ADVERTISEMENT

ಪ್ರಧಾನಿ ಮೋದಿ ಕ್ಷಮೆಗೆ ಆಗ್ರಹ

ಚಳಿಗಾಲದ ಅಧಿವೇಶನದ ವೇಳೆ ಬೆಂಗಳೂರಿನಲ್ಲಿ ಪ್ರತಿಭಟನೆ: ನಾಗೇಂದ್ರ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2020, 2:12 IST
Last Updated 2 ಡಿಸೆಂಬರ್ 2020, 2:12 IST
ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಮಂಗಳವಾರ ನಡೆದ ರೈತ, ಕಾರ್ಮಿಕ, ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ಪ್ರತಿಭಟನೆ ವೇಳೆ ಹೋರಾಟಗಾರ ಪ.ಮಲ್ಲೇಶ್ ಮಾತನಾಡಿದರು
ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಮಂಗಳವಾರ ನಡೆದ ರೈತ, ಕಾರ್ಮಿಕ, ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ಪ್ರತಿಭಟನೆ ವೇಳೆ ಹೋರಾಟಗಾರ ಪ.ಮಲ್ಲೇಶ್ ಮಾತನಾಡಿದರು   

ಮೈಸೂರು: ‘ದಿಲ್ಲಿ ಚಲೊ’ ಪ್ರತಿಭಟನೆ ವೇಳೆ ರೈತರ ಮೇಲೆ ಜಲಫಿರಂಗಿ ಹಾಗೂ ಅಶ್ರುವಾಯು ಪ್ರಯೋಗಿಸಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಕೂಡಲೇ ಕ್ಷಮೆ ಯಾಚಿಸಬೇಕು. ರೈತರ ಬೇಡಿಕೆ ಗಳನ್ನು ಈಡೇರಿಸಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಒತ್ತಾಯಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಮಂಗಳವಾರ ನಡೆದ ರೈತ, ಕಾರ್ಮಿಕ, ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ಪ್ರತಿಭಟನೆ ವೇಳೆ ಅವರು ಮಾತನಾಡಿದರು.

ಭೂಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆಗೆ ತಂದಿರುವ ತಿದ್ದುಪಡಿಗಳನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿ ಮುಂಬರುವ ಚಳಿಗಾಲದ ಅಧಿವೇಶನದ ವೇಳೆ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಸರ್ಕಾರ ಇದಕ್ಕೂ ಬಗ್ಗದಿದ್ದರೆ ಪಂಜಾಬ್ ರೈತರ ಮಾದರಿಯ ಪ್ರತಿಭಟನೆಗೆ ಚಿಂತಿಸಲಾಗುವುದು ಎಂದು ಹೇಳಿದರು.

ADVERTISEMENT

ಪ್ರಧಾನಿ ಮೋದಿ ಅವರು ರೈತರ ಕ್ಷಮೆ ಕೇಳುವುದರೊಂದಿಗೆಕೃಷಿ ವಿರೋಧಿ ಕಾಯ್ದೆಗಳನ್ನು ಹಿಂಪಡೆಯ ಬೇಕು. ಸಾಲಮನ್ನಾ, ಬಡ್ಡಿಮನ್ನಾ ಸೇರಿದಂತೆ ಋಣಮುಕ್ತ ಕಾಯ್ದೆಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಹೋರಾಟಗಾರ ಪ.ಮಲ್ಲೇಶ್ ಮಾತನಾಡಿ, ‘ಉತ್ತರ ಭಾರತದಲ್ಲಿ ನಡೆಯುತ್ತಿರುವ ಹೋರಾಟದ ಮಾದರಿ ಯಲ್ಲಿಯೇ ರಾಜ್ಯದಲ್ಲೂ ರೈತರು ಹೋರಾಟ ನಡೆಸಬೇಕು’ ಎಂದು ಸಲಹೆ ನೀಡಿದರು.

ಮುಖ್ಯಮಂತ್ರಿ, ಸಚಿವರು, ಶಾಸಕರು, ಸಂಸದರಿಗೆ ಘೇರಾವ್ ಹಾಕಬೇಕು. ಜೈಲ್‌ ಭರೋ ಚಳವಳಿ ನಡೆಸಬೇಕು ಎಂದು ಕರೆ ನೀಡಿದರು.

ಮುಖಂಡರಾದ ಹೊಸಕೋಟೆ ಬಸವರಾಜ್, ಮರಂಕಯ್ಯ, ಸ್ವರಾಜ್ ಇಂಡಿಯಾದ ಉಗ್ರ ನರಸಿಂಹೇಗೌಡ, ಪುರುಷೋತ್ತಮ್, ಚಂದ್ರಶೇಖರ್ ಮೇಟಿ, ಪುನೀತ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.