ADVERTISEMENT

ಮೋದಿ ಯುಗ ಉತ್ಸವ: ಸಮರ್ಥ ನಾಯಕತ್ವದಿಂದ ದೇಶ ಬಲಿಷ್ಠ- ವಿಜಯೇಂದ್ರ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2022, 13:08 IST
Last Updated 21 ಸೆಪ್ಟೆಂಬರ್ 2022, 13:08 IST
ಮೋದಿ ಯುಗ ಉತ್ಸವ
ಮೋದಿ ಯುಗ ಉತ್ಸವ   

ಮೈಸೂರು: ‘ಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವದಿಂದಾಗಿ ದೇಶವು ಬಲಿಷ್ಠವಾಗಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನದ ಅಂಗವಾಗಿ ವಿದ್ಯಾರಣ್ಯಪುರಂನ ರಾಮಲಿಂಗೇಶ್ವರ ಉದ್ಯಾನದಲ್ಲಿ ಶಾಸಕ ಎಸ್.ಎ.ರಾಮದಾಸ್ ನೇತೃತ್ವದಲ್ಲಿ ಆಯೋಜಿಸಿರುವ ‘ಮೋದಿ ಯುಗ ಉತ್ಸವ’ದ 5ನೇ ದಿನದ ಕಾರ್ಯಕ್ರಮದಲ್ಲಿ ‘ಸರ್ವರಿಗೂ ಆರೋಗ್ಯ–ಮೇಳ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಹಿಂದೆ, ವಿದೇಶಗಳಲ್ಲಿ ಭಾರತೀಯರೆಂದರೆ ಯಾರೂ ಗೌರವ ಕೊಡುತ್ತಿರಲಿಲ್ಲ. ಮೋದಿ ಬಂದ ಬಳಿಕ ಪ್ರತಿಯೊಬ್ಬರೂ ತಲೆ ಎತ್ತಿ ಓಡಾಡುವಂತೆ ಮಾಡಿದ್ದಾರೆ’ ಎಂದರು.

ADVERTISEMENT

ಸೇವೆಯೊಂದಿಗೆ ಸಂಘಟನೆ

‘ಬಿಜೆಪಿಯು ರಾಜಕೀಯಕ್ಕೆ ಅಥವಾ ಪ್ರಚಾರಕ್ಕೆ ಸೀಮಿತವಾಗಿರದೇ ಸೇವೆಯ ಮೂಲಕ ಸಂಘಟನೆಯಲ್ಲಿ ತೊಡಗಿದೆ. ಇದಕ್ಕೆ ಪೂರಕವಾಗಿ ರಾಮದಾಸ್ 9 ದಿನಗಳವರೆಗೆ ಉತ್ಸವ ಆಯೋಜಿಸಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಸೌಲಭ್ಯ ದೊರಕಿಸಿಕೊಡುತ್ತಿರುವುದು ಶ್ಲಾಘನೀಯ’ ಎಂದು ಹೇಳಿದರು.

‘ಸಾಮಾನ್ಯ ಜನರಿಗೆ ರಾಜಕಾರಣಿಗಳ ಬಗ್ಗೆ ಒಳ್ಳೆಯ ಅಭಿಪ್ರಾಯಗಳಿಲ್ಲ. ಶಾಸಕರು ಚುನಾವಣೆ ಬಂದಾಗ ಬರುತ್ತಾರೆ; ಇಲ್ಲದಿದ್ದರೆ ಬರುವುದಿಲ್ಲ ಎಂಬ ಭಾವನೆ ಇದೆ. ಇದನ್ನು ರಾಮದಾಸ್ ಸುಳ್ಳಾಗಿಸಿದ್ದಾರೆ. ಇದು ಮಾದರಿಯೂ ಆಗಿದೆ’ ಎಂದರು.

