ಮೈಸೂರು: ‘ಮೊಗಳ್ಳಿ ಗಣೇಶ ಅವರ ಬುಗುರಿ ಜಗತ್ತಿನ ಶ್ರೇಷ್ಠ ಕಥೆಯಲ್ಲೊಂದು. ಶತಮಾನಗಳಿಂದ ಎಲ್ಲ ಸಮುದಾಯಗಳಲ್ಲಿರುವ ಕ್ರೌರ್ಯಕ್ಕೆ ಬುಗುರಿಯು ಸಂಕೇತವಾಗಿದೆ’ ಎಂದು ವಿಮರ್ಶಕ ಪ್ರೊ.ಕೃಷ್ಣಮೂರ್ತಿ ಹನೂರು ಹೇಳಿದರು.
ರಂಗಾಯಣದ ಶ್ರೀರಂಗದಲ್ಲಿ ‘ಮೈಸೂರು ವಿವಿಧ ರಂಗಸಂಘಟನೆಗಳ ಒಕ್ಕೂಟ’ ಮತ್ತು ‘ಪ್ರೊ.ಮೊಗಳ್ಳಿ ಗಣೇಶ್ ಸಾಹಿತ್ಯಾಭಿಮಾನಿ ಬಳಗ’ ಹಾಗೂ ಮೈಸೂರು ವಿಶ್ವವಿದ್ಯಾಲಯದ ಜಾನಪದ ಅಧ್ಯಯನ ವಿಭಾಗವು ಮಂಗಳವಾರ ಆಯೋಜಿಸಿದ್ದ ಮೊಗಳ್ಳಿ ಗಣೇಶ್ ನುಡಿನಮನದಲ್ಲಿ ಮಾತನಾಡಿದರು.
‘ಹೊಲಸಿನಲ್ಲಿ ಬಿದ್ದ ಬುಗುರಿ, ಮತ್ತೆ ಕೈಗೆ ಬರುವುದೆಂಬ ಕನಸು ಕಾಣುವ ಬುಗುರಿ ಕಥೆಯ ಹುಡುಗನಂತೆ ಗಣೇಶ ಇದ್ದರು. ಆ ಕಲಾತ್ಮಕ ಕಥೆ ಬರೆದಾಗ ಅವರಿಗೆ 25 ವರ್ಷವಷ್ಟೇ. ಕ್ರೌರ್ಯ ನೋಡಿದ ಕಥೆಯಲ್ಲಿನ ಹುಡುಗ ‘ನಮ್ಮವ್ವನ ಹೊಟ್ಟೆ ಒಳಗೆ ಹೋಗಿ ಕುಳಿತುಕೊಳ್ಳಬೇಕು’ ಎನ್ನುತ್ತಾನೆ. ಇದೇ ಮಾತನ್ನು ಕುಮಾರವ್ಯಾಸನೂ ಹೇಳಿದ್ದ. ಮೊಗಳ್ಳಿ ಮತ್ತು ಕುಮಾರವ್ಯಾಸ ಇಬ್ಬರ ಪ್ರತಿಭೆಯೂ ಒಂದೇ ಆಗಿತ್ತು’ ಎಂದು ಬಣ್ಣಿಸಿದರು.
‘ಯುದ್ಧರಂಗದಲ್ಲಿ ಎಲ್ಲ ಸಾವು– ನೋವು, ಕ್ರೌರ್ಯವನ್ನು ನೋಡುತ್ತಾ ಅಡ್ಡಾಡುವ ಅಶಾಂತ ಸೈನಿಕನಂತೆ ಗಣೇಶ ಕಾಣುತ್ತಿದ್ದರು. ಎಲ್ಲವನ್ನು ಅಕ್ಷರ ರೂಪಕ್ಕೆ ಇಳಿಸುವ ಪ್ರತಿಭಾನ್ವಿತ ಕಥೆಗಾರನೂ ಆಗಿದ್ದರು’ ಎಂದು ಸ್ಮರಿಸಿದರು.
‘ದಮನಿತ ಸಮುದಾಯಗಳ ದನಿಯಾಗಿದ್ದ ಮೊಗಳ್ಳಿ ಮೇಲೆ ಲಂಕೇಶ್ ಅವರಿಗೆ ಅಗಾಧ ಪ್ರೀತಿ ಇತ್ತು. ಕಥೆಗಳಲ್ಲಿ ಪ್ರತಿ ಪದವು ಹೊರಡಿಸುವ ಧ್ವನಿಯಲ್ಲಿ ಒಳನೋಟ ಇರುತ್ತಿತ್ತು’ ಎಂದು ವಿಮರ್ಶಕ ಪ್ರೊ.ಕಾಳೇಗೌಡ ನಾಗವಾರ ಹೇಳಿದರು.
ರಂಗಕರ್ಮಿ ಸಿ.ಬಸವಲಿಂಗಯ್ಯ, ‘ಮೊಗಳ್ಳಿ ದಲಿತ ಅಸ್ಮಿತೆಯ ಪ್ರತೀಕ. ತಕರಾರಿನ ಜನಸಂಸ್ಕೃತಿಯ ಚಿಂತಕರಾಗಿದ್ದರು. ದಲಿತ ಜಾನಪದ ಲೋಕವನ್ನು ಸಾಹಿತ್ಯದಲ್ಲಿ ದಾಖಲಿಸಿದ್ದರು. ವ್ಯವಸ್ಥೆ ಬಗ್ಗೆ ಅಸಾಧ್ಯ ಸಿಟ್ಟು ಇತ್ತು. ಹೀಗಾಗಿ ಅವರ ಮೇಲೆ ವೈಯಕ್ತಿಕ ಅಸಹನೆ ಉಳ್ಳವರೂ, ನಾಜೂಕಯ್ಯಗಳು, ವೈರಿಗಳು ಇದ್ದರು’ ಎಂದರು.
ಸಂಬಂಧಿ ಧನಂಜಯ ಎಲಿಯೂರು, ಪ್ರಸಾರಾಂಗ ನಿರ್ದೇಶಕ ಪ್ರೊ.ನಂಜಯ್ಯ ಹೊಂಗನೂರು, ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು, ಪತ್ರಕರ್ತ ಜಿ.ಪಿ.ಬಸವರಾಜ್, ರವಿಕುಮಾರ್ ಬಾಗಿ, ಸ್ವಾಮಿ ಆನಂದ್, ಪ್ರೊ.ರಾಜಪ್ಪ ದಳವಾಯಿ ಮಾತನಾಡಿದರು. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕಿ ಪ್ರೊ.ಎನ್.ಕೆ.ಲೋಲಾಕ್ಷಿ ಪಾಲ್ಗೊಂಡಿದ್ದರು.
‘ಸುಲಭದಲ್ಲಿ ಅರ್ಥವಾಗದು’
‘ಮೊಗಳ್ಳಿ ಕಥೆಗಳಿಗೆ ಬೂಕರ್ ಪ್ರಶಸ್ತಿ ಬರುವುದಿಲ್ಲ. ಅನುವಾದ ಮಾಡಿದರೂ ಪಾಶ್ಚಾತ್ಯರಿಗೆ ಸುಲಭವಾಗಿ ಅರ್ಥವಾಗುವುದಿಲ್ಲ. ಇಂಗ್ಲಿಷ್‌ಗೆ ಕಥೆಗಳ ಸಂವೇದನೆಯನ್ನು ದಾಟಿಸಲು ಆಗದು’ ಎಂದು ಕೃಷ್ಣಮೂರ್ತಿ ಹನೂರು ಹೇಳಿದರು. ‘ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಸೇರಿದಂತೆ ಪ್ರಶಸ್ತಿಗಳು ಬರದಿರಲು ಸಾಹಿತ್ಯ ವಲಯದ ಗುಂಪುಗಾರಿಕೆ ಕಾರಣ. ಆ ತರಹದ ಕಥೆಗಾರ ಮತ್ತೆ ಸಿಗುವುದು ಕಷ್ಟ. ಸಹೋದರನಂತೆ ನನ್ನೊಂದಿಗೆ ಮಾತನಾಡುತ್ತಿದ್ದರು’ ಎಂದು ನೆನಪು ಮಾಡಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.