣ ಹಾಗೂ ಗ್ರಾಮದ ಮುಖಂಡರು ಹಾಜರಿದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.