₹ 10 ಕೋಟಿ ವೆಚ್ಚದಲ್ಲಿ 11 ಸ್ಮಶಾನಗಳ ಅಭಿವೃದ್ಧಿ

ಶಾಸಕ ಎಸ್.ಎ.ರಾಮದಾಸ್ ಮಾತನಾಡಿ, ‘ಹಿರಿಯ ನಾಗರಿಕರಿಗೆ 5 ‘ಡೇ ಕೇರ್ ಸೆಂಟರ್’ಗಳನ್ನು ಆರಂಭಿಸಲಾಗುತ್ತಿದೆ. ಇದಕ್ಕೆ ಸೆ.25ರಂದು ಮುಖ್ಯಮಂತ್ರಿ ಉದ್ಘಾಟಿಸಲಿದ್ದಾರೆ. ಹಿರಿಯ ನಾಗರಿಕರಿಗೆ ಔಷಧ ಒದಗಿಸಲು ಮೊಬೈಲ್ ಘಟಕಕ್ಕೆ ಚಾಲನೆ ನೀಡಲಾಗಿದೆ. ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಒಂದೇ ನವಜಾತ ಶಿಸು ಮತ್ತು ಒಬ್ಬ ತಾಯಿಯೂ ಸಾವಿಗೀಡಾಗಬಾರದು ಎಂದು ಸಂಕಲ್ಪ ತೊಟ್ಟಿದ್ದೇವೆ’ ಎಂದು ತಿಳಿಸಿದರು.

‘ಕ್ಷೇತ್ರದ 11 ಸ್ಮಶಾನಗಳನ್ನು ₹ 10 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಮುಖ್ಯಮಂತ್ರಿ ಚಾಲನೆ ನೀಡಲಿದ್ದಾರೆ’ ಎಂದು ಪ್ರಕಟಿಸಿದರು.

ಆಯುಷ್ಮಾನ್ ಭಾರತ್ ಆರೋಗ್ಯ ಚೀಟಿಯನ್ನು ನಾಗರತ್ನಾ, ಜಯಂತಿ, ಗಂಗೂಬಾಯಿ, ಕರ್ನಾಟಕ ವೀರಶೈವ ಅಭಿವೃದ್ಧಿ ನಿಗಮದಡಿ ಸ್ವಯಂ ಉದ್ಯೋಗಕ್ಕಾಗಿ ಬಿ.ರೋಹಿತ್, ಎಸ್.ರಂಜಿತ್, ಚಂದನ, ಎಂ.ವಿ.ರೇಖಾ ಅವರಿಗೆ ಸಾಲ ಮಂಜೂರಾತಿ ಪತ್ರ ವಿತರಿಸಲಾಯಿತು. ಪ್ರಧಾನ ಮಂತ್ರಿ ಕ್ಷಯ ಮುಕ್ತ ಭಾರತ ಅಭಿಯಾನದಡಿ ಸಮುದಾಯದ ಸಹಭಾಗಿತ್ವದಡಿ ಟಿಬಿ ಕಾಯಿಲೆಗೆ ಒಳಗಾದವರಿಗೆ ಪೌಷ್ಟಿಕ ಆಹಾರದ ಕಿಟ್ ವಿತರಣೆಗೆ ಚಾಲನೆ ನೀಡಲಾಯಿತು.

ನಗರಪಾಲಿಕೆ ಸದಸ್ಯ ಮಾ.ವಿ.ರಾಮಪ್ರಸಾದ್, ಪಕ್ಷದ ಕೃಷ್ಣರಾಜ ಕ್ಷೇತ್ರದ ಅಧ್ಯಕ್ಷ ವಡಿವೇಲು, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಎಂ.ರಾಜೇಂದ್ರ, ಬಿಜೆಪಿ ಮುಖಂಡ ಎಚ್‌.ವಿ.ರಾಜೀವ್, ಮುಖಂಡರಾದ ಕಾನ್ಯ ಶಿವಮೂರ್ತಿ, ಎಂ.ಎ.ಚಂದ್ರಶೇಖರ, ವಿ.ಎ.ಶೇಖರ್, ಹೇಮಂತ್‌ಕುಮಾರ್‌ ಗೌಡ, ಮುಖಂಡರಾದ ಅರುಣ್‌ಕುಮಾರ್, ಎಲ್.ಆರ್.ಮಹದೇವಸ್ವಾಮಿ, ಅರುಣ್‌ಕುಮಾರ್‌, ಡಿಎಚ್‌ಒ ಡಾ.ಕೆ.ಎಚ್.ಪ್ರಸಾದ್ ಇದ್ದರು.

ನಾಗೇಂದ್ರ ಕುಮಾರ್ ಸ್ವಾಗತಿಸಿದರು. ಮಂಜುನಾಥ್ ನಿರೂಪಿಸಿದರು.

ಇದಕ್ಕೂ ಮುನ್ನ ವಿಜಯೇಂದ್ರ ಅವರನ್ನು ಚಾಮುಂಡಿಪುರಂ ವೃತ್ತದಿಂದ ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಕರೆತರಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.