ಹುಣಸೂರು: ಆದಿವಾಸಿ ಸಮುದಾಯಕ್ಕೆ ಈಗಾಗಲೇ ಜಾರಿಯಲ್ಲಿರುವ ಅರಣ್ಯ ಹಕ್ಕುಗಳನ್ನು ಪರಿಪೂರ್ಣವಾಗಿ ಅನುಷ್ಠಾನಗೊಳಿಸಿ ಗಿರಿಜನರು ನೆಮ್ಮದಿಯಿಂದ ಬದುಕು ಕಟ್ಟಿಕೊಳ್ಳಲು ಅರಣ್ಯ ಇಲಾಖೆ ಸಹಕರಿಸಬೇಕು ಎಂದು ಬುಡಕಟ್ಟು ಕೃಷಿಕರ ಸಂಘ ಮತ್ತು ಆದಿವಾಸಿ ಮಹಿಳಾ ಸಂಘ ಆಗ್ರಹಿಸಿವೆ.
ತಾಲ್ಲೂಕಿನ ಚಂದನಗಿರಿ ಹಾಡಿಯಲ್ಲಿ ನಡೆದ ಸಮುದಾಯದ ಸಭೆಯಲ್ಲಿ ಅಧ್ಯಕ್ಷ ಜಯಪ್ಪ ಮಾತನಾಡಿ, ‘ಅರಣ್ಯ ಹಕ್ಕಿನ ಅರ್ಜಿಗಳನ್ನು ಮಾನ್ಯ ಮಾಡಿ ಗಿರಿಜನರಿಗೆ ಮೂಲ ಹಕ್ಕು ನೀಡಬೇಕು. ಆದಿವಾಸಿಗಳ ಸಾಂಪ್ರದಾಯಕ ಚಟುವಟಿಕೆಗೆ ಕಡಿವಾಣ ಹಾಕಿರುವ ಸರ್ಕಾರ ಗಿರಿಜನರನ್ನು ಬೋನಿನಲ್ಲಿ ಇಟ್ಟು ಸಾಕುತ್ತಿದೆ. ಭಾರತಕ್ಕೆ ಸ್ವಾತಂತ್ರ್ಯ ಬಂದಿದ್ದರೂ ಆದಿವಾಸಿ ಸಮುದಾಯಕ್ಕೆ ಸಿಕ್ಕಿಲ್ಲ. ನಮ್ಮ ಪೂರ್ವಿಕರ ಜಮ್ಮಾಗಳ ಭೇಟಿಗೂ ಅನುಮತಿ ಪಡೆಯಬೇಕಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾಡು ಪ್ರವೇಶ ಚಳವಳಿ:
‘ಆದಿವಾಸಿ ಗಿರಿಜನರ ಹಕ್ಕುಗಳನ್ನು ಈವರೆಗೂ ಮಾನ್ಯ ಮಾಡದೆ ನಮ್ಮ ಹಕ್ಕುಗಳಿಗೆ ಕಡಿವಾಣ ಹಾಕಿರುವ ಅರಣ್ಯ ಸಚಿವಾಲಯದ ಧೊರಣೆಯನ್ನು ಖಂಡಿಸಿ ಸೆಪ್ಟೆಂಬರ್ ತಿಂಗಳಲ್ಲಿ ಎಲ್ಲಾ ಹಾಡಿಗಳ ನಾಗರಿಕರು ತಮ್ಮ ಪಾರಂಪರಿಕ ಜಮ್ಮಾ ಕಾಡಿಗೆ ಪ್ರವೇಶಿಸುವ ಚಳವಳಿ ಹಮ್ಮಿಕೊಳ್ಳಲು ತೀರ್ಮಾನಿಸಿದೆ’ ಎಂದರು.
ಹೆಮ್ಮಿಗೆ ಗ್ರಾಮದ ಮುಖಂಡ ಹರ್ಷ ಮಾತನಾಡಿ, ‘ತಾಲ್ಲೂಕಿನಲ್ಲಿ ಆದಿವಾಸಿ ಸಮುದಾಯಕ್ಕೆ ಸೇರದವರಿಗೂ ಪರಿಶಿಷ್ಟ ಪಂಗಡ ಇಲಾಖೆಯಿಂದ ‘ಆದಿವಾಸಿ ಗಿರಿಜನ’ ದೃಢಿಕರಣ ಪತ್ರ ನೀಡುವ ಮೂಲಕ ನಿಜವಾದ ಆದಿವಾಸಿಗಳ ಹಕ್ಕುಗಳನ್ನು ಕಿತ್ತುಕೊಳ್ಳುವ ಹುನ್ನಾರ ನಡೆದಿದೆ. ತಾಲ್ಲೂಕಿನ ಅಲೆಮಾರಿ ಸಮುದಾಯ, ತಮಿಳು ಮೂಲದ ಚಿಕ್ಕಹುಣಸೂರು ಅಂಬೇಡ್ಕರ್ ಕಾಲೊನಿ ನಿವಾಸಿಗರು, ಕಟ್ಟೆಮಳಲವಾಡಿ ಹಾವಾಡಿಗ ಸಮುದಾಯ, ಬನ್ನಿಕುಪ್ಪೆ, ಮಂಗಳೂರು ಮಾಳ ಮತ್ತು ತೊಂಡಾಳು ಗ್ರಾಮದ ವಿವಿಧ ಸಮುದಾಯಕ್ಕೆ ಸೇರಿದವರನ್ನು ಆದಿವಾಸಿ ಸಮುದಾಯದ ಪಟ್ಟಿಗೆ ಸೇರಿಸಿದ್ದು, ಜಿಲ್ಲಾಧಿಕಾರಿಗಳು ಮರುಪರಿಶೀಲಿಸಿ ವಜಾಗೊಳಿಸಬೇಕು’ ಎಂದು ಆಗ್ರಹಿಸಿದರು.
ತಾಲ್ಲೂಕಿನ ಹನಗೋಡು ಹೋಬಳಿ ಭಾಗದ ಹಾಡಿಗಳಲ್ಲಿ ಮೂಲ ಸೌಲಭ್ಯಗಳ ಕೊರತೆ ಕಾಡುತ್ತಿದ್ದು, ಕುಡಿಯವ ನೀರು, ವಿದ್ಯುತ್, ಬೀದಿ ದೀಪಗಳ ದುರಸ್ತಿಗೊಳಿಸಬೇಕು ಎಂದು ಆಗ್ರಹಿಸಿದರು.
ಚಂದನಗಿರಿ ಪುಟ್ಟಯ್ಯ, ಪುಟ್ಟಮಾದಯ್ಯ, ಶೀಲಾ, ಸಣ್ಣಮ್ಮ, ತೆಕ್ಕಲಹಾಡಿ ಶಿವಣ್ಣ, ಬಿಲ್ಲೇನಹೊಸಹಳ್ಳಿ ಹಾಡಿಯ ಶಾಂತಿ, ಕಾನೂನು ಸೇವಾ ಆಯೋಗದ ಮಾಜಿ ಸದಸ್ಯ ವಿಠಲ್ ನಾಣಚ್ಚಿ, ಡೀಡ್ ಸಂಸ್ಥೆ ನಿರ್ದೇಶಕ ಶ್ರೀಕಾಂತ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